ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ
- ವೆಸ್ಟ್ ಇಂಡೀಸ್ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ
- ಲೆಕ್ಕಾಚಾರದ ಪ್ರಕಾರವೇ ಗೆದ್ದು ಬೀಗಿದ ಹರಿಣರ ಪಡೆ
- ಟೀಮ್ ಇಂಡಿಯಾ ಸೆಮೀಸ್ ಹಾದಿ ಸುಲಭವಾಗಿಸಿದ ಸೌತ್ ಆಫ್ರಿಕಾ
- ರನ್ರೇಟ್ನಿಂದ ಬಚಾವ್ ಆದರೂ ಭಾರತಕ್ಕಿದೆ ಈ ಎರಡು ಸವಾಲು
WI vs SA: ಲೀಗ್ ಹಂತದ ಸತತ 4 ಗೆಲುವಿನ ಬಳಿಕ, ಸೂಪರ್-8 ಹಂತದ ಆರಂಭಿಕ ಪಂದ್ಯದಲ್ಲಿ ಬೃಹತ್ ಗೆಲುವು ದಾಖಲಿಸಿ ಬೀಗಿರುವ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟಿ20 ವಿಶ್ವಕಪ್ನಲ್ಲಿ ಇಂದು (ಫೆ.26) ಮುಖಾಮುಖಿಯಾಗಿ ಸೆಣಸಾಡಿತು. ಈ ಪಂದ್ಯದಲ್ಲಿ ಯಾರಿಗೆ ಗೆಲುವು ಒಲಿಯಲಿದೆಯೋ ಆ ತಂಡಕ್ಕೆ ಸೆಮಿಫೈನಲ್ಗೇರುವ ಸುವರ್ಣಾವಕಾಶ ಎನ್ನಲಾಗಿತ್ತು. ಅದೆಲ್ಲದಕ್ಕಿಂತ ಹೆಚ್ಚಾಗಿ, ಈ ಪಂದ್ಯ ಭಾರತದ ಪಾಲಿಗೂ ಮಹತ್ವದ್ದಾಗಿತ್ತು. ಲೆಕ್ಕಾಚಾರಗಳ ಪ್ರಕಾರ, ಕಡೆಗೂ ವಿಂಡೀಸ್ನ ಬಗ್ಗುಬಡಿದ ದಕ್ಷಿಣ ಆಫ್ರಿಕಾ, ಇದೀಗ ಟೀಮ್ ಇಂಡಿಯಾ ಸೆಮೀಸ್ ಹಾದಿಯನ್ನು ಸುಲಭವಾಗಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೂಪರ್-8 ಪಂದ್ಯದಲ್ಲಿ, ಹರಿಣರ ಪಡೆ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ, ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, 20 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಕ್ಯಾಪ್ಟನ್ ಐಡೆನ್ ಮಾರ್ಕ್ರಮ್ (46 ಎಸೆತ 82 ರನ್) ಮತ್ತು ರಿಕಲ್ಟನ್ (28 ಎಸೆತ 45 ರನ್) ಅವರ ಅಜೇಯ ಸ್ಫೋಟಕ ಇನ್ನಿಂಗ್ಸ್ ಸುಲಭ ಗೆಲುವಿಗೆ ದಾರಿ ಮಾಡಿಕೊಟ್ಟಿತು. ಅದು ಕೇವಲ 1 ವಿಕೆಟ್ ನಷ್ಟಕ್ಕೆ ಎಂಬುದು ಇಲ್ಲಿ ಗಮನಾರ್ಹ.
ವರ್ಕ್ಔಟ್ ಆಯ್ತು ಲೆಕ್ಕಾಚಾರ
ಮೊದಲೇ ಲೆಕ್ಕಾಚಾರ ಹಾಕಿಕೊಂಡಂತೆ ಟೀಮ್ ಇಂಡಿಯಾ ಸೆಮೀಫೈನಲ್ ಹಾದಿ ಸುಲಭ ಆಗಬೇಕಾದರೆ, ಇಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲ್ಲಲೇಬೇಕಿತ್ತು. ಗೆದ್ದರೆ ಮಾತ್ರ ಟೀಮ್ ಇಂಡಿಯಾಗೆ ಮುಂದಿನ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ರನ್ರೇಟ್ ಅವಶ್ಯಕತೆ ಇರುವುದಿಲ್ಲ ಎಂದು ಹೇಳಲಾಗಿತ್ತು. ಅಂತೆಯೇ, ಎಲ್ಲರ ಆಶಯ ಈಡೇರಿದ್ದು, ಹರಿಣರ ಪಡೆ ಟೀಮ್ ಇಂಡಿಯಾ ಸೆಮೀಸ್ ಕನಸನ್ನು ಜೀವಂತವಾಗಿಸಿದೆ. ಆದ್ರೆ, ಇಲ್ಲಿಂದ ಮುಂದಿನ ಹಾದಿ ಸಂಪೂರ್ಣವಾಗಿ ಭಾರತದ ಕೈಯಲ್ಲಿದೆ.
ಮುಂದಿದೆ 2 ಸವಾಲು
ದಕ್ಷಿಣ ಆಫ್ರಿಕಾ ಏನೋ ಸೆಮೀಸ್ ಹಾದಿಯನ್ನು ಭಾರತಕ್ಕೆ ಸುಲಭವಾಗಿಸಿದೆ. ಆದ್ರೆ, ಇಂದಿನ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮತ್ತು ಮಾ.01ರಂದು ನಡೆಯಲಿರುವ ವೆಸ್ಟ್ ಇಂಡೀಸ್ ಎದುರು ಸೂರ್ಯಕುಮಾರ್ ಯಾದವ್ ಪಡೆ ಗೆಲುವು ದಾಖಲಿಸಲೇಬೇಕು. ಇದು ಸಂಭವಿಸಿದರೆ ಮಾತ್ರ ಭಾರತ ತಂಡವು ಸೌತ್ ಆಫ್ರಿಕಾ ಜೊತೆಗೆ ಸೆಮೀಸ್ಗೆ ಲಗ್ಗೆಯಿಡಲಿದೆ.