ಟೀಮ್ ಇಂಡಿಯಾ, ಪಾಕ್ ಮಾಜಿ ಕ್ರಿಕೆಟಿಗ ತನ್ವಿರ್ ಅಹ್ಮದ್
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ಟೀಮ್ ಇಂಡಿಯಾದ ಹಾದಿ ತುಂಬಾ ಕಠಿಣ
- ಸೂಪರ್ 8ರ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರಿ ರನ್ ಅಂತರದಲ್ಲಿ ಸೋತಿದ್ದೇ ಇದಕ್ಕೆ ಕಾರಣ
- ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯಕ್ಕೆ ಪಾಕ್ ಕ್ರಿಕೆಟಿಗನಿಂದ ಕಿಡಿ
Team India: ಪ್ರಸ್ತುತ ನಡೆಯುತ್ತಿತುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ಟೀಮ್ ಇಂಡಿಯಾದ ಹಾದಿ ಈಗ ಊಹೆಗೂ ಮೀರಿದೆ. ಭಾರತ ತಂಡದ ಸೆಮಿಫೈನಲ್ ದಾರಿ ಬಗ್ಗೆ ಈ ಹಿಂದೆ ಮಾಡಿಕೊಂಡಿದ್ದ ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿವೆ. ಸೂಪರ್-8ರ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರಿ ರನ್ ಅಂತರದಲ್ಲಿ ಸೋಲುಂಡಿದ ಸೂರ್ಯಕುಮಾರ್ ಯಾದವ್ ಪಡೆ, ಸೆಮಿಫೈನಲ್ ತಲುಪುವುದು ಬಹುತೇಕ ಅಸಾಧ್ಯ ಎನ್ನುವ ಮಾತು ಕೇಳಿಬರುತ್ತಿದೆ.
ಈಗ ಟೀಮ್ ಇಂಡಿಯಾಗೆ ಸವಾಲಾಗಿರುವುದು ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವುದು. ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯಗಳನ್ನು ಹೆಚ್ಚಿನ ನೆಟ್ ರನ್ರೇಟ್ನಲ್ಲಿ ಭಾರತ ಗೆಲ್ಲಬೇಕಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮ್ಯಾಚ್ನಲ್ಲಿ ವಿಂಡೀಸ್ ಸೋಲಬೇಕು. ಇದೇನಾದರೂ ಸಂಭವಿಸಿದರೆ ಮಾತ್ರ ಭಾರತದ ಸೆಮಿಫೈನಲ್ ಆಸೆ ಈಡೇರಲಿದೆ. ಈ ಮಧ್ಯೆ, ಸೌತ್ ಆಫ್ರಿಕಾ ಎದುರಿಗೆ ಮಂಡಿಯೂರಿದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು, ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲದೆ ವಿಕೆಟ್ ಕಳೆದುಕೊಂಡ ರೀತಿ ಸದ್ಯ ವ್ಯಾಪಕ ಟೀಕೆಗೆ ಗುರಿಯಾಗಿದೆ.
ದಕ್ಷಿಣ ಆಫ್ರಿಕಾ ನೀಡಿದ ಗುರಿಯನ್ನು ತಲುಪಲು ತೀರ ಹೆಣಗಾಡಿದ ಟೀಮ್ ಇಂಡಿಯಾ ಪರಿಸ್ಥಿತಿಯನ್ನು ಗಮನಿಸಿದ ಕ್ರಿಕೆಟ್ ಪ್ರಿಯರು, ಈ ಕಠಿಣ ಸಂದರ್ಭದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್, ದಾಖಲೆಗಳ ಸರದಾರ, ರನ್ಮಷಿನ್ ವಿರಾಟ್ ಕೊಹ್ಲಿ ಇರಬಾರದಿತ್ತೇ? ಎಂದು ಕೊರಗಾಡಿದರು. ಏಕೆ ನಾವು ಕಿಂಗ್ ಕೊಹ್ಲಿಯನ್ನು ಚೇಸ್ಮಾಸ್ಟರ್ ಎಂದು ಕರೆಯುತ್ತೇವೆ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿದರು. ಇದೇ ಸಮಯದಲ್ಲಿ ತಂಡದಲ್ಲಿ ಕೊಹ್ಲಿ ಇದ್ದಿದ್ರೆ ನಮಗಿಂತ ಹೀನಾಯ ಸೋಲು ಬರುತ್ತಿತ್ತೇ? ಎಂದು ವಿರಾಟ್ರ ಹಳೆಯ ಇನ್ನಿಂಗ್ಸ್ ಅನ್ನು ಮುನ್ನೆಲೆಗೆ ತಂದರು. ಈ ಕುರಿತು ನಾಲಿಗೆ ಹರಿಬಿಟ್ಟಿರುವ ಪಾಕಿಸ್ತಾನದ ಮಾಜಿ ಆಟಗಾರ ತನ್ವೀರ್ ಅಹ್ಮದ್, ವಿವಾದಾತ್ಮಕ ಹೇಳಿಕೆಯನ್ನೇ ನೀಡಿದ್ದಾರೆ.
ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಉಳಿದೆಲ್ಲ ಟೀಮ್ ಇಂಡಿಯಾದ ಆಟಗಾರರು ಅಸಮರ್ಥರು. ಕೊಹ್ಲಿಯಂತೆ ಆಡುವ ಸಾಮರ್ಥ್ಯ ಇಲ್ಲಿ ಯಾರಿಗೂ ಇಲ್ಲ. ವಿರಾಟ್ ನಿವೃತ್ತಿ ಘೋಷಿಸಿದ ಬಳಿಕ ಟೀಮ್ ಇಂಡಿಯಾ ಟಿ20 ತಂಡವು ದುರ್ಬಲಗೊಂಡಿದೆ. ಅವರ ಉಪಸ್ಥಿತಿಯಲ್ಲಿ ಇದ್ದಂತೆ ಈಗಿಲ್ಲ. ಚೇಸಿಂಗ್ ವಿಷಯಕ್ಕೆ ಬಂದರೆ, ಕೊಹ್ಲಿಗೆ ಅವರೇ ಸಾಟಿ. ಅವರಿಂದ ಮಾತ್ರ ಅದು ಸಾಧ್ಯ ಎಂದು ತನ್ವೀರ್ ಅಹ್ಮದ್ ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಗನನ್ನು ಕೊಂಡಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇದ್ದಿದ್ದರೆ, ಟೀಮ್ ಇಂಡಿಯಾ ಖಂಡಿತವಾಗಿಯೂ ಗೆಲ್ಲುತ್ತಿತ್ತು. ಆದರೆ, ಪ್ರಸ್ತುತ ಟೀಮ್ ಇಂಡಿಯಾ ತಂಡದಲ್ಲಿ ಕೊಹ್ಲಿಯಂತೆ ಆಡುವ ಸಾಮರ್ಥ್ಯ ಯಾರಿಗೂ ಇಲ್ಲ. ಹೆಡ್ಕೋಚ್ ಗೌತಮ್ ಗಂಭೀರ್, ಗಲ್ಲಿ ಕ್ರಿಕೆಟಿಗರನ್ನು ಕರೆತಂದು ಆಡಿಸುತ್ತಿದ್ದಾರೆ. ಈ ವಿಷಯದಲ್ಲಿ ಬಿಸಿಸಿಐ ಆಯ್ಕೆಗಾರರು, ಕಣ್ಣು ತೆರೆದು ಉತ್ತಮ ತಂಡವನ್ನು ಆಯ್ಕೆ ಮಾಡಿ. ಈ ತಂಡದೊಂದಿಗೆ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವುದು ಒಂದು ಭ್ರಮೆ ಅಷ್ಟೇ ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾ ಸೆಮೀಸ್ ಹಾದಿ ಸಾಧ್ಯವೇ?
ಸೂಪರ್-8ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಟೀಮ್ ಇಂಡಿಯಾ, ಸೆಮಿಫೈನಲ್ ಹಾದಿ ತಲುಪುವುದು ಕಷ್ಟಸಾಧ್ಯ. ಮುಂದಿನ ಎರಡು ಪಂದ್ಯಗಳಾದ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧ ಭಾರತ ಗೆಲ್ಲಲೇಬೇಕು. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾ ತಂಡವು ವಿಂಡೀಸ್ ವಿರುದ್ಧ ಭಾರೀ ಅಂತರದಲ್ಲಿ ಗೆಲುವು ದಾಖಲಿಸಬೇಕು. ಇದು ನಡೆದರೆ ಮಾತ್ರ, ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ ಸುಲಭ,(ಏಜೆನ್ಸೀಸ್).