ಯುವ ಬ್ಯಾಟಿಂಗ್ ಸೆನ್ಸೇಷನ್ ವಿಚಾರದಲ್ಲಿ ಮತ್ತದೇ ಮಿಸ್ಟೇಕ್ಗೆ ರೆಡಿಯಿಲ್ಲ ಗೌತಿ
- ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ವಿಫಲ
- ಆಡಿದ 7 ಎಸೆತಗಳಲ್ಲಿ ಒಂದು ರನ್ ಅಷ್ಟೇ
- 2ನೇ ಟಿ20 ಪಂದ್ಯದಲ್ಲಿ ಕಡೆಗೂ ವೈಭವ್ಗೆ ಚಾನ್ಸ್?
Vaibhav Sooryavanshi: ಐರ್ಲೆಂಡ್ ಎದುರು ಎರಡು ಪಂದ್ಯಗಳ ಟಿ20 ಸರಣಿಯನ್ನು ಹೀನಾಯವಾಗಿ ಸೋತ ಟೀಮ್ ಇಂಡಿಯಾ, ಈಗ ಆಂಗ್ಲರ ನಾಡಿನಲ್ಲಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಮ್ಯಾಚ್ನಲ್ಲಿಯೂ ಕಳಪೆ ಪ್ರದರ್ಶನ ಮುಂದುವರಿಸಿದೆ.
ಇಂಗ್ಲೆಂಡ್ನ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಐರ್ಲೆಂಡ್ ಸರಣಿಯಲ್ಲಿ ಮಾಡಿದ ಮಿಸ್ಟೇಕ್ ಅನ್ನು ಆಂಗ್ಲರ ವಿರುದ್ಧ ರಿಪೀಟ್ ಮಾಡುವುದಿಲ್ಲ. ಬದಲಿಗೆ ಕ್ರಿಕೆಟ್ ದಿಗ್ಗಜನ ದಾಖಲೆ ಮುರಿಯಲು ತುದಿಗಾಲಿನಲ್ಲಿರುವ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಗೆ ಅವಕಾಶ ನೀಡುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಗಂಭೀರ್ ಪಡೆ ಮತ್ತದೇ ತಪ್ಪು ಮಾಡಿದ್ದು ಸಿಡಿಮಿಡಿಗೆ ಕಾರಣವಾಗಿದೆ.
ಐರ್ಲೆಂಡ್ ಎದುರು ಅತ್ಯಂತ ಕಳಪೆ ಪ್ರದರ್ಶನ ನೀಡಿದರೂ ಇಂಗ್ಲೆಂಡ್ ಸರಣಿಯ ತಂಡದಿಂದ ಮತ್ತೆ 15 ವರ್ಷದ ವೈಭವ್ರನ್ನು ಪ್ಲೇಯಿಂಗ್ 11ರಿಂದ ಕೈಬಿಡಲಾಯಿತು. ಇದು ಕ್ರಿಕೆಟ್ ಪ್ರಿಯರ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಈ ವಿಷಯ ಕ್ರಿಕೆಟ್ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ. ಓಪನರ್ ಆಗಿ ತಂಡದ ಪರ ಬ್ಯಾಟಿಂಗ್ಗೆ ಇಳಿಯುತ್ತಿರುವ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮ ಪೈಕಿ ಅಭಿಷೇಕ್ ಅರ್ಧಶತಕ ಸೇರಿ ಸಿಕ್ಸರ್ಗಳನ್ನು ಸಿಡಿಸಿ, ಕನಿಷ್ಠ ತಂಡದ ಮೊತ್ತವನ್ನು ಹೆಚ್ಚಿಸಿದ್ದಾರೆ. ಆದರೆ, ಸ್ಯಾಮ್ಸನ್ ಫ್ಲಾಪ್ ಶೋ ನೀಡುವುದನ್ನು ಮುಂದುವರಿಸಿರುವುದು ಹಲವರನ್ನು ಕೆರಳಿಸಿದೆ.
2 ಪಂದ್ಯಗಳಲ್ಲಿ 5, 0...
ಐರ್ಲೆಂಡ್ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್, ನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ. ಆಡಿದ ಎರಡು ಪಂದ್ಯಗಳಲ್ಲಿ 5, ಶೂನ್ಯಕ್ಕೆ ಮತ್ತು ಆಂಗ್ಲರ ಎದುರು ಮೊದಲ ಮ್ಯಾಚ್ನಲ್ಲಿ 2 ರನ್ ಗಳಿಸಿ ಔಟ್ ಆದರು, ಅಭಿಷೇಕ್ ಶರ್ಮಾ 49 ಮತ್ತು ಡಕ್ಔಟ್ ಮತ್ತು 59 ರನ್ ಗಳಿಸಿದ್ದಾರೆ. ಇಷ್ಟಾದರೂ ಮ್ಯಾನೇಜ್ಮೆಂಟ್ ಮಾತ್ರ ಕಳಪೆ ಫಾರ್ಮ್ನಲ್ಲಿರುವ ಸಂಜುಗೆ ಅವಕಾಶ ಕೊಟ್ಟಿರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಸರಿಯಾದ ನಿರ್ಧಾರ ಅನಿಸಿಲ್ಲ. ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ವೈಭವ್ರನ್ನು ಕರೆತರಲೇಬೇಕು ಎಂದು ಜಾಲತಾಣಗಳಲ್ಲಿ ಪಟ್ಟು ಹಿಡಿದಿದ್ದಾರೆ.
ಸಂಜು ಬದಲಿಗೆ ವೈಭವ್ ಅಖಾಡಕ್ಕೆ?
ಸಂಜು ಸ್ಯಾಮ್ಸನ್ ಮತ್ತೊಮ್ಮೆ ಫ್ಲಾಪ್ ಆಗಿರುವ ಕಾರಣ, ವೈಭವ್ ಸೂರ್ಯವಂಶಿ ಪದಾರ್ಪಣೆ ಬಹುತೇಕ ಖಚಿತ ಎನ್ನಲಾಗಿದೆ. ಸತತ ಮೂರು ಪಂದ್ಯಗಳಲ್ಲಿ ನಿರಾಶೆ ಮೂಡಿಸಿರುವ ಸಂಜು, ಎರಡನೇ ಟಿ20ಯಲ್ಲಿ ಆಡುವುದು ಕಷ್ಟಸಾಧ್ಯ. ಸಂಜು ಉತ್ತಮ ಪ್ರದರ್ಶನ ನೀಡಿದ್ದರೆ, ಸೂರ್ಯವಂಶಿಗೆ ಚಾನ್ಸ್ ಮುಂದೋಗುವ ಸಾಧ್ಯತೆಗಳು ಹೆಚ್ಚಿತ್ತು. ಆದರೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಎರಡನೇ ಟಿ20ಯಲ್ಲಿ ವೈಭವ್ ಅವರ ಚೊಚ್ಚಲ ಎಂಟ್ರಿ ಖಚಿತ ಎಂದು ಹೇಳಲಾಗುತ್ತಿದೆ. ಇದೇನಾದರೂ ಗ್ಯಾರಂಟಿಯಾದರೆ, ಆಂಗ್ಲರ ಮಣ್ಣಿನಲ್ಲಿ ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆ ಸೇರಿ ಇನ್ನೂ ಕೆಲವು ರೆಕಾರ್ಡ್ಗಳನ್ನು ವಂಡರ್ ಕಿಡ್ ಮುರಿಯಲಿದ್ದಾರೆ. ಅಷ್ಟಕ್ಕೂ ವೈಭವ್ಗೆ ಮ್ಯಾನೇಜ್ಮೆಂಟ್ ಅವಕಾಶ ಕೊಡಲಿದ್ದಾರಾ ಅಥವಾ ಮತ್ತೊಮ್ಮೆ ಅದೇ ಮಿಸ್ಟೇಕ್ ಮಾಡಿ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).