- ಇಂಗ್ಲೆಂಡ್ ವಿರುದ್ಧ ಅಂಡರ್-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ
- ತಂಡದ ಪರ ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್
- ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿದ ಬೇಬಿ ಬಾಸ್
- ಶುಭಮನ್ ಗಿಲ್ ಪಡೆಗೆ ವೈಭವ್ ಎಂಟ್ರಿ ಏಕಿಲ್ಲ?
ನವದೆಹಲಿ: ನಿನ್ನೆ (ಫೆ.06) ಜಿಂಬಾಬ್ವೆಯ ಹರಾರೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ 100 ರನ್ಗಳ ಐತಿಹಾಸಿಕ ಜಯ ದಾಖಲಿಸಿತು. ಈ ಮೂಲಕ 19ರ ವಯೋಮಿತಿ ಕ್ರಿಕೆಟ್ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು. ಭಾರತ ತಂಡದ ಗೆಲುವು ಒಂದೆಡೆಯಾದರೆ, ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿದ ವೈಭವ್ ಸೂರ್ಯವಂಶಿ (Vaibhav Sooryavanshi) ಅಬ್ಬರದ ಬ್ಯಾಟಿಂಗ್ ವೈಖರಿಗೆ ಇಡೀ ಕ್ರಿಕೆಟ್ ಲೋಕವೇ ಬೆರಗಾಯಿತು.
14ನೇ ವಯಸ್ಸಿಗೆ ಇಷ್ಟೆಲ್ಲ..
ಐಪಿಎಲ್ 18ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಸ್ಫೋಟಕ ಓಪನಿಂಗ್ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದ ಟೀಮ್ ಇಂಡಿಯಾ ಯುವ ಆಟಗಾರ ವೈಭವ್ ಸೂರ್ಯವಂಶಿ, ಕೇವಲ 14ನೇ ವಯಸ್ಸಿಗೆ ತಮ್ಮ ಅಬ್ಬರದ ಬ್ಯಾಟಿಂಗ್ ಶೈಲಿಯಿಂದ ಇಡೀ ಕ್ರಿಕೆಟ್ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದರು. ಈಗ ಮತ್ತೊಮ್ಮೆ ಅದೇ ರೀತಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಮಾಡಿರುವುದು ನಿಜಕ್ಕೂ ಗಮನಾರ್ಹ.
15 ಸಿಕ್ಸರ್ ಮತ್ತು 15 ಬೌಂಡರಿ
ಕೇವಲ ಸ್ಫೋಟಕ ಶತಕಕ್ಕೆ ಮಾತ್ರ ಸುಮ್ಮನಾಗದ 'ಬೇಬಿ ಬಾಸ್', ಕ್ರಿಕೆಟ್ ಪ್ರಿಯರು ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸುವಂತ ಇನ್ನಿಂಗ್ಸ್ ಆಡಿದ್ದು ವಿಶೇಷ. ಕೇವಲ 80 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 15 ಬೌಂಡರಿ ನೆರವಿನಿಂದ 175 ರನ್ ಕಲೆಹಾಕಿದ ಸೂರ್ಯವಂಶಿ, ಈ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಯ ಜತೆಗೆ ವಿಶ್ವದಲ್ಲಿ ಎರಡನೇ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಇದೊಂದು ಶತಕದ ಮೂಲಕ ವೈಭವ್ ಹಲವಾರು ದಾಖಲೆಗಳನ್ನು ಉಡೀಸ್ ಮಾಡಿರುವುದು ಸದ್ಯ ಕ್ರಿಕೆಟ್ ಪ್ರಿಯರ ಹುಬ್ಬೇರಿಸಿದೆ.
ಬಿಸಿಸಿಐಗೆ ಆಸೆಯಿದೆ ಆದ್ರೆ...
ಅಂಡರ್-19 ಹಾಗೂ ಅಂತಾರಾಷ್ಟ್ರೀಯ ಆಟಗಾರರು ಆಡುವ ಐಪಿಎಲ್ ತಂಡದಲ್ಲಿ ಆಡುವ ವೈಭವ್, ಇಷ್ಟು ಚಿಕ್ಕ ವಯಸ್ಸಿನಲ್ಲಿ ಬಿರುಗಾಳಿಯಂತೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವಾಗ ಏಕೆ ಅವರಿಗೆ ಸೀನಿಯರ್ ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಕೊಡಬಾರದು ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. 'ಬೇಬಿ ಬಾಸ್'ರನ್ನು ಸೀನಿಯರ್ಸ್ ತಂಡದಲ್ಲಿ ಆಡಿಸುವ ಆಸೆ ಬಿಸಿಸಿಐಗೂ ಇದ್ದದ್ದೇ ಆದರೂ ಸ್ಥಾನ ಕೊಡುವುದು ತೀರ ಕಷ್ಟಸಾಧ್ಯವಾಗಿದೆ. ಅಷ್ಟಕ್ಕೂ, ಇಂತಹ ಒಳ್ಳೆಯ ಪ್ರತಿಭೆಯನ್ನು ಆಡಿಸಿದ್ರೆ ಏನು? ಯಾಕೆ ಆಗಲ್ಲ ಎಂಬ ಕುತೂಹಲಕಾರಿ ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.
ಭಾರತ ತಂಡದ ಹಿರಿಯ ತಂಡದಲ್ಲಿ ಸ್ಥಾನ ಸಿಗುತ್ತಿತ್ತು. ಆದರೆ, ಅದಕ್ಕಿರುವ ಬಹುದೊಡ್ಡ ಅಡಚಣೆಯೇ ಐಸಿಸಿ ಮೂಲ ನಿಯಮ. ಅದುವೇ ಕನಿಷ್ಠ ವಯಸ್ಸಿನ ನೀತಿ. ಯುವ ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಸಲುವಾಗಿ 2020ರಲ್ಲಿ ಪರಿಚಯಿಸಲಾದ ಈ ನಿಯಮವು, ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಒಬ್ಬ ಆಟಗಾರನಿಗೆ ಕನಿಷ್ಠ 15 ವರ್ಷ ವಯಸ್ಸಾಗಿರಬೇಕು ಎಂದು ಸ್ಪಷ್ಟಪಡಿಸಿದೆ.
ಮಾರ್ಚ್ 27, 2011ರಂದು ಅಂದರೆ ಮಹೇಂದ್ರ ಸಿಂಗ್ ಧೋನಿ ಅವರು ಭಾರತಕ್ಕೆ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದುಕೊಟ್ಟ ವರ್ಷದಲ್ಲೇ ಬೇಬಿ ಬಾಸ್ ಹುಟ್ಟಿದ್ದಾರೆ. ಫೆಬ್ರವರಿ 2026ರಲ್ಲಿ ತಮ್ಮ ತಂಡವನ್ನು ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ಗೆಲುವಿನಡೆಗೆ ಕೊಂಡೊಯ್ದ ವೈಭವ್ ಸೂರ್ಯವಂಶಿಗೆ ಇನ್ನೂ ವಯಸ್ಸು 14 ವರ್ಷವಷ್ಟೇ. ಹೀಗಾಗಿ, ಇನ್ನೊಂದು ವಸಂತಕ್ಕೆ ಕಾಲಿಟ್ಟರೆ ಅವರನ್ನೂ ಶುಭಮನ್ ಗಿಲ್ ಪಡೆಗೆ ಸೇರಿಸಿಕೊಳ್ಳಬೇಕೋ, ಬೇಡವೋ ಎಂಬುದನ್ನು ಬಿಸಿಸಿಐ ನಿರ್ಧರಿಸಲಿದೆ,(ಏಜೆನ್ಸೀಸ್).