2011ರ ವಿಶ್ವಕಪ್ ಗೆದ್ದ ಸಮಯದ ಫೋಟೋ
- 2011ರ ವಿಶ್ವಕಪ್ ಸಚಿನ್ ತೆಂಡೂಲ್ಕರ್ಗೆ ಅರ್ಪಣೆ
- ಅಂದು ಸಚಿನ್ಗೆ 2027ರ ವಿಶ್ವಕಪ್ ವಿರಾಟ್ಗೆ
- 'ರನ್ಮಷಿನ್'ಗಾಗಿ ಗೆಲ್ಲಬೇಕು ಎಂದ ಐಪಿಎಲ್ ಅಧ್ಯಕ್ಷ
ನವದೆಹಲಿ: 2027ರ ಏಕದಿನ ವಿಶ್ವಕಪ್ಗೆ ಕ್ರಿಕೆಟ್ ಪ್ರಿಯರು ಹಾಗೂ ಮಾಜಿ ಕ್ರಿಕೆಟಿಗರ ಕಣ್ಣು ಬಿದ್ದಿದ್ದು, ದಿಗ್ಗಜ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರನ್ನು ಕೊನೆಯ ಬಾರಿಗೆ ಮೈದಾನದಲ್ಲಿ ಕಣ್ತುಂಬಿಕೊಳ್ಳಲು ತೀರ ಕಾತರ, ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಒಂದಷ್ಟು ಸುದ್ದಿಗಳು 'ರೋಕೊ' ಜೋಡಿ ಆಡುವುದು ಬಹುತೇಕ ಅನುಮಾನ. ಅವರಿಬ್ಬರು ಶೀಘ್ರವೇ ಏಕದಿನ ಕ್ರಿಕೆಟ್ಗೂ ನಿವೃತ್ತಿ ಘೋಷಿಸಲಿದ್ದಾರೆ ಎನ್ನುತ್ತಿವೆ. ಇದೆಲ್ಲದರ ನಡುವೆಯೂ ಇತ್ತೀಚಿನ ಸರಣಿಗಳಲ್ಲಿ ಕೊಹ್ಲಿ ಮತ್ತು ರೋಹಿತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ, ವದಂತಿ ಹಬ್ಬಿಸುವವರ ಬಾಯಿಯನ್ನು ಮುಚ್ಚಿಸುತ್ತಿವೆ.
ಪ್ರಸ್ತುತ, ಟಿ20 ಮತ್ತು ಟೆಸ್ಟ್ಗೆ ಗುಡ್ಬೈ ಹೇಳಿರುವ 'ರೋಕೊ', ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಫಾರ್ಮೆಟ್ನಲ್ಲಿಯೇ ತಮ್ಮ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಬ್ಯಾಟರ್ಗಳನ್ನು 2027ರ ವಿಶ್ವಕಪ್ ಟೂರ್ನಿಯಲ್ಲಿ ನೋಡುವ ಹೆಬ್ಬಯಕೆ ಹೊಂದಿರುವವರ ಪೈಕಿ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಕೂಡ ಒಬ್ಬರು ಎನ್ನುವುದಕ್ಕೆ ಅವರಾಡಿರುವ ಈ ಮಾತುಗಳೇ ಸಾಕ್ಷಿ.
"ಕಳೆದ ದಶಕಗಳಲ್ಲಿ ವಿರಾಟ್ ಕೊಹ್ಲಿ ಎಲ್ಲ ಫಾರ್ಮೆಟ್ಗಳಲ್ಲಿಯೂ ಅದ್ಭುತವಾಗಿದ್ದಾರೆ. ಅದರಲ್ಲಿ ಅನುಮಾನವೇ ಬೇಡ. 2011ರಲ್ಲಿ ಟೀಮ್ ಇಂಡಿಯಾ ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ವಕಪ್ ಗೆದ್ದು ಅರ್ಪಿಸಿತು. ಅಂತೆಯೇ, 2027ರ ಏಕದಿನ ವಿಶ್ವಕಪ್ ಅನ್ನು ಈಗಿರುವ ಭಾರತ ತಂಡ ವಿರಾಟ್ಗಾಗಿ ಗೆದ್ದು ಕೊಡಬೇಕು. ಅದೇ ರೀತಿಯಲ್ಲಿ ಗೆಲ್ಲಿಸಬೇಕು. ಕೊಹ್ಲಿ, ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಕ್ರಿಕೆಟ್ ಜಗತ್ತಿಗೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ" ಎಂದು ಅರುಣ್ ಹೇಳಿದ್ದಾರೆ.
"ಅಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ 28 ವರ್ಷಗಳ ಬಳಿಕ ವಿಶ್ವಕಪ್ ಗೆದ್ದಿತು. ಅದು ಸಚಿನ್ ಅವರ ಆರನೇ ಹಾಗೂ ಕೊನೆಯ ಐಸಿಸಿ ಟೂರ್ನಿ ಆಗಿತ್ತು. ಕೊಹ್ಲಿ ಮತ್ತು ತಂಡದ ಇತರೆ ಸದಸ್ಯರು ಮಾಸ್ಟರ್ಬ್ಲಾಸ್ಟರ್ ಅನ್ನು ತಮ್ಮ ಹೆಗಲ ಮೇಲೆ ಹೊತ್ತು, ಮೈದಾನದಲ್ಲಿ ಮೆರವಣಿಗೆ ಮಾಡಿದರು. ಈಗ ಇದು ವಿರಾಟ್ಗೆ ಸಲ್ಲಬೇಕು. ಇಷ್ಟು ವರ್ಷಗಳ ಕಾಲ ಟೀಮ್ ಇಂಡಿಯಾವನ್ನು ಹೊತ್ತಿರುವ ವಿರಾಟ್ರನ್ನು ನಾವು ಹೊತ್ತು ಸಾಗುವ ಸಮಯ" ಎಂದಿದ್ದಾರೆ.
"ಇದು ರೋಹಿತ್ ಶರ್ಮಗೂ ಅನ್ವಯ. ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಕೊಡುಗೆ ಕೂಡ ಅದ್ಭುತವಾಗಿದೆ. ಟೀಮ್ ಇಂಡಿಯಾದ ನಾಯಕನಾಗಿ ಜವಾಬ್ದಾರಿ ಹೊತ್ತ ಮೇಲಂತು, ರೋಹಿತ್ ರಾಕ್ಸ್ಟಾರ್ ಆಗಿ ಮಿಂಚಿದ್ದಾರೆ. ಇವರಿಬ್ಬರಿಗೆ ಎಲ್ಲಿಯವರೆಗೆ ತಂಡದಲ್ಲಿ ಆಡಲು ಮನಸ್ಸಿದೆಯೋ, ಅಲ್ಲಿಯವರೆಗೆ ಅವರ ಭವಿಷ್ಯ ಕುರಿತು ಯಾರೊಬ್ಬರು ಪ್ರಶ್ನಿಸಬಾರದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).