Asha Bhosle | ಕಪ್ಪು ಪಟ್ಟಿ ಧರಿಸಿ ಆಶಾ ಭೋಸ್ಲೆಗೆ ಗೌರವ ಸಲ್ಲಿಸಿದ ಮುಂಬೈ-ಆರ್‌ಸಿಬಿ ಆಟಗಾರರು 
ಕ್ರಿಕೆಟ್

ಸಂಗೀತದ ಧ್ರುವತಾರೆಗೆ ಶ್ರದ್ಧಾಂಜಲಿ...ಕಪ್ಪು ಪಟ್ಟಿ ಧರಿಸಿ ಆಶಾ ಭೋಸ್ಲೆಗೆ ಗೌರವ ಸಲ್ಲಿಸಿದ ಮುಂಬೈ-ಆರ್‌ಸಿಬಿ ಆಟಗಾರರು | Asha Bhosle

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೈವೋಲ್ಟೇಜ್ ಪಂದ್ಯದ ಆರಂಭಕ್ಕೂ ಮುನ್ನ ಇಡೀ ಕ್ರೀಡಾಂಗಣ ಶೋಕಸಾಗರದಲ್ಲಿ ಮುಳುಗಿದ್ದು, ಭಾರತದ ದಂತಕಥೆ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.
92ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದ ಈ ಅಪ್ರತಿಮ ಗಾಯಕಿಗೆ ಗೌರವ ಸಲ್ಲಿಸಲು ಎರಡೂ ತಂಡಗಳ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದರು. ಪಂದ್ಯ ಆರಂಭಕ್ಕೂ ಮುನ್ನ ಬೌಂಡರಿ ಗೆರೆಯ ಬಳಿ ನಿಂತು ಒಂದು ಕ್ಷಣ ಮೌನ ಆಚರಿಸುವ ಮೂಲಕ ಸಂಗೀತದ ಧ್ರುವತಾರೆಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಆಶಾ ಭೋಸ್ಲೆ ಅವರ ನಿಧನಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಕಾಲಾತೀತ ಧ್ವನಿ, ಭರಿಸಲಾಗದ ಪರಂಪರೆ ಎಂದು ಆರ್‌ಸಿಬಿ ಬಣ್ಣಿಸಿದ್ದರೆ, ಮುಂಬೈ ಇಂಡಿಯನ್ಸ್ ತಂಡವು ಆಶಾ ತಾಯಿ ಅವರ ಗೌರವಾರ್ಥವಾಗಿ ಕಪ್ಪು ಪಟ್ಟಿ ಧರಿಸುವ ಮೂಲಕ ಮೌನ ಆಚರಿಸಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಇಂದು ಭಾರತಕ್ಕೆ ಮತ್ತು ಪ್ರಪಂಚದಾದ್ಯಂತದ ಸಂಗೀತ ಪ್ರಿಯರಿಗೆ ಅತ್ಯಂತ ದುಃಖದ ದಿನ ಎಂದು ಸಂತಾಪ ಸೂಚಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನಿಮ್ಮ ಧ್ವನಿ ಲಕ್ಷಾಂತರ ಜನರನ್ನು ತಲುಪಿದ್ದು, ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ನಾಳೆ ಅಂತ್ಯಕ್ರಿಯೆ

ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯು ನಾಳೆ ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಅವರ ಪುತ್ರ ಆನಂದ್ ಭೋಸ್ಲೆ ತಿಳಿಸಿದ್ದಾರೆ. ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, 14 ಓವರ್​ಗಳಲ್ಲಿ ಆರ್​ಸಿಬಿ ತಂಡ 183 ರನ್​ ಗಳಿಸಿದೆ(ಏಜೆನ್ಸೀಸ್​).