ಮಹಿಳೆಯರ ಚುಟುಕು ಕ್ರಿಕೆಟ್ ಸಮರ
ಬರ್ಮಿಂಗ್‌ಹ್ಯಾಮ್ (ಎಜ್‌ಬಾಸ್ಟನ್): ವಿಶ್ವದೆಲ್ಲೆಡೆ ಫಿಫಾ ವಿಶ್ವಕಪ್ ಫುಟ್‌ಬಾಲ್ ಜ್ವರ ಆವರಿಸಿರುವ ನಡುವೆ ಮಹಿಳಾ ಕ್ರಿಕೆಟಿಗರ ಚುಟುಕು ಕ್ರಿಕೆಟ್ ಸಮರಕ್ಕೆ ವೇದಿಕೆ ಸಿದ್ಧಗೊಂಡಿದೆ. ‘ಕ್ರಿಕೆಟ್ ಜನಕ’ರ ನಾಡು ಇಂಗ್ಲೆಂಡ್ 17 ವರ್ಷಗಳ ನಂತರ ಆತಿಥ್ಯ ವಹಿಸಲಿದ್ದು, ಮಹಿಳೆಯರ ಜಾಗತಿಕ ಟಿ20 ಕ್ರಿಕೆಟ್ ಟೂರ್ನಿಯ 10ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಸೆಣಸಲಿವೆ. ನ್ಯೂಜಿಲೆಂಡ್ ತಂಡ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ. ಹರ್ಮಾನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಟಿ20 ಕ್ರಿಕೆಟ್‌ನಲ್ಲೂ ವಿಶ್ವ ಚಾಂಪಿಯನ್ ಪಟ್ಟವೇರುವ ತವಕದಲ್ಲಿದೆ
ಒಟ್ಟು 12 ತಂಡಗಳು ಸ್ಪರ್ಧಿಸುವ ಮೊದಲ ಮಹಿಳಾ ಟಿ20 ವಿಶ್ವಕಪ್ ಇದಾಗಿದ್ದು, 2014ರಿಂದ 2024ರವರೆಗೆ 10 ತಂಡಗಳು ಭಾಗವಹಿಸಿದ್ದವು. 2030ರಲ್ಲಿ ತಂಡಗಳ ಸಂಖ್ಯೆ 16ಕ್ಕೆ ಏರಿಕೆಯಾಗುವ ಸಾಧ್ಯತೆಗಳಿದ್ದು, 2009ರ ಉದ್ಘಾಟನಾ ಆವೃತ್ತಿಯಲ್ಲಿ 9 ತಂಡಗಳು ಆಡಿದ್ದವು. ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ (2010, 2012, 2014, 2018, 2020, 2023) ಟೂರ್ನಿಯ ಅತ್ಯಂತ ಯಶಸ್ವಿ ತಂಡ ಎನಿಸಿದ್ದು, ಇಂಗ್ಲೆಂಡ್ (2009), ವೆಸ್ಟ್ ಇಂಡೀಸ್ (2016), ನ್ಯೂಜಿಲೆಂಡ್ (2024) ತಲಾ ಒಮ್ಮೆ ಚಾಂಪಿಯನ್ ಆಗಿವೆ.
ದಕ್ಷಿಣ ಆಫ್ರಿಕಾ, ಭಾರತ ಈ ಬಾರಿಯ ಪ್ರಶಸ್ತಿ ಫೇವರಿಟ್ ಎನಿಸಿದರೂ, ಗುಂಪು ಹಂತದಲ್ಲೇ ನಿರ್ಗಮಿಸುವ ಭೀತಿಯನ್ನೂ ಹೊಂದಿವೆ. ಪಾಕಿಸ್ತಾನ, ಐರ್ಲೆಂಡ್, ಶ್ರೀಲಂಕಾ ಜತೆಗೆ ಈ ಬಾರಿಯ ಹೊಸ ತಂಡ ನೆದರ್ಲೆಂಡ್ ಅಚ್ಚರಿಯ ಫಲಿತಾಂಶ ಎದುರು ನೋಡುತ್ತಿವೆ. ಕಳೆದ ವರ್ಷ ತವರಿನಲ್ಲಿ ಏಕದಿನ ವಿಶ್ವಕಪ್ ಜಯಿಸುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿರುವ ಹರ್ಮಾನ್‌ಪ್ರೀತ್ ಪಡೆ ಚುಟುಕು ಕ್ರಿಕೆಟ್‌ನಲ್ಲೂ ಅಧಿಪತ್ಯ ಸ್ಥಾಪಿಸುವ ಅವಕಾಶ ಹೊಂದಿದೆ. ಸ್ಮತಿ ಮಂದನಾ, ಹರ್ಮಾನ್‌ಪ್ರೀತ್ ಕೌರ್, ದೀಪ್ತಿ ಶರ್ಮ ಪ್ರಮುಖ ಬಲ ಎನಿಸಿದ್ದು, ಇವರಿಬ್ಬರ ಜತೆಗೆ ಜೆಮೀಮಾ ರೋಡ್ರಿಗಸ್ ಆಟ ತಂಡದ ಭವಿಷ್ಯ ನಿರ್ಧರಿಸಲಿದೆ.
ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದ ಸ್ಮತಿ ಮಂದನಾ, ವರ್ಷದ ಆರಂಭದಲ್ಲಿ ಆರ್‌ಸಿಬಿ ತಂಡವನ್ನು ಡಬ್ಲುೃಪಿಎಲ್‌ನಲ್ಲಿ ಎರಡನೇ ಬಾರಿಗೆ ಚಾಂಪಿಯನ್‌ಪಟ್ಟಕ್ಕೇರಿಸಿದ್ದರು. ಜತೆಗೆ ಸೂಪರ್ ಲೀಗ್ ಮತ್ತು ಹಂಡ್ರೆಡ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಆಡಿದ ಅನುಭವವೂ ಹೊಂದಿದ್ದಾರೆ. ಶ್ರೇಯಾಂಕಾ ಪಾಟೀಲ್ ಈ ಬಾರಿಯೂ ತಂಡದಲ್ಲಿರುವ ಏಕೈಕ ಕನ್ನಡತಿ ಆಗಿದ್ದಾರೆ.
ಏಕದಿನ ವಿಶ್ವ ಚಾಂಪಿಯನ್ ಎಂಬ ಹಣೆಪಟ್ಟಿಯೊಂದಿಗೆ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದೆ. ಆದರೆ, ಗ್ರೂಪ್ ಆಫ್ ಡೆತ್ ಎನಿಸಿರುವ ಎ ಗುಂಪಿನಲ್ಲಿ ಸೆಮೀಸ್‌ಗೇರಲು ಭಾರತ, ಆಸ್ಟ್ರೇಲಿಯಾ, ದ.ಆಫ್ರಿಕಾ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಜತೆಗೆ ಪಾಕಿಸ್ತಾನ ಸಹ ಪೈಪೋಟಿ ನೀಡಬಲ್ಲದು. ಟೂರ್ನಿಗೆ ಮುನ್ನ ನಡೆದ ಟಿ20 ಸರಣಿಯಲ್ಲಿ 1-2ರಿಂದ ಇಂಗ್ಲೆಂಡ್ ಎದುರು ಭಾರತ ಸೋತಿರುವುದು ಹಿನ್ನಡೆ ಎನಿಸಿದೆ. 2020ರಲ್ಲಿ ರನ್ನರ್ ಅಪ್ ಆಗಿದ್ದು ಟೂರ್ನಿಯಲ್ಲಿ ಭಾರತದ ಇದುವರೆಗಿನ ಅತ್ಯುತ್ತಮ ಸಾಧನೆ. 2009, 2010, 2018, 2023ರಲ್ಲಿ ಸೆಮಿಫೈನಲ್ ಗೇರಿತ್ತು.
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ದಾಖಲೆಯ ಒಟ್ಟು ₹ 81.8 ಕೋಟಿ ಬಹುಮಾನ ಮೊತ್ತವನ್ನು ಘೋಷಿಸಿದೆ. ಇದು 2024ರ ಆವೃತ್ತಿಗಿಂತ ಶೇ.10 ಅಧಿಕ ಎನಿಸಿದೆ. ಚಾಂಪಿಯನ್ ತಂಡ ₹21.8 ಕೋಟಿ ಗಳಿಸಿದರೆ, ರನ್ನರ್ ಅಪ್ ₹10 ಕೋಟಿ ಪಡೆಯಲಿದ್ದಾರೆ. ಸೆಮಿಫೈನಲಿಸ್ಟ್‌ಗಳು ತಲಾ ₹ 6.29 ಕೋಟಿ ಗಳಿಸಲಿದ್ದಾರೆ. ಗುಂಪು ಪಂದ್ಯಗಳ ಪ್ರತಿ ಗೆಲುವಿಗೆ ₹29 ಲಕ್ಷ ಸಿಗಲಿದ್ದು, ಟೂರ್ನಿಯಲ್ಲಿರುವ ಎಲ್ಲ 12 ತಂಡಗಳು ಕನಿಷ್ಠ ₹ 2.31 ಕೋಟಿ ಜೇಬಿಗಿಳಿಸಿಕೊಳ್ಳಲಿವೆ.
ಹಿಂದಿನ ಆವೃತ್ತಿಯ ಒಟ್ಟು ಬಹುಮಾನ ಮೊತ್ತ 7.24 ಕೋಟಿ ರೂ.ಆಗಿತ್ತು. ಕಳೆದ ಆವೃತ್ತಿಯಿಂದ ಪುರುಷರು-ಮಹಿಳೆಯರಿಗೆ ಸಮಾನ ಬಹುಮಾನ ಮೊತ್ತ ನಿಯಮವನ್ನು ಐಸಿಸಿ ಜಾರಿಗೊಳಿಸಿದೆ.
ಎ: ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಪಾಕಿಸ್ತಾನ, ನೆದರ್ಲೆಂಡ್, ದಕ್ಷಿಣ ಆಫ್ರಿಕಾ
ಬಿ: ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಸ್ಕಾಟ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್
ಟೂರ್ನಿಯಲ್ಲಿ ಮೊದಲ ಬಾರಿಗೆ 12 ತಂಡಗಳು ಭಾಗವಹಿಸಲಿದ್ದು, ತಲಾ 6ರಂತೆ ಎ ಮತ್ತು ಬಿ ಗುಂಪುಗಳಾಗಿ ವಿಂಗಡಿಸಲಾಗಿದೆ. ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿವೆ.
ಲೀಗ್‌ನ 30 ಸಹಿತ ಸೆಮಿಫೈನಲ್, ಫೈನಲ್ ಸೇರಿ ಒಟ್ಟು 33 ಪಂದ್ಯಗಳು 24 ದಿನ, ಏಳು ತಾಣಗಳಲ್ಲಿ ನಿಗದಿಯಾಗಿವೆ. ಐತಿಹಾಸಿಕ್ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಿಗದಿಯಾಗಿದ್ದು, ಉಳಿದಂತೆ ಬರ್ಮಿಂಗ್ ಹ್ಯಾಮ್, ಮ್ಯಾಂಚೆಸ್ಟರ್, ಸೌಥ್ ಹ್ಯಾಂಪ್ಟನ್, ಲೀಡ್ಸ್, ಕೆನ್ನಿಂಗ್ಟನ್ ಓವಲ್‌ನಲ್ಲಿ ಪಂದ್ಯಗಳು ನಡೆಯಲಿವೆ.
7. ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಎಲ್ಲ 10 ಆವೃತ್ತಿಗಳಲ್ಲಿ ಆಡಿದ ಆಟಗಾರ್ತಿ ಹೆಗ್ಗಳಿಕೆ ಪಡೆಯಲು 7 ತಾರೆಯರು ಸಜ್ಜಾಗಿದ್ದಾರೆ. ಅವರೆಂದರೆ ಹರ್ಮಾನ್‌ಪ್ರೀತ್ ಕೌರ್ (ಭಾರತ), ಎಲ್ಲಿಸ್ ಪೆರ‌್ರಿ (ಆಸ್ಟ್ರೇಲಿಯಾ), ಸೋಫಿ ಡಿವೈನ್, ಸುಜಿ ಬೇಟ್ಸ್ (ನ್ಯೂಜಿಲೆಂಡ್), ಮಾರಿಜಾನ್ನೆ ಕಾಪ್ (ದ.ಆಫ್ರಿಕಾ), ಚಾಮರಿ ಅಟಪಟ್ಟು (ಶ್ರೀಲಂಕಾ), ಟೇಲರ್ (ವೆಸ್ಟ್ ಇಂಡೀಸ್).
ಜೂನ್.14 ಭಾರತ-ಪಾಕಿಸ್ತಾನ ಬರ್ಮಿಂಗ್‌ಹ್ಯಾಮ್
ಜೂ.17 ಭಾರತ-ನೆದರ್ಲೆಂಡ್ ಲೀಡ್ಸ್
ಜೂ.21 ಭಾರತ-ದ.ಆಫ್ರಿಕಾ ಮ್ಯಾಂಚೆಸ್ಟರ್
ಜೂ.25 ಭಾರತ-ಬಾಂಗ್ಲಾದೇಶ ಮ್ಯಾಂಚೆಸ್ಟರ್
ಜೂ.28 ಭಾರತ-ಆಸ್ಟ್ರೇಲಿಯಾ ಲಾರ್ಡ್ಸ್
ಎಲ್ಲ ಪಂದ್ಯಗಳ ಆರಂಭ: ರಾತ್ರಿ 7.00
ಜೂ.30 ಸೆಮಿಫೈನಲ್-1 ಲಂಡನ್ ರಾತ್ರಿ 7.00
ಜು.2 ಸೆಮಿಫೈನಲ್-2 ಲಂಡನ್ ರಾತ್ರಿ 11.00
ಜು.5 ಫೈನಲ್ ಲಾರ್ಡ್ಸ್ ರಾತ್ರಿ 7.00
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ , ಜಿಯೋಹಾಟ್‌ಸ್ಟಾರ್