Harmanpreet Kaur: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು 3-0 ಅಂತರದಲ್ಲಿ ಭಾರತ ಮಹಿಳಾ ತಂಡ ಕ್ಲೀನ್ ಸ್ವೀಪ್ ಸಾಧಿಸಿತು. ಈ ಪಂದ್ಯ ಗೆದ್ದ ಖುಷಿಯಲ್ಲಿ ಇಡೀ ತಂಡವಿದ್ದರೆ, ಅತ್ತ ಮೊದಲ ಇನ್ನಿಂಗ್ಸ್‌ನ ಬಳಿಕ ಮಾಜಿ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಕಣ್ಣೀರಾಕಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮಂಗಳವಾರ ರಾತ್ರಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 92 ರನ್‌ಗಳಿಂದ ಗೆಲುವು ನೋಡಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಏಳು ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ಹರ್ಮನ್‌ಪ್ರೀತ್ ಕೌರ್ ಅಜೇಯ 91 ಮತ್ತು ಶಫಾಲಿ ವರ್ಮಾ 69 ರನ್ ಗಳಿಸಿದರು. ಈ ಬೃಹತ್ ರನ್‌ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ, ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 124 ರನ್ ಗಳಿಸಿತು. ಇದರೊಂದಿಗೆ ಭಾರತ ವನಿತೆಯರ ತಂಡ ಸರಣಿಯನ್ನು ಭರ್ಜರಿಯಾಗಿ ಗೆದ್ದು ಬೀಗಿತು.
ಈ ಪಂದ್ಯದಲ್ಲಿ ತಂಡದ ಪರ ಅದ್ಭುತ ಇನ್ನಿಂಗ್ಸ್ ಆಡಿದ ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ ಅಜೇಯ 91 ರನ್ ಗಳಿಸಿ, ತಂಡದ ಸದಸ್ಯರು ಮತ್ತು ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಹರ್ಮನ್, ಅದೇ ಪಂದ್ಯದ ಮೊದಲ ಇನ್ನಿಂಗ್ಸ್ ಬಳಿಕ ನಡೆದ ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದರು. ಈ ವೇಳೆ, ಪ್ರಶ್ನೆಗಳು ಮುಗಿಯುತ್ತಿದ್ದಂತೆ ಕೈಯಲ್ಲಿದ್ದ ಮೈಕ್ ಬಿಸಾಡಿ ಹೋಗಿದ್ದು ಇದೀಗ ಹಲವರ ಗೊಂದಲಗಳಿಗೆ ಕಾರಣವಾಗಿದೆ.
ಆಟದ ಕುರಿತು ಮಾತನಾಡಿದ ಹರ್ಮನ್, "ನಾನು ಬ್ಯಾಟಿಂಗ್ ಅನ್ನು ಎಂಜಾಯ್ ಮಾಡುತ್ತಿದ್ದೆ. ನನಗೆ ಬೇಕಾದ ರೀತಿಯಲ್ಲಿ ಆಡಲು ಪ್ರೋತ್ಸಾಹಿಸಿದ್ದಕ್ಕಾಗಿ ಮಾಜಿ ಕೋಚ್ ರಾಮನ್ ಅವರಿಗೆ ಧನ್ಯವಾದ. ಅವರ ಮಾತುಗಳು ನನಗೆ ಧೈರ್ಯ ತುಂಬಿದೆ. ಈ ಅತ್ಯುತ್ತಮ ಇನ್ನಿಂಗ್ಸ್‌ನ ಹಿಂದೆ ಕಠಿಣ ಅಭ್ಯಾಸ ಮತ್ತು ಕೋಚ್ನ ಪ್ರೋತ್ಸಾಹವಿದೆ. ಏಷ್ಯನ್ ಗೇಮ್ಸ್ ನಂತರ ನೆಟ್ಸ್ನಲ್ಲಿ ಹೆಚ್ಚು ಅಭ್ಯಾಸ ಮಾಡುವ ಅವಕಾಶ ಸಿಕ್ಕಿದೆ. ಈ ಸಮಯದಲ್ಲಿ, ಬ್ಯಾಟಿಂಗ್ ಕೋಚ್ ಹಿಮಾಂಶು ಚಾವ್ಲಾ ಅವರಿಗೂ ಧನ್ಯವಾದ" ಎಂದರು.
"ಬ್ಯಾಟಿಂಗ್ ಶೈಲಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಸುಧಾರಿಸಲು ನನಗೆ ತುಂಬಾ ಸಹಾಯ ಮಾಡಿದ್ದೀರಿ. ನಿರ್ದಿಷ್ಟವಾಗಿ ಬ್ಯಾಟ್ ಸ್ವಿಂಗ್ ಮತ್ತು ಅದೇ ವಿಧಾನವನ್ನು ಪದೇ ಪದೇ ಅಭ್ಯಾಸ ಮಾಡುವ ಮೂಲಕ ನನ್ನ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಸಾಧ್ಯವಾಯಿತು. ಎಲ್ಲಿಯವರೆಗೂ ಬ್ಯಾಟ್ ಮಾಡಲು ಸಾಧ್ಯವೋ, ಅಲ್ಲಿಯವರೆಗೆ ಆಡುವ ಬಯಕೆಯಿತ್ತು" ಎಂದು ಹೇಳುತ್ತಲೇ ಕಣ್ಣೀರಾಕಿದರು.
ಈ ತಿಂಗಳ ಆರಂಭದಲ್ಲಿ ಭಾರತ ಮಹಿಳಾ ತಂಡದ ನಾಯಕತ್ವದಿಂದ ಕೆಳಗಿಳಿದ ಹರ್ಮನ್‌ಪ್ರೀತ್, ಏಷ್ಯನ್ ಗೇಮ್ಸ್ ಟೂರ್ನಿಯು ಸೇರಿದಂತೆ ಕಳೆದ 10 ಪಂದ್ಯಗಳಲ್ಲಿ ಒಂದೇ ಅರ್ಧಶತಕ ಸಿಡಿಸಿರಲಿಲ್ಲ. ಇದು ಅವರ ಬ್ಯಾಟಿಂಗ್ ಫಾರ್ಮ್ ಅನ್ನು ಪ್ರಶ್ನಿಸುವಂತೆ ಮಾಡಿತ್ತು. ಟಿ20 ಏಷ್ಯಾ ಕಪ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದರೂ ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದಿರುವುದು ಅವರಿಗೆ ಬೇಸರ ತಂದಿತ್ತು. ಆದರೆ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡುವುದರ ಜತೆಗೆ ಆಕರ್ಷಕ ಅರ್ಧಶತಕ ಬಾರಿಸಿದ್ದು ಅವರನ್ನು ಭಾವುಕರನ್ನಾಗಿ ಮಾಡಿಸಿತು,(ಏಜೆನ್ಸೀಸ್).