ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ
- 10 ವರ್ಷಗಳ ಬಳಿಕ ಐಪಿಎಲ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುವ ಅವಕಾಶದಿಂದ ಬೆಂಗಳೂರು ವಂಚಿತ
- ಬೆಂಗಳೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯ ಅಹಮದಾಬಾದ್ ಕ್ರೀಡಾಂಗಣಕ್ಕೆ ಶಿಫ್ಟ್
- ಶಾಸಕರ ಉಚಿತ ಟಿಕೆಟ್ಗಳ ಬೇಡಿಕೆಯೇ ಸ್ಥಳಾಂತರಕ್ಕೆ ಮೂಲ ಕಾರಣ
ನವದೆಹಲಿ: ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಭರಪೂರ ಮನರಂಜನೆ ಒದಗಿಸುವಲ್ಲಿ ಯಶಸ್ವಿಯಾಗಿದೆ. 10 ಬಲಿಷ್ಠ ತಂಡಗಳ ಪೈಕಿ ನಾಲ್ಕೈದು ತಂಡಗಳು ಸದ್ಯ ಪ್ಲೇಆಫ್ ರೇಸ್ಗೆ ಭರ್ಜರಿ ಪೈಪೋಟಿ ನೀಡುತ್ತಿವೆ. ಈ ಮಧ್ಯೆ, ಟ್ರೋಫಿಗಾಗಿ ನಡೆಯುವ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುವುದು ಯಾವ ರಾಜ್ಯ ಎಂಬ ಪ್ರಶ್ನೆ ಉದ್ಭವಿಸುತ್ತಿದ್ದಂತೆ ಬೆಂಗಳೂರು ಎಂದ ಕನ್ನಡಿಗರಿಗೆ ಭಾರೀ ನಿರಾಶೆ ಉಂಟಾಗಿದೆ. ಹತ್ತು ವರ್ಷಗಳ ಬಳಿಕ ಐಪಿಎಲ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುವ ಅವಕಾಶದಿಂದ ಸಿಲಿಕಾನ್ ಸಿಟಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ವಂಚಿತವಾಗಿದೆ.
19ನೇ ಆವೃತ್ತಿಯ ಪ್ಲೇಆಫ್ ಹಂತದ ಪಂದ್ಯಗಳ ತಾಣಗಳನ್ನು ಬಿಸಿಸಿಐ ಬುಧವಾರ ಅಂತಿಮಗೊಳಿಸಿದ್ದು, ಎಂ. ಚಿನ್ನಸ್ವಾಮಿ ಬದಲಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರಂದು ಪ್ರಶಸ್ತಿ ಸುತ್ತಿನ ಕಾದಾಟ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಮೂರು ಪ್ಲೇಆಫ್ ಪಂದ್ಯಗಳು ಧರ್ಮಶಾಲಾ (1), ಮುಲ್ಲನ್‌ಪುರದಲ್ಲಿ (2) ನಿಗದಿಯಾಗಿವೆ. ಅಲ್ಲಿಗೆ, ನಾಲ್ಕನೇ ಬಾರಿಗೆ ಐಪಿಎಲ್ ಪ್ರಶಸ್ತಿಗಾಗಿ ನಡೆಯುವ ಅಂತಿಮ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣದ ಪಾಲಾಗಿದೆ.
ಫೈನಲ್ ಪಂದ್ಯವನ್ನು ಆಯೋಜಿಸಲು ಬೆಂಗಳೂರು ನಗರವನ್ನು ಗೊತ್ತುಪಡಿಸಲಾಗಿತ್ತು. ಆದರೆ, ಬಿಸಿಸಿಐನ ಸ್ಥಾಪಿತ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರ ವ್ಯಾಪ್ತಿಯನ್ನು ಮೀರಿದ ಸ್ಥಳೀಯ ಕ್ರಿಕೆಟ್ ಸಂಸ್ಥೆ ಕೆಎಸ್‌ಸಿಎ ಮತ್ತು ಅಧಿಕಾರಿಗಳ ಕೆಲವು ಅವಶ್ಯಕತೆಗಳಿಂದಾಗಿ, ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಮರು ನಿಗದಿ ಮಾಡಲಾಗಿದೆ. ಆರ್‌ಸಿಬಿ ತಂಡ ಹಾಲಿ ಚಾಂಪಿಯನ್ ಆಗಿರುವುದರಿಂದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್-2, ಫೈನಲ್ ಪಂದ್ಯ ನಡೆಯಬೇಕಿತ್ತು. ನಿಯಮಗಳ ಪ್ರಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಆತಿಥ್ಯ ಸಿಗಬೇಕಿತ್ತು. ಪ್ಲೇಆಫ್ ಹಂತದ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎಯ ಸಿದ್ಧತೆ ಮತ್ತು ಇಚ್ಛಾಶಕ್ತಿಯ ಹೊರತಾಗಿಯೂ, ಈ ಪಂದ್ಯಗಳನ್ನು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಿರುವ ಬಗ್ಗೆ ಬಿಸಿಸಿಐ ನಿರ್ದಿಷ್ಟ ಕಾರಣಗಳನ್ನು ತನಗೆ ತಿಳಿಸಿಲ್ಲ ಎಂದು ಕೆಎಸ್‌ಸಿಎ ತಿಳಿಸಿದೆ.
ಶಾಸಕರ ಟಿಕೆಟ್ ಆಸೆಯೇ ಕಾರಣ!
ಐಪಿಎಲ್ ಆರಂಭದ ಬೆನ್ನಲ್ಲೇ ಕರ್ನಾಟಕದ ಕೆಲವು ಶಾಸಕರ ವಿಐಪಿ ಸೌಲಭ್ಯದ ಬೇಡಿಕೆ ಜತೆಗೆ ಎಲ್ಲ ಶಾಸಕರು ಮತ್ತು ಸಂಸದರಿಗೆ ತಲಾ 3 ಉಚಿತ ಐಪಿಎಲ್ ಟಿಕೆಟ್‌ಗಳನ್ನು ನೀಡಬೇಕು ಎನ್ನುವ ರಾಜ್ಯ ಸರ್ಕಾರದ ಷರತ್ತನ್ನು ಬಿಸಿಸಿಐ ಒಪ್ಪಿಲ್ಲ. ಇದೇ ಕಾರಣಕ್ಕೆ, ಪ್ಲೇಆಫ್ ಪಂದ್ಯಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿತ್ತು. ಇದೇ ಕಾರಣವಿರಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೀಗ, ಈ ಗೊಂದಲಕ್ಕೆ ಸ್ವತಃ ಬಿಸಿಸಿಐ ಅಧಿಕಾರಿಗಳೇ ಸ್ಪಷ್ಟತೆ ನೀಡಿದ್ದಾರೆ.
ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಸೈಕಿಯಾ, ಐಪಿಎಲ್ ನಿಯಮಗಳು ಆತಿಥೇಯ ಸಂಘಕ್ಕೆ ಒಟ್ಟು ಕ್ರೀಡಾಂಗಣ ಸಾಮರ್ಥ್ಯದ ಶೇ.15ರಷ್ಟು ಮಾತ್ರ ಉಚಿತ ಟಿಕೆಟ್‌ಗಳಿಗೆ ಅನುಮತಿ ನೀಡುತ್ತವೆ. ಐಪಿಎಲ್ ಶಿಷ್ಟಾಚಾರದ ಪ್ರಕಾರ, ನಾವು ಒಟ್ಟು ಆಸನ ಸಾಮರ್ಥ್ಯದ ಶೇ.15ರಷ್ಟು ಮಾತ್ರ ಉಚಿತ ಟಿಕೆಟ್‌ಗಳಾಗಿ ಆತಿಥೇಯ ಸಂಘಕ್ಕೆ ಒದಗಿಸಬೇಕಾಗುತ್ತದೆ. ಇದು ಪ್ರಮಾಣಿತ ಶಿಷ್ಟಾಚಾರ. ಎಲ್ಲಾ ಆತಿಥೇಯ ರಾಜ್ಯ ಸಂಘಗಳಿಗೂ ಹೀಗೆಯೇ ನಿಯಮ ಅನ್ವಯಿಸುವುದು ಎಂದರು.
"ಐಪಿಎಲ್ ಲೀಗ್ ಪಂದ್ಯಗಳ ಸಮಯದಲ್ಲಿ ಕೆಎಸ್‌ಸಿಎ ಹೆಚ್ಚಿನ ಟಿಕೆಟ್‌ಗಳನ್ನು ಕೇಳುತ್ತಿದೆ ಎಂಬ ವರದಿಗಳು ಬಿಸಿಸಿಐ ಗಮನಕ್ಕೆ ಬಂದಿವೆ. ಐಪಿಎಲ್ ಲೀಗ್ ಪಂದ್ಯಗಳ ಆತಿಥ್ಯದ ಸಮಯದಲ್ಲಿ, ಕರ್ನಾಟಕ ರಾಜ್ಯ ಸಂಘವು ನಿಗದಿತ ಶೇ.15ಕ್ಕಿಂತ ಹೆಚ್ಚಿನ ಸಂಖ್ಯೆಯ ಉಚಿತ ಟಿಕೆಟ್‌ಗಳನ್ನು ಪಡೆಯುತ್ತಿದೆ ಎಂದು ಸೂಚಿಸುವ ವಿವಿಧ ಮೂಲಗಳಿಂದ ನಮಗೆ ಮಾಹಿತಿ ಬಂದಿದೆ. ಇದರ ಪರಿಣಾಮವಾಗಿ, ಈ ವಿಷಯದ ಬಗ್ಗೆ ನಿಖರವಾದ ವಿವರಗಳನ್ನು ಕೋರಿ ನಾವು ಕೆಎಸ್ಸಿಎಗೆ ಇಮೇಲ್ ಕಳುಹಿಸಿದ್ದೆವು. ಮೇ.02ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದಿಂದ ನಮಗೆ ಬಂದ ಇಮೇಲ್ ಪ್ರತಿಕ್ರಿಯೆ ನೋಡಿ ನಮಗೆ ಅಚ್ಚರಿಯಾಯಿತು" ಎಂದರು.
"ಆ ಇಮೇಲ್‌ನಲ್ಲಿ, ಶೇ.15ರಷ್ಟು ಉಚಿತ ಟಿಕೆಟ್ ಕೋಟಾಕ್ಕಿಂತ ಹೆಚ್ಚಾಗಿ, ತಮ್ಮ ಸದಸ್ಯರು, ಅಂಗಸಂಸ್ಥೆ ಕ್ಲಬ್‌ಗಳು ಮತ್ತು ಇತರರಿಗೆ ಹೆಚ್ಚುವರಿ, ಗಣನೀಯ ಟಿಕೆಟ್ ಹಂಚಿಕೆ ಅಗತ್ಯವಿರುತ್ತದೆ ಎಂದು ತಿಳಿಸಿದೆ. ಇನ್ನೂ ಆಶ್ಚರ್ಯಕರ ಎಂದರೆ, ಅವರು ತಮ್ಮ ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರಿಗೂ ಟಿಕೆಟ್‌ಗಳನ್ನು ಕೇಳಿದ್ದಾರೆ. ಕರ್ನಾಟಕ ಸರ್ಕಾರಕ್ಕೆ 700 ಉಚಿತ ಟಿಕೆಟ್‌ಗಳನ್ನು ಕೋರಿದ್ದಾರೆ. ಹೀಗಾಗಿ, ಶೇ.15ರಷ್ಟು ಹಂಚಿಕೆಯ ಜೊತೆಗೆ, ಅವರು ಸುಮಾರು 10,000 ಹೆಚ್ಚುವರಿ ಟಿಕೆಟ್‌ಗಳನ್ನು ಮನವಿ ಮಾಡಿಕೊಂಡಿರುವುದು ನಮಗೆ ಗೊತ್ತಾಗಿದೆ" ಎಂದು ಹೇಳಿದರು.