ಶುಭಮನ್ ಗಿಲ್, ಟೀಮ್ ಇಂಡಿಯಾ
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ
- ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಸ್ಯಾಮ್ಸನ್ ಪಾಲು
- ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದ ಫೋಟೋ ಹಂಚಿಕೊಂಡ ಶುಭಮನ್ ಗಿಲ್
- ಎಲ್ಲರಿಗೂ ಕಂಡಿದ್ದು ಗಿಲ್ಗೆ ಮಾತ್ರ ಕಾಣಲಿಲ್ವಾ ಎಂದು ಫ್ಯಾನ್ಸ್ ಬೇಸರ
ಬೆಂಗಳೂರು: ಮಾ.08ರ ರಾತ್ರಿ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆದಿದ್ದು ಹಿಸ್ಟರಿ ರಿಪೀಟ್. ನ್ಯೂಜಿಲೆಂಡ್ ಎದುರು 96 ರನ್ಗಳ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಮೂರನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿದ್ದು ಇತಿಹಾಸ. ಈ ಟೂರ್ನಿಯಲ್ಲಿ ಎಲ್ಲರ ಹೃದಯ ಗೆದ್ದ ದಕ್ಷಿಣ ಭಾರತದ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson), ಫೈನಲ್ ಪಂದ್ಯದಲ್ಲಿಯೂ ತಂಡದ ಪರ ಅದ್ಭುತ ಇನ್ನಿಂಗ್ಸ್ ನೀಡಿದ್ದು ರೋಚಕ.
89, 97, 89 ರನ್
46 ಎಸೆತಗಳಲ್ಲಿ 89 ರನ್ಗಳ ಉತ್ತಮ ಕೊಡುಗೆ ನೀಡಿ ಸ್ಯಾಮ್ಸನ್, ಸೂಪರ್-8, ಸೆಮಿಫೈನಲ್ ಮತ್ತು ಫೈನಲ್ನಂತಹ ಬಹುಮುಖ್ಯ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ಕೊಟ್ಟರು. ಇದೇ ಕಾರಣಕ್ಕೆ, ಅವರಿಗೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಕೂಡ ಲಭಿಸಿತು. ಹೀಗಿರುವಾಗ, ಪ್ರಶಸ್ತಿ ಗೆದ್ದ ಭಾರತ ತಂಡದ ಫೋಟೋ ಹಂಚಿಕೊಂಡು ಶುಭಕೋರಿದ ಭಾರತದ ಸ್ಟಾರ್ ಬ್ಯಾಟರ್, ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ಇದೊಂದು ಸಣ್ಣ ತಪ್ಪು ಗೊತ್ತಾಗಲಿಲ್ಲವೇ? ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾರೀ ಬೇಸರ ಹೊರಹಾಕಿದ್ದಾರೆ.
ಗಿಲ್ಗೆ ಸಂಜು ಕಂಡ್ರೆ ಕೋಪವೇಕೆ?
ಟೀಮ್ ಇಂಡಿಯಾಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶುಭಕೋರಿದ ಶುಭಮನ್ ಗಿಲ್, ಅಭಿನಂದನೆಗಳು ಎಂಬ ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ. ಆದರೆ, ನೆಟ್ಟಿಗರ ಕಣ್ಣು ಎಷ್ಟು ಚುರುಕಾಗಿದೆ ಎಂದರೆ, ಆ ಫೋಟೋದಲ್ಲಿ ತಂಡದ ಗೆಲುವಿಗೆ ಬಹುದೊಡ್ಡ ಕೊಡುಗೆ ನೀಡಿದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಇಲ್ಲದಿರುವುದನ್ನು ಪತ್ತೆಹಚ್ಚಿದ್ದಾರೆ. ಇದು ಖಚಿತವಾದ ಬಳಿಕ ಗಿಲ್ ನಡೆಗೆ ಕಿಡಿಕಾರಿರುವ ಫ್ಯಾನ್ಸ್, ಸಂಜುರನ್ನು ಎಡಿಟ್ ಮಾಡಿ ಹಾಕುವಂತ ಉದ್ದೇಶ ಏನಿತ್ತು ನಿಮಗೆ? ಅಂತಹ ಮುನಿಸು ಏನು? ಎಂದೆಲ್ಲ ಕಮೆಂಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅಸಲಿಯತ್ತೇ ಬೇರೆ!
ಅಷ್ಟಕ್ಕೂ, ಶುಭಮನ್ ಗಿಲ್ ಹಾಕಿರುವ ಫೋಟೋದಲ್ಲಿ ಸಂಜು ಸ್ಯಾಮ್ಸನ್ ಇಲ್ಲದಿರುವುದು ಹೌದು. ಆದರೆ, ಅದು ಎಡಿಟ್ ಅಥವಾ ರಿಮೂವಲ್ ಮಾಡಿರುವ ಫೋಟೋ ಏನೆಲ್ಲ. ಬದಲಿಗೆ, ಫೋಟೋಗ್ರಾಫರ್ ತೆಗೆದ ಹಲವಾರು ಟೀಮ್ ಇಂಡಿಯಾ ಫೋಟೋಗಳಲ್ಲಿ ಒಂದಾಗಿದೆ. ಗಿಲ್ ಪೋಸ್ಟ್ ಮಾಡಿರುವ ಛಾಯಾಚಿತ್ರದಲ್ಲಿ ಸಂಜು ನಿಂತಿಲ್ಲ. ದುರಾದೃಷ್ಟಕ್ಕೆ ಶುಭಮನ್, ಅದನ್ನೇ ಹಂಚಿಕೊಂಡಿರುವುದು ಸದ್ಯ ತಪ್ಪು ಕಲ್ಪನೆ ಮತ್ತು ಮಾಹಿತಿಗೆ ಕಾರಣವಾಗಿದೆ,(ಏಜೆನ್ಸೀಸ್)