- 6 ಪಂದ್ಯಗಳಲ್ಲಿ 4 ಗೆಲುವು, 2 ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್
- ವೈಭವ್ ಸೂರ್ಯವಂಶಿ, ಜೈಸ್ವಾಲ್ ಮತ್ತು ಜ್ಯುರೆಲ್ ಬಿಟ್ಟರೆ ಇನ್ಯಾರಿಂದಲೂ ಅಬ್ಬರದ ಬ್ಯಾಟಿಂಗ್ ಇಲ್ಲ
- ಕ್ಯಾಪ್ಟನ್ ಆಗಿ ರಿಯಾನ್ ಪರಾಗ್ ಮಾಡುತ್ತಿರುವುದೇನು?
- ಏನಿದು ಆರ್ಆರ್ ಫ್ರಾಂಚೈಸಿಯ ಲೆಕ್ಕಾಚಾರ?
Rajasthan Royals: ಪ್ರಸಕ್ತ ನಡೆಯುತ್ತಿರುವ 19ನೇ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪಡೆ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಹೆಚ್ಚು ಗೆಲುವನ್ನು ದಾಖಲಿಸಿದೆ. ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ 4 ರಲ್ಲಿ ಜಯ, 2ರಲ್ಲಿ ಸೋಲುಂಡಿರುವ ಆರ್ಆರ್ಗೆ ಬ್ಯಾಟಿಂಗ್ ಬಲವಿದೆಯೇ ಹೊರತು ಬೌಲಿಂಗ್ನಲ್ಲಿ ಅಂತಹ ಪ್ರದರ್ಶನ ಬಂದಿಲ್ಲ. ಇದೆಲ್ಲದಕ್ಕಿಂತ ಮುಖ್ಯವಾಗಿ, ನಾಯಕನ ಆಟವನ್ನೇ ತೋರದ ರಿಯಾನ್ ಪರಾಗ್ಗೆ ಕ್ಯಾಪ್ಟನ್ ಸ್ಥಾನ ನೀಡಿರುವ ಫ್ರಾಂಚೈಸಿಗೆ ಏನಾಗಿದೆ ಎಂಬುದೇ ಸದ್ಯದ ಪ್ರಶ್ನೆ.
ಹಾಲಿ ಚಾಂಪಿಯನ್ಸ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ ಸಂಜು ಸ್ಯಾಮ್ಸನ್ ಇದ್ದರು. ಆದರೆ, ಸಿಎಸ್ಕೆಯೊಂದಿಗೆ ಟ್ರೇಡ್ ಮಾಡಿದ ಆರ್ಆರ್, ಸಂಜು ಬದಲಿಗೆ ರವೀಂದ್ರ ಜಡೇಜಾರನ್ನು ಕರೆದುಕೊಂಡಿತು. ಬಹುತೇಕರು, ಜಡ್ಡುಗೆ ಕ್ಯಾಪ್ಟನ್ ಸ್ಥಾನ ಖಚಿತ ಎಂದು ನಿರೀಕ್ಷಿಸಿದ್ದರು. ಆದರೆ, ಫ್ರಾಂಚೈಸಿ ರಿಯಾನ್ ಪರಾಗ್ಗೆ ಕ್ಯಾಪ್ಟನ್ ಸ್ಥಾನ ನೀಡುವ ಮೂಲಕ ತಂಡದ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿತು. ಇಲ್ಲಿ ಯಾವ ಆಧಾರದ ಮೇಲೆ ಪರಾಗ್ಗೆ ನಾಯಕನ ಸ್ಥಾನ ಕೊಟ್ಟಿದ್ದಾರೆ ಅನ್ನೋದು ಪ್ರಶ್ನಾತೀತ.
ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ 57 ರನ್ಗಳಿಂದ ಸೋತ ಆರ್ಆರ್, ಕಳೆದ ಮ್ಯಾಚ್ನಲ್ಲಿ ಕೋಲ್ಕತ ನೈಟ್ ರೈಡರ್ಸ್ ಎದುರು ಹೀನಾಯ ಸೋಲು ಅನುಭವಿಸಿತು. ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜ್ಯುರೆಲ್ ಅವರ ಬಲಿಷ್ಠ ಬ್ಯಾಟಿಂಗ್ ತಂಡದ ದೊಡ್ಡ ಶಕ್ತಿಯಾಗಿದೆ. ಈ ಮೂವರ ವಿಕೆಟ್ ಹೋದರೆ, ನಂತರ ಬಂದವರು ಹೆಚ್ಚು ಕಾಲ ಕ್ರೀಸ್ನಲ್ಲಿ ಉಳಿಯಲು ಪರದಾಡುತ್ತಾರೆ. ಅದರಲ್ಲಿ, ಕ್ಯಾಪ್ಟನ್ ರಿಯಾನ್ ಪರಾಗ್ ಮೊದಲು.
ನಾಯಕನಾಗಿ ಜವಾಬ್ದಾರಿ ಹೊತ್ತು, ಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಬೇಕಾದ ರಿಯಾನ್ ಪರಾಗ್, ತಮಗೆ ಸಿಕ್ಕ ಅವಕಾಶಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವುದು ಗಮನಾರ್ಹ. ಇಲ್ಲಿಯವರೆಗೆ ಆಡಿರುವ ಅಷ್ಟು ಪಂದ್ಯಗಳಲ್ಲಿ ಪರಾಗ್ ಗಳಿಸಿರುವ ಅತಿ ಹೆಚ್ಚು ಸ್ಕೋರ್ ಎಂದರೆ ಅದು 20 ರನ್ ಅಷ್ಟೇ. ಬ್ಯಾಟಿಂಗ್ ಲೈನ್ನಲ್ಲಿ ಟಾಪ್ ಆರ್ಡರ್ನ ಮೂವರನ್ನು ಹೊರತುಪಡಿಸಿದರೆ, ಇನ್ನೆಲ್ಲರೂ ಸ್ಕೋರ್ ತಂದುಕೊಡಲು ಹೆಣಗಾಡುತ್ತಿರುವುದು ಫ್ರಾಂಚೈಸಿಗೆ ಚಿಂತಿಸುವ ವಿಷಯ. ಅದರಲ್ಲೂ ಕ್ಯಾಪ್ಟನ್ ಆಟ ಮಾತ್ರ ಪ್ರಶ್ನಿಸಲೇಬೇಕಿದೆ.
ಇನ್ನು ಪರಾಗ್ ನಂತರ ಬರುವ ರವೀಂದ್ರ ಜಡೇಜಾ, ಶಿಮ್ರಾನ್ ಹೆಟ್ಮೈರ್ ಕೆಲವು ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ನೀಡುವ ಮೂಲಕ ತಂಡದ ಪರ ಜವಾಬ್ದಾರಿಯ ಆಟ ತೋರಿದ್ದಾರೆ. ಆದರೆ, ನಾಯಕನಾಗಿ ಕಣಕ್ಕಿಳಿಯುವ ಪರಾಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಅಂತಹ ಕಮಾಲ್ ಮಾಡದಿರುವುದು ಕ್ಯಾಪ್ಟನ್ ಸ್ಥಾನವನ್ನು ಪ್ರಶ್ನಿಸದೆ ಬಿಡದು. ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ ರಿಯಾನ್ ಪರಾಗ್ ಗಳಿಸಿದ ಒಟ್ಟು ಹಾಗೂ ಪ್ರತ್ಯೇಕ ರನ್ ಎಷ್ಟು ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಪರಾಗ್ ಬ್ಯಾಟಿಂಗ್ ಇನ್ನಿಂಗ್ಸ್ ವಿವರ
1. ಚೆನ್ನೈ ಸೂಪರ್ ಕಿಂಗ್ಸ್ ಎದುರು 14 (11 ಎಸೆತ) ರನ್
2. ಗುಜರಾತ್ ಟೈಟನ್ಸ್ ವಿರುದ್ಧ 8 (4 ಎಸೆತ) ರನ್
3. ಮುಂಬೈ ಇಂಡಿಯನ್ಸ್ ಎದುರು 20 (10 ಎಸೆತ) ರನ್
4. ಆರ್ಸಿಬಿ ವಿರುದ್ಧ 3 (5 ಎಸೆತ) ರನ್
5. ಎಸ್ಆರ್ಎಚ್ ಎದುರು 4 (6 ಎಸೆತ) ರನ್
6. ಕೆಕೆಆರ್ ವಿರುದ್ಧ 12 (14 ಎಸೆತ) ರನ್