ಇಂದು ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯ: ಭಾರತ ಹಾಗೂ ಪಾಕ್ ನಡುವೆ ಮತ್ತೆ ಟ್ರೋಫಿ ವಿವಾದ?
ದುಬೈ: ಏಳು ಬಾರಿಯ ಚಾಂಪಿಯನ್ ಭಾರತ ತಂಡ ಎಸಿಸಿ ಮಹಿಳೆಯರ ಏಷ್ಯಾಕಪ್ ಟಿ20 10ನೇ ಆವೃತ್ತಿಯ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ಎದುರು ಭಾನುವಾರ ಸೆಣಸಲಿದೆ. ಸತತ ಮೂರನೇ ಬಾರಿಗೆ ಉಭಯ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದು, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಕಳೆದ ಬಾರಿಯ ಸೋಲಿಗೆ ಮುಯ್ಯಿ ತೀರಿಸುವ ಮೂಲಕ ದಾಖಲೆಯ ಎಂಟನೇ ಸಲ ಟ್ರೋಫಿ ಗೆಲ್ಲುವ ತವಕದಲ್ಲಿದೆ.
ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಸ್ಪಿನ್ನರ್ ವರ್ಸಸ್ ಸ್ಪಿನ್ನರ್‌ಗಳ ಮುಖಾಮುಖಿ ಎನಿಸಲಿದೆ. ದೀಪ್ತಿ ಶರ್ಮ, ಶ್ರೀ ಚರಣಿ, ಪ್ರೇಮಾ ರಾವತ್ ಒಳಗೊಂಡ ಭಾರತೀಯ ಸ್ಪಿನ್ನರ್‌ಗಳು ಇದುವರೆಗೆ ಟೂರ್ನಿಯಲ್ಲಿ 26 ವಿಕೆಟ್ ಪಡೆದರೆ, ಶ್ರೀಲಂಕಾ ಸ್ಪಿನ್ನರ್‌ಗಳು 25 ವಿಕೆಟ್ ಕಬಳಿಸಿದ್ದಾರೆ. ಮಧ್ಯಮ ಕ್ರಮಾಂಕ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡುತ್ತಿರುವ ನಡುವೆ ಶೆಫಾಲಿ ವರ್ಮ (168 ರನ್), ಸ್ಮತಿ ಮಂದನಾ (154 ರನ್) ಇವರಿಬ್ಬರು ಭರವಸೆ ಎನಿಸಿದ್ದಾರೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಇವರಿಬ್ಬರ ಆಟ ಭಾರತದ ಪಾಲಿಗೆ ನಿರ್ಣಾಯಕ ಎನಿಸಿದ್ದು, ಹರ್ಮಾನ್‌ಪ್ರೀತ್ ಕೌರ್ ಲಯಕ್ಕೆ ಮರಳಬೇಕಿದೆ. ದೀಪ್ತಿ ಶರ್ಮ (11) ಟೂರ್ನಿಯ ಗರಿಷ್ಠ ವಿಕೆಟ್ ಸಾಧಕಿಯರ ಪಟ್ಟಿಯಲ್ಲಿ ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಜತೆಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಭಾರತಕ್ಕೆ ಪ್ರಮುಖ ಅಸವಾಗಿದ್ದಾರೆ. ಜತೆಗೆ ಶ್ರೀ ಚರಣಿ, ಪ್ರೇಮಾ ರಾವತ್ ಬಲ ತುಂಬಲಿದ್ದಾರೆ. ಆದರೆ, ಫೀಲ್ಡಿಂಗ್ ವೈಫಲ್ಯ ದೊಡ್ಡ ಹಿನ್ನಡೆ ಎನಿಸಿದ್ದು, ಆಡಿರುವ 4 ಪಂದ್ಯಗಳಲ್ಲಿ ಒಟ್ಟು 9 ಕ್ಯಾಚ್ ಕೈಚೆಲ್ಲಿದೆ. ಬಾಂಗ್ಲಾದೇಶ ಎದುರು 40 ರನ್‌ಗಳಿಂದ ಗೆದ್ದು ಫೈನಲ್‌ಗೇರಿರುವ ಹರ್ಮಾನ್‌ಪ್ರೀತ್ ಪಡೆ, 2024ರ ಆವೃತ್ತಿಯ ಫೈನಲ್‌ನಲ್ಲಿ ಲಂಕಾ ಎದುರು 8 ವಿಕೆಟ್‌ಗಳ ಸೋಲು ಕಂಡಿತ್ತು. ಪಾಕಿಸ್ತಾನ ತಂಡವನ್ನು ಸೆಮೀಸ್‌ನಲ್ಲಿ 4 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೇರಿರುವ ಶ್ರೀಲಂಕಾ ಸತತ ಎರಡನೇ ಬಾರಿ ಪ್ರಶಸ್ತಿ ಜಯಿಸುವ ಹಂಬಲದಲ್ಲಿದೆ.
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
ಏಷ್ಯಾಕಪ್ ಫೈನಲ್ ಪಂದ್ಯದ ವೇಳೆ ಭಾರತ ಹಾಗೂ ಪಾಕ್ ನಡುವೆ ಮತ್ತೆ ಟ್ರೋಫಿ ವಿವಾದ ತಲೆದೂರುವ ಸಾಧ್ಯತೆ ಇದೆ. ಏಕೆಂದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಹಾಗೂ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಟೂರ್ನಿಯ ಪ್ರಶಸ್ತಿ ವಿಜೇತರಿಗೆ ಮುಖ್ಯ ಆತಿಥಿಯಾಗಿ ಟ್ರೋಫಿ ಹಸ್ತಾಂತರಿಸುವುದು ಇದಕ್ಕೆ ಕಾರಣ.
ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ನಖ್ವಿ ಅವರಿಂದ ಹರ್ಮಾನ್‌ಪ್ರೀತ್ ಟ್ರೋಫಿ ಸ್ವೀಕರಿಸುತ್ತಾರೆಯೇ ಅಥವಾ ಪುರುಷರ ತಂಡದಂತೆ ನಿರಾಕರಿಸುತ್ತಾರೆಯೇ ಎಂಬ ಪ್ರಶ್ನೆ ಮೂಡಿದ್ದು, ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಕಳೆದ ವರ್ಷ ಪುರುಷರ ಏಷ್ಯಾಕಪ್ ವಿಜೇತ ಭಾರತ ತಂಡ, ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರು. ಇದರಿಂದ ಬಹುಮಾನ ವಿತರಣೆ ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿ, ಟ್ರೋಫಿ ಇಲ್ಲದೆಯೇ ಭಾರತ ವೇದಿಕೆಯಲ್ಲಿ ಸಂಭ್ರಮಿಸಿತ್ತು. ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಕಾರಣ ಬಿಸಿಸಿಐ ಹಾಗೂ ಆಟಗಾರರು ನಖ್ವಿ ಅವರಿಂದ ಟ್ರೋಫಿ ಪಡೆಯಲು ಹಿಂದೇಟು ಹಾಕಿದ್ದರು.