Suryakumar Yadav  
ಕ್ರಿಕೆಟ್

" World Cup ಗೆಲ್ಲಿಸಿಕೊಡ್ತೀಯಾ ಛೋಟು?": ಜಿತೇಶ್ ಬದಲಿಗೆ ಇಶಾನ್ ಆಯ್ಕೆ ಹಿಂದಿದ್ದ ಸೀಕ್ರೆಟ್ ಬಿಚ್ಚಿಟ್ಟ ಸೂರ್ಯಕುಮಾರ್!

ನವದೆಹಲಿ: ಭಾರತ ತಂಡ ಇತ್ತೀಚೆಗೆ ಐಸಿಸಿ ಪುರುಷರ ಟಿ20 ವಿಶ್ವಕಪ್( World Cup) ಮುಡಿಗೇರಿಸಿಕೊಂಡ ಸಂಭ್ರಮದಲ್ಲಿದೆ. ಆದರೆ, ಟೂರ್ನಿ ಆರಂಭಕ್ಕೂ ಮುನ್ನ ತಂಡದ ಆಯ್ಕೆಯ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ವಿಶೇಷವಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದ ಜಿತೇಶ್ ಶರ್ಮಾ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದ್ದು ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ಈ ಕಠಿಣ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ನಾಯಕ ಸೂರ್ಯಕುಮಾರ್ ಯಾದವ್ ಈಗ ಬಹಿರಂಗಪಡಿಸಿದ್ದಾರೆ.
ಪಿಟಿಐ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಸೂರ್ಯಕುಮಾರ್, ಇಶಾನ್ ಕಿಶನ್ ಅವರ ಆಯ್ಕೆಯು ಕೇವಲ ಅಂಕಿ-ಅಂಶಗಳ ಮೇಲೆ ಆಧಾರಿತವಾಗಿರಲಿಲ್ಲ, ಅದು ತಮ್ಮ ಒಳಗಿನ ಧ್ವನಿ (Gut Feeling) ಆಗಿತ್ತು ಎಂದಿದ್ದಾರೆ.
"ಜಿತೇಶ್ ಶರ್ಮಾ ಕಳೆದ ಒಂದು ವರ್ಷದಿಂದ ತಂಡದ ಜೊತೆಗಿದ್ದರು, ಅವರಿಗೆ ಅವಕಾಶ ನೀಡದಿರುವುದು ಕಠಿಣವಾಗಿತ್ತು. ಆದರೆ ದೊಡ್ಡ ವೇದಿಕೆಯಲ್ಲಿ ನಮಗೆ ಒಬ್ಬ 'ಎಕ್ಸ್-ಫ್ಯಾಕ್ಟರ್' ಆಟಗಾರನ ಅಗತ್ಯವಿತ್ತು. ನಾನು ಇಶಾನ್‌ಗೆ ಫೋನ್ ಮಾಡಿ, 'ಛೋಟು, ವಿಶ್ವಕಪ್ ಗೆಲ್ಲಿಸಿಕೊಡ್ತೀಯಾ?' ಎಂದು ಕೇಳಿದೆ. ಅದಕ್ಕೆ ಇಶಾನ್, 'ನನ್ನ ಮೇಲೆ ಭರವಸೆ ಇಡ್ತೀರಾ?' ಎಂದು ಮರುಪ್ರಶ್ನಿಸಿದ. ನಾನು 'ಖಂಡಿತಾ' ಎಂದೆ. ಅಲ್ಲಿಂದ ಎಲ್ಲವೂ ಬದಲಾಯಿತು," ಎಂದು ಸೂರ್ಯಕುಮಾರ್ ಆ ಕ್ಷಣವನ್ನು ಸ್ಮರಿಸಿದ್ದಾರೆ.

ಟೂರ್ನಿಯಲ್ಲಿ ಅಬ್ಬರಿಸಿದ ಇಶಾನ್ ಕಿಶನ್

ನಾಯಕನ ನಂಬಿಕೆಯನ್ನು ಹುಸಿಗೊಳಿಸದ ಇಶಾನ್ ಕಿಶನ್, ಟೂರ್ನಿಯ 9 ಪಂದ್ಯಗಳಲ್ಲಿ 190ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ 317 ರನ್ ಸಿಡಿಸಿ ಮಿಂಚಿದರು. ಆರಂಭಿಕರಾಗಿ ಮತ್ತು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಕಿಶನ್ ಅವರ ಪಾಲು ದೊಡ್ಡದಿದೆ.
ಇಶಾನ್ ಕಿಶನ್ ಅವರೊಂದಿಗೆ ಸಂಜು ಸ್ಯಾಮ್ಸನ್ ಅವರ ಸೇರ್ಪಡೆಯೂ ತಂಡದ ಗತಿಯನ್ನು ಬದಲಿಸಿತು ಎಂದು ಸೂರ್ಯಕುಮಾರ್ ಹೇಳಿದ್ದಾರೆ. ಎದುರಾಳಿ ತಂಡದ ಆಫ್-ಸ್ಪಿನ್ನರ್‌ಗಳನ್ನು ಎದುರಿಸಲು ಸಂಜು ಅವರ ಆಗಮನ ಅನಿವಾರ್ಯವಾಗಿತ್ತು. ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ ತಲಾ 89 ರನ್ ಗಳಿಸಿದ ಸ್ಯಾಮ್ಸನ್, ಅಂತಿಮವಾಗಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಮುಡಿಗೇರಿಸಿಕೊಂಡರು.
ತಮ್ಮ ಬ್ಯಾಟಿಂಗ್ ಶೈಲಿಯ ಬಗ್ಗೆ ಮಾತನಾಡಿದ ಸೂರ್ಯಕುಮಾರ್, "ಟಿ20 ಕ್ರಿಕೆಟ್ ಅಂದರೆ 70-75 ಪ್ರತಿಶತ ಪ್ರತಿಕ್ರಿಯೆ-ಚಾಲಿತ (Reaction Driven) ಕ್ರೀಡೆ. ಉಳಿದದ್ದು ನಿಮ್ಮ ಸಹಜ ಪ್ರವೃತ್ತಿ. ಅಂದು ಮೈದಾನದಲ್ಲಿ ಪರಿಸ್ಥಿತಿ ಏನನ್ನು ಬೇಡುತ್ತದೆಯೋ ಅದಕ್ಕೆ ತಕ್ಕಂತೆ ಆಡುವುದೇ ಅಸಲಿ ಕ್ರಿಕೆಟ್," ಎಂದು ವಿವರಿಸಿದ್ದಾರೆ,(ಎಜೆನ್ಸೀಸ್​).