ನವದೆಹಲಿ: ಮಹಿಳಾ ಟಿ20 ವಿಶ್ವಕಪ್‌ನಲ್ಲಿ(Womens T20 WorldCup) ಭಾರತ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ 95 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ಸತತ ಎರಡನೇ ಗೆಲುವು ದಾಖಲಿಸಿದೆ. ಆದರೆ ಪಂದ್ಯದಲ್ಲಿ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ ಗಾಯಗೊಂಡಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ 200 ರನ್‌ಗಳ ಗಡಿ ದಾಟಿದ್ದು ಇದೇ ಮೊದಲ ಬಾರಿ.
ಭಾರತದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನಾ ಮತ್ತು ಶೆಫಾಲಿ ವರ್ಮಾ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಮಂಧಾನಾ 47 ಎಸೆತಗಳಲ್ಲಿ 74 ರನ್ ಗಳಿಸಿ ಮಿಂಚಿದರೆ, ಶೆಫಾಲಿ 38 ಎಸೆತಗಳಲ್ಲಿ 55 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 115 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು.
ನಂತರ ಜೆಮಿಮಾ ರೋಡ್ರಿಗಸ್ 19 ರನ್, ನಾಯಕಿ ಹರ್ಮನ್‌ಪ್ರೀತ್ ಕೌರ್ 12 ರನ್ ಗಳಿಸಿದರು. ಅಂತಿಮ ಹಂತದಲ್ಲಿ ರಿಚಾ ಘೋಷ್ ಅಜೇಯ 20 ರನ್ ಹಾಗೂ ದೀಪ್ತಿ ಶರ್ಮಾ ಕೇವಲ 2 ಎಸೆತಗಳಲ್ಲಿ 10 ರನ್ ಗಳಿಸಿ ತಂಡದ ಮೊತ್ತವನ್ನು 209ಕ್ಕೆ ತಲುಪಿಸಿದರು.
210 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿತು. ನಾಯಕಿ ಬಾಬೆಟ್ ಡಿ ಲೀಡೆ 28 ರನ್ ಹಾಗೂ ಹೀದರ್ ಸಿಗರ್ಸ್ 21 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾದರು.
ಭಾರತದ ಪರ ಶ್ರೇ ಚರಣಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಕಬಳಿಸಿದರು. ನಂದಿನಿ ಶರ್ಮಾ 2 ವಿಕೆಟ್ ಪಡೆದರೆ, ಶೆಫಾಲಿ ವರ್ಮಾ 3 ವಿಕೆಟ್ ಪಡೆದು ಬ್ಯಾಟ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದರು. ದೀಪ್ತಿ ಶರ್ಮಾ ಕೂಡ ಒಂದು ವಿಕೆಟ್ ಪಡೆದರು.
ನೆದರ್ಲೆಂಡ್ಸ್ ತಂಡ 17.3 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 95 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಆದರೆ ಪಂದ್ಯದಲ್ಲಿ ಶ್ರೇಯಾಂಕ ಪಾಟೀಲ್ ಫೀಲ್ಡಿಂಗ್ ವೇಳೆ ಕಾಲು ಮಡಚಿಕೊಂಡು ಗಾಯಗೊಂಡರು. ಅವರಿಗೆ ತಕ್ಷಣ ಚಿಕಿತ್ಸೆ ನೀಡಿ ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಕ್ಕೆ ಕರೆದೊಯ್ಯಲಾಯಿತು. ಅವರ ಗಾಯದ ಗಂಭೀರತೆ ಇನ್ನಷ್ಟೇ ತಿಳಿಯಬೇಕಿದ್ದು, ಮುಂದಿನ ಪಂದ್ಯಗಳಿಗೆ ಅವರು ಲಭ್ಯರಾಗುವ ಬಗ್ಗೆ ಕುತೂಹಲ ಮೂಡಿದೆ,(ಏಜೆನ್ಸೀಸ್).