Reels  
ಕ್ರಿಕೆಟ್

Reels​​ ಮಾಡಲು ಹೋಗಿ 70,000 ರೂ.ಮೌಲ್ಯದ ಉಂಗುರ ಕಳೆದುಕೊಂಡ ಯುವತಿ! ವಿಡಿಯೋ ವೈರಲ್

ಚಂಡೀಗಢ: ಇಂದಿನ ಕಾಲದಲ್ಲಿ ರೀಲ್ಸ್(Reels​​) ಹುಚ್ಚು ಎಷ್ಟಿದೆ ಎಂದರೆ, ಒಂದು ಲೈಕ್ ಅಥವಾ ವ್ಯೂವ್ಸ್‌ಗಾಗಿ ಜನರು ಎಂತಹ ಸಾಹಸಕ್ಕೂ ಕೈಹಾಕುತ್ತಾರೆ. ಆದರೆ ಪಂಜಾಬ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ರೀಲ್ಸ್ ಮಾಡಲು ಹೋದ ಯುವತಿಯೊಬ್ಬಳಿಗೆ ಈ ಕ್ರೇಜ್ ಭಾರೀ ದುಬಾರಿಯಾಗಿ ಪರಿಣಮಿಸಿದೆ. ಕ್ರಿಕೆಟ್ ಮೈದಾನದಲ್ಲಿ ರೀಲ್ಸ್ ಶೂಟ್ ಮಾಡುವ ಭರದಲ್ಲಿ ಈಕೆ ತನ್ನ 70,000 ರೂಪಾಯಿ ಮೌಲ್ಯದ ಉಂಗುರವನ್ನು ಕಳೆದುಕೊಂಡಿದ್ದಾಳೆ!
ಏಪ್ರಿಲ್ 11 ರಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಮಧು ಪ್ರಿಯಾ ಎಂಬ ಯುವತಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ 'ರಿಂಗ್ ಟ್ರೆಂಡ್' ರೀಲ್ಸ್ ಮಾಡಲು ಮುಂದಾದರು. ಈ ಟ್ರೆಂಡ್‌ನಲ್ಲಿ ಉಂಗುರವನ್ನು ಗಾಳಿಯಲ್ಲಿ ಎಸೆದು ಮತ್ತೆ ಹಿಡಿಯುವಂತೆ ನಟಿಸಬೇಕಿತ್ತು. ಆದರೆ ದುರದೃಷ್ಟವಶಾತ್, ಆಕೆ ಉಂಗುರವನ್ನು ಗಾಳಿಯಲ್ಲಿ ಎಸೆದಾಗ ಅದು ಕೈಗೆ ಸಿಗದೆ ಗ್ಯಾಲರಿಯ ಆಸನಗಳ ನಡುವೆ ಬಿದ್ದು ನಾಪತ್ತೆಯಾಗಿದೆ.

ತೋರಿಕೆಯ ಶೋಕಿ ತಂದ ತಲ್ಲಣ!

ಉಂಗುರ ಕೈಜಾರಿದ ಕೂಡಲೇ ಯುವತಿಯ ಮುಖದಲ್ಲಿನ ನಗು ಮಾಯವಾಗಿ ಶಾಕ್ ಎದುರಾಗಿದೆ. ತನ್ನ ಸೀಟಿನ ಅಕ್ಕಪಕ್ಕ ಎಷ್ಟೇ ಹುಡುಕಿದರೂ 70 ಸಾವಿರದ ಆ ಉಂಗುರ ಮಾತ್ರ ಪತ್ತೆಯಾಗಿಲ್ಲ. ಈ ದೃಶ್ಯಗಳೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಧು ಪ್ರಿಯಾ ಅವರೇ ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ನನಗೆ 70,000 ರೂಪಾಯಿ ಲಾಸ್ ಆಗಿದೆ. ಉಂಗುರ ಇನ್ನೂ ಸಿಕ್ಕಿಲ್ಲ. ಈ ಸ್ಟೇಡಿಯಂನವರು ಯಾರಾದರೂ ವಿಡಿಯೋ ನೋಡುತ್ತಿದ್ದರೆ ದಯವಿಟ್ಟು ಉಂಗುರ ಹುಡುಕಿಕೊಡಿ" ಎಂದು ಮನವಿ ಮಾಡಿದ್ದಾರೆ.

ನೆಟ್ಟಿಗರ ಕಾಲೆಳೆತ: "ಇಷ್ಟೊಂದು ನಾಟಕ ಬೇಕಿತ್ತಾ?"

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಯುವತಿಯ ಕಾಲೆಳೆಯಲು ಶುರು ಮಾಡಿದ್ದಾರೆ. "ರೀಲ್ಸ್ ಮಾಡೋಕೆ ಹೋಗಿ 70 ಸಾವಿರದ ಉಂಗುರ ಕಳ್ಕೊಂಡ್ರಲ್ಲಾ, ಈಗ ನಿಮ್ಮ ರೀಲ್ಸ್ ಬೆಲೆ 70 ಸಾವಿರ ಆಯ್ತು" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು "ಮುಂದಿನ ಬಾರಿ ದಾರ ಕಟ್ಟಿ ರೀಲ್ಸ್ ಮಾಡಿ" ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು "ಇಷ್ಟೊಂದು ನಾಟಕ ಮಾಡುವ ಅಗತ್ಯವಿತ್ತಾ? ಅನುಭವಿಸಿ" ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ,(ಏಜೆನ್ಸೀಸ್​).