ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ
- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಡಿಸೆಂಬರ್ 22 ರಂದು ವಾರ್ಷಿಕ ಸಾಮಾನ್ಯ ಸಭೆ
- ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಕೇಂದ್ರ ಒಪ್ಪಂದಗಳ ಕುರಿತು ಪ್ರಮುಖ ನಿರ್ಧಾರ
- ಬಿಸಿಸಿಐ ರೋ-ಕೊ ಜೋಡಿಯನ್ನು 'ಎ+' ದರ್ಜೆಯಿಂದ ತೆಗೆದುಹಾಕುವ ಸಾಧ್ಯತೆಗಳಿವೆ
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( BCCI ) ಡಿಸೆಂಬರ್ 22 ರಂದು ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು (ಎಜಿಎಂ) ನಡೆಸಲಿದೆ. ಈ ಸಭೆಯಲ್ಲಿ, ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಕೇಂದ್ರ ಒಪ್ಪಂದಗಳ ಕುರಿತು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ರೋ-ಕೊ ಜೋಡಿಯನ್ನು 'ಎ+' ದರ್ಜೆಯಿಂದ ತೆಗೆದುಹಾಕುವ ಸಾಧ್ಯತೆಗಳಿವೆ. ರೋ-ಕೊ ಜೋಡಿ ಟಿ20 ಮತ್ತು ಟೆಸ್ಟ್ ಸ್ವರೂಪಗಳಿಂದ ನಿವೃತ್ತಿ ಘೋಷಿಸಿ, ಕೇವಲ ಏಕದಿನ ಸ್ವರೂಪಗಳಲ್ಲಿ ಮಾತ್ರ ಮುಂದುವರಿಯುತ್ತಿರುವುದರಿಂದ ಈ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿದೆ ಎನ್ನಲಾಗುತ್ತಿದೆ. ಅಲ್ಲದೆ, ದೇಶೀಯ ಕ್ರಿಕೆಟ್‌ನಲ್ಲಿ ಮಹಿಳಾ ಆಟಗಾರ್ತಿಯರ ಸಂಬಳ ವಿಚಾರವನ್ನು ಕೂಡ ಎಜಿಎಂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.
ಈ ತಿಂಗಳಲ್ಲಿ ನಡೆಯುವುದು 31ನೇ ವಾರ್ಷಿಕ ಸಾಮಾನ್ಯ ಸಭೆ. ಮಿಥುನ್ ಮನ್ಹಾಸ್ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಡೆಯುವ ಮೊದಲ ವಾರ್ಷಿಕ ಸಾಮಾನ್ಯ ಸಭೆ ಇದಾಗಿದೆ. ಟಿ20 ಮತ್ತು ಟೆಸ್ಟ್ ಮಾದರಿಗಳಿಂದ ನಿವೃತ್ತಿ ಹೊಂದಿದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರನ್ನು ಎ+ ದರ್ಜೆಯಿಂದ ತೆಗೆದುಹಾಕಿ ಎ ವರ್ಗಕ್ಕೆ ಸೇರಿಸುವ ಸಾಧ್ಯತೆಗಳಿವೆ. ಈ ರೀತಿ ನಡೆದರೆ ಅವರ ವಾರ್ಷಿಕ ವೇತನದಲ್ಲಿ 2 ಕೋಟಿ ರೂ. ಕಡಿತಗೊಳ್ಳಲಿದೆ.
ಬಿಸಿಸಿಐ ಒಪ್ಪಂದನ್ನು ನಾಲ್ಕು ವಿಭಿನ್ನ ಶ್ರೇಣಿಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, ಎ+ (7 ಕೋಟಿ ರೂ.), ಎ (5 ಕೋಟಿ ರೂ.), ಬಿ (3 ಕೋಟಿ ರೂ.) ಮತ್ತು ಸಿ ದರ್ಜೆ (1 ಕೋಟಿ ರೂ.) ಆಗಿದೆ. ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮಾನ್ ಗಿಲ್ ಅವರನ್ನು ಎ+ ದರ್ಜೆಗೆ ಸೇರಿಸುವ ಸಾಧ್ಯತೆಗಳಿವೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ಈಗಾಗಲೇ ಎ+ ದರ್ಜೆಯಲ್ಲಿದ್ದಾರೆ.
ಪ್ರಸ್ತುತ 'ಎ' ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮಾನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಮತ್ತು ರಿಷಭ್ ಪಂತ್ ಇದ್ದಾರೆ. ಈ ವರ್ಷ ದೀರ್ಘಕಾಲದಿಂದ ಆಡದ ಶಮಿ ಅವರನ್ನು 'ಬಿ' ವರ್ಗಕ್ಕೆ ಇಳಿಸುವ ಸಾಧ್ಯತೆಯಿದೆ.
ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ 'ಬಿ' ವರ್ಗದಲ್ಲಿದ್ದಾರೆ. ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಮತ್ತು ವರುಣ್ ಚಕ್ರವರ್ತಿ 'ಸಿ' ವರ್ಗದಲ್ಲಿದ್ದಾರೆ.
ಆನ್‌ಲೈನ್‌ನಲ್ಲಿ ನಡೆಯಲಿರುವ 'ಎಜಿಎಂ'ನಲ್ಲಿ ಅಂಪೈರ್‌ಗಳು ಮತ್ತು ರೆಫರಿಗಳ ವೇತನದ ಬಗ್ಗೆಯೂ ಚರ್ಚಿಸಲಾಗುತ್ತದೆ, (ಏಜೆನ್ಸೀಸ್).