ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಅಗ್ರಸ್ಥಾನದಲ್ಲಿ ಭಾರತ!
ಅಹಮದಾಬಾದ್: ಉದ್ಘಾಟನಾ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನ ಮೂರನೇ ದಿನದಂದು ಆತಿಥೇಯ ಭಾರತವು ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈವರೆಗೆ ಭಾರತವು 22 ಚಿನ್ನ, 5 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಗೆದ್ದು ಬೀಗಿದೆ.
ಟೂರ್ನಿಯಲ್ಲಿ ಭಾರತದ ರಿತು ಮೊಂಡಾಲ್ ಅವರು ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟುವಾಗಿ ಇತಿಹಾಸ ನಿರ್ಮಿಸಿದ್ದಾರೆ. ಉಳಿದಂತೆ ಅರ್ಜೆಂಟೀನಾದ ನಬಿಲಾ ಸೋಲ್ ಬಾರಾಜಾ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದು, ತಮ್ಮ ಎರಡನೇ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಪದಕ ಪಟ್ಟಿಯಲ್ಲಿ ಅರ್ಜೆಂಟೀನಾ ಎರಡು ಚಿನ್ನ ಮತ್ತು ಎರಡು ಬೆಳ್ಳಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಸಿಂಗಾಪುರ ಎರಡು ಚಿನ್ನ ಮತ್ತು ಎರಡು ಕಂಚಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ನೇಪಾಳವು ಒಂದು ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದೆ.
ಈ ಐತಿಹಾಸಿಕ ಚಾಂಪಿಯನ್‌ಶಿಪ್ ಯೋಗಾಸನವನ್ನು ಜಾಗತಿಕ ಕ್ರೀಡೆಯಾಗಿ ಪರಿವರ್ತಿಸುವ ಮತ್ತು ಒಲಿಂಪಿಕ್ ಮಾನ್ಯತೆಯನ್ನು ಪಡೆಯುವ ದಿಸೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಭಾರತವು 122 ಸದಸ್ಯರ ಬೃಹತ್ ತಂಡದೊಂದಿಗೆ ಈ ಟೂರ್ನಿಯಲ್ಲಿ ಭಾಗವಹಿಸಿದ್ದು, ವಿವಿಧ ಆರು ವಯೋಮಿತಿಯ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದೆ. ಈ ಕ್ರೀಡಾಕೂಟಕ್ಕೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಆಯುಷ್ ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರವು ಬೆಂಬಲ ನೀಡಿವೆ.
ಇಂದಿನ ಫಲಿತಾಂಶಗಳ ಪ್ರಕಾರ, ಸಾಂಪ್ರದಾಯಿಕ ಯೋಗಾಸನ ಸೀನಿಯರ್ ಸಿ ಮಹಿಳಾ ವಿಭಾಗದಲ್ಲಿ ಜಪಾನ್‌ನ ಮಿಯೊಕೊ ಕುಸುನೊಕಿ ಚಿನ್ನ ಗೆದ್ದರೆ, ಮಹುವಾ ಮೊಂಡಾಲ್ ಬೆಳ್ಳಿ ಪಡೆದಿದ್ದಾರೆ. ಫಾರ್ವರ್ಡ್ ಬೆಂಡ್ ವಿಭಾಗದಲ್ಲಿ ಭಾರತದ ದಿಲೀಪ್ ಕುಮಾರ್ ಮತ್ತು ನೇಪಾಳದ ದುರ್ಗಾ ಪಂತಾ ಚಿನ್ನದ ಪದಕ ಗೆದ್ದಿದ್ದಾರೆ. ಬ್ಯಾಕ್ ಬೆಂಡ್ ವಿಭಾಗದಲ್ಲಿ ಭಾರತದ ಬೀರೇಂದ್ರ ಯಾದವ್, ಅಮೆರಿಕದ ಕೆಮಿ ಬ್ಲೇಕ್ ಮತ್ತು ಭಾರತದ ಗಾಯತ್ರಿ ದೇವಿ ಚಿನ್ನದ ಸಾಧನೆ ಮಾಡಿದ್ದಾರೆ. ಇನ್ನು ಟ್ವಿಸ್ಟಿಂಗ್ ಬಾಡಿ ವಿಭಾಗದಲ್ಲಿ ಭಾರತದ ಅನುರಾಗ್ ಮಲಿಕ್, ಕುದುಮುಲ ವನಜಾ, ಇಂದರ್ಜೀತ್ ಹಾಗೂ ಅರ್ಜೆಂಟೀನಾದ ನಬಿಲಾ ಸೋಲ್ ಬಾರಾಜಾ ಅವರು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ.