ಲಂಕಾ ಆಟಗಾರನ ಜತೆ ಜಗಳವಾಡಿ ನಿಯಮ ಉಲ್ಲಂಘಿಸಿದರೇ ವೈಭವ್? ಬ್ಯಾನ್​ ಆಗ್ತಾರಾ? ಏನನ್ನುತ್ತೆ ಐಸಿಸಿ ಆರ್ಟಿಕಲ್ 2.12? Vaibhav Suryavanshi  
ಕ್ರಿಕೆಟ್

ಲಂಕಾ ಆಟಗಾರನ ಜತೆ ಜಗಳವಾಡಿ ನಿಯಮ ಉಲ್ಲಂಘಿಸಿದರೇ ವೈಭವ್? ಬ್ಯಾನ್​ ಆಗ್ತಾರಾ? ಏನನ್ನುತ್ತೆ ಐಸಿಸಿ ಆರ್ಟಿಕಲ್ 2.12? Vaibhav Suryavanshi

Vaibhav Suryavanshi : ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ 15 ವರ್ಷದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ, ಪ್ರಸ್ತುತ ತ್ರಿಕೋನ 'ಎ' ಸರಣಿಯಲ್ಲಿ ಭಾರತ 'ಎ' ತಂಡದ ಪರವಾಗಿ ಆಡುತ್ತಿದ್ದು, ಆಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 44 ಮತ್ತು 21 ರನ್‌ಗಳನ್ನು ಗಳಿಸಿ, ವೈಫಲ್ಯ ಅನುಭವಿಸಿದ್ದಾರೆ. ನಿನ್ನೆ ಶ್ರೀಲಂಕಾ 'ಎ' ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ, ಸೂಪರ್ ಓವರ್‌ನಲ್ಲಿ ಭಾರತ 'ಎ' ತಂಡವು ಕೇವಲ 8 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿತು.
ಶ್ರೀಲಂಕಾ ಎ ತಂಡದ ವಿರುದ್ಧದ ಸೋಲಿನ ಬೆನ್ನಲ್ಲೇ, ಲಂಕಾ ಆಟಗಾರ ಮತ್ತು ವೈಭವ್ ನಡುವೆ ನಡೆದ ಜಟಾಪಟಿ ಇದೀಗ ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಮೈದಾನದಲ್ಲಿ ನಡೆದ ಗಲಾಟೆ, ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಇದರಿಂದಾಗಿ ಐಸಿಸಿ (ICC) ನಿಯಮಾವಳಿಗಳ ಅಡಿಯಲ್ಲಿ ಶಿಸ್ತು ಕ್ರಮ ಮತ್ತು ನಿಷೇಧದ ಭೀತಿಯನ್ನು ವೈಭವ್​ ಎದುರಿಸುತ್ತಿದ್ದಾರೆ. ಈ ಇಡೀ ಘಟನೆಗೆ ಅಸಲಿ ಕಾರಣವೇನು ಮತ್ತು ಐಸಿಸಿ ನಿಜವಾಗಿಯೂ ವೈಭವ್ ಮೇಲೆ ನಿಷೇಧ ಹೇರಲಿದೆಯೇ ಎಂಬ ಆತಂಕ ಸದ್ಯ ಮೂಡಿದೆ.
ಈ ಇಡೀ ವಿಷಯವು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12ರ ಅಡಿಯಲ್ಲಿ ಬರುವ ಸಾಧ್ಯತೆಯಿದ್ದು, ಈ ಬಗ್ಗೆ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್‌ದರನ್ ಅವರಿಂದ ಯಾವುದೇ ಅಧಿಕೃತ ತೀರ್ಪು ಅಥವಾ ಆದೇಶ ಇನ್ನೂ ಹೊರಬಿದ್ದಿಲ್ಲ. ಒಂದು ವೇಳೆ ತನಿಖೆಯ ಸಂದರ್ಭದಲ್ಲಿ ವೈಭವ್ ಸೂರ್ಯವಂಶಿ ಅವರು ಎದುರಾಳಿ ಆಟಗಾರನೊಂದಿಗೆ ಕೈಕೈ ಮಿಲಾಯಿಸಿರುವುದು ಸಾಬೀತಾದರೆ, ಅವರು ದೊಡ್ಡ ಮೊತ್ತದ ದಂಡ ಅಥವಾ ಕಠಿಣ ಶಿಸ್ತು ಕ್ರಮವನ್ನು ಎದುರಿಸಬೇಕಾಗಬಹುದು.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12ರ ಪ್ರಕಾರ, ಯಾವುದೇ ಒಬ್ಬ ಆಟಗಾರ ಉದ್ದೇಶಪೂರ್ವಕವಾಗಿ, ಬೇಜವಾಬ್ದಾರಿತನದಿಂದ ಅಥವಾ ಆಕಸ್ಮಿಕವಾಗಿ ಮತ್ತೊಬ್ಬ ಆಟಗಾರನನ್ನು ಅಥವಾ ಪಂದ್ಯದ ಅಧಿಕಾರಿಯನ್ನು ತಳ್ಳಿದರೆ, ಹೆಗಲಿಂದ ಡಿಕ್ಕಿ ಹೊಡೆದರೆ ಅಥವಾ ಹೊಡೆದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ, ಈ ನಿಯಮದ ಅಡಿಯಲ್ಲಿ ಕ್ರಮ ಜರುಗಿಸಬೇಕಾದರೆ ಆಯಾ ಸರಣಿ ಅಥವಾ ಪಂದ್ಯಗಳಲ್ಲಿ ಐಸಿಸಿ ಅಧಿಕಾರಿಗಳ ಒಳಗೊಳ್ಳುವಿಕೆ ಇರಬೇಕಾಗುತ್ತದೆ.
ಐಸಿಸಿ ನಿಯಮಾವಳಿಗಳ ಪ್ರಕಾರ, ಒಬ್ಬ ಆಟಗಾರನು 24 ತಿಂಗಳ (2 ವರ್ಷ) ಅವಧಿಯಲ್ಲಿ ಒಟ್ಟು 4 ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳನ್ನು ಸಂಗ್ರಹಿಸಿದರೆ, ಆ ಪಾಯಿಂಟ್‌ಗಳನ್ನು 'ಸಸ್ಪೆನ್ಷನ್ ಪಾಯಿಂಟ್‌ಗಳಾಗಿ' ಪರಿವರ್ತಿಸಲಾಗುತ್ತದೆ. ಈ ರೀತಿಯಾಗಿ 4 ಡಿಮೆರಿಟ್ ಪಾಯಿಂಟ್‌ಗಳನ್ನು ತಲುಪಿದಾಗ ಆಟಗಾರನು ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿಷೇಧಕ್ಕೊಳಗಾಗುತ್ತಾನೆ. ನಿರ್ದಿಷ್ಟವಾಗಿ ಹೇಳುವುದಾದರೆ, 2 ಸಸ್ಪೆನ್ಷನ್ ಪಾಯಿಂಟ್‌ಗಳು ಆಟಗಾರನಿಗೆ 1 ಟೆಸ್ಟ್ ಪಂದ್ಯ, ಅಥವಾ 2 ಏಕದಿನ ಪಂದ್ಯಗಳು ಅಥವಾ 2 ಟಿ20 ಪಂದ್ಯಗಳಿಂದ ನಿಷೇಧವನ್ನು ತರುತ್ತವೆ. ಈ ಡಿಮೆರಿಟ್ ಪಾಯಿಂಟ್‌ಗಳು ಆಟಗಾರನ ಶಿಸ್ತಿನ ದಾಖಲೆಯಲ್ಲಿ 24 ತಿಂಗಳವರೆಗೆ ಇರುತ್ತವೆ, ನಂತರ ಅವು ಸ್ವಯಂಚಾಲಿತವಾಗಿ ಅಳಿಸಿಹೋಗುತ್ತವೆ.
ಸಾಮಾನ್ಯವಾಗಿ ಇಂತಹ 'ಎ' ತಂಡಗಳ ದ್ವಿಪಕ್ಷೀಯ ಅಥವಾ ತ್ರಿಕೋನ ಸರಣಿಗಳಿಗೆ ಐಸಿಸಿ ನೇರವಾಗಿ ಶಿಸ್ತು ಕ್ರಮದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಇಂತಹ ಸರಣಿಗಳಿಗೆ ಮ್ಯಾಚ್ ಅಧಿಕಾರಿಗಳನ್ನು ಸಹ ನೇಮಿಸುವುದಿಲ್ಲ. ಆದ್ದರಿಂದ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಮೇಲೆ ದೊಡ್ಡ ಮಟ್ಟದ ನಿಷೇಧ ಹೇರುವ ಸಾಧ್ಯತೆ ತೀರಾ ಕಡಿಮೆ ಇದ್ದು, ಒಂದು ವೇಳೆ ಐಸಿಸಿ ನಿಯಮಾವಳಿಗಳನ್ನು ಅನ್ವಯಿಸಿದರೂ ಸಹ, ಇದು ಲೆವೆಲ್-1 ಅಪರಾಧದ ಕಲ್ಪನೆಯಡಿ ಬರುವುದರಿಂದ ಕೇವಲ ಎಚ್ಚರಿಕೆ ನೀಡುವುದು ಅಥವಾ ಪಂದ್ಯದ ಸಂಭಾವನೆಯ ಶೇ. 50 ರಷ್ಟು ದಂಡ ವಿಧಿಸುವ ಸಾಧ್ಯತೆಯಷ್ಟೇ ಇರುತ್ತದೆ, (ಏಜೆನ್ಸೀಸ್​).