ಕೊನೆಗೂ ಶುರುವಾಯ್ತು ಮಳೆ! ಪಂದ್ಯ ರದ್ದಾದರೆ ಯಾವ ತಂಡದ ಪಾಲಾಗಲಿದೆ ಟಿ20 ಸರಣಿ? ಹೀಗಿದೆ ಲೆಕ್ಕಾಚಾರ | IND vs WI T20 
ಕ್ರಿಕೆಟ್

ಕೊನೆಗೂ ಶುರುವಾಯ್ತು ಮಳೆ! ಪಂದ್ಯ ರದ್ದಾದರೆ ಯಾವ ತಂಡದ ಪಾಲಾಗಲಿದೆ ಟಿ20 ಸರಣಿ? ಹೀಗಿದೆ ಲೆಕ್ಕಾಚಾರ | IND vs WI T20

ಈಗ ಐದನೇ ಪಂದ್ಯದಲ್ಲಿ ಕೆರಿಬಿಯನ್​ ಪಡೆಯನ್ನು ಹೆಚ್ಚುವರಿ ರನ್​ಗಳಿಂದ ಮಣಿಸಿ, ತವರಿನಲ್ಲಿ ಸರಣಿ ಗೆದ್ದು ಭಾರಿ ಮುಖಭಂಗದಿಂದ ತಪ್ಪಿಸಿಕೊಳ್ಳಲು ಟೀಮ್ ಇಂಡಿಯಾ ಸಜ್ಜಾಗಿರುವಾಗಲೇ ಬೆಂಗಳೂರಿನಲ್ಲಿ ಮಳೆಯ ಅಡಚಣೆ ಆರಂಭಗೊಂಡಿದೆ.

IND vs WI T20: ಪ್ರಸಕ್ತ ತವರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯನ್ನು 2-2 ಅಂತರದಲ್ಲಿ ಸಮಬಲವಾಗಿಸಿರುವ ಎರಡೂ ತಂಡಗಳು, ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐದನೇ ಹಾಗೂ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಗೆಲುವಿಗಾಗಿ ಸೆಣಸಲಿದೆ. ಈ ಮ್ಯಾಚ್​ನಲ್ಲಿ, ಯಾರಿಗೆ ಸರಣಿ ಒಲಿಯಲಿದೆ ಎಂಬ ಕಾತರ ಸದ್ಯ ಕ್ರಿಕೆಟ್​ ಅಭಿಮಾನಿಗಳನ್ನು ಕಾಡುತ್ತಿರುವಾಗಲೇ, ವರುಣನ ಅಡಚಣೆ ಶುರುವಾಗಿದೆ.

ವಿಂಡೀಸ್​ ಎದುರು ನಾಲ್ಕನೇ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡ ಶ್ರೇಯಸ್ ಅಯ್ಯರ್ ಪಡೆ, ಬ್ಯಾಟ್ಸ್​ಮನ್​ ಮತ್ತು ಬೌಲರ್​ಗಳ ಹಾವಳಿಗೆ ನಡುಗಿ ಪಂದ್ಯವನ್ನು ಸುಲಭವಾಗಿ ಬಿಟ್ಟುಕೊಟ್ಟಿತು. ಈಗ ಐದನೇ ಪಂದ್ಯದಲ್ಲಿ ಕೆರಿಬಿಯನ್​ ಪಡೆಯನ್ನು ಹೆಚ್ಚುವರಿ ರನ್​ಗಳಿಂದ ಮಣಿಸಿ, ತವರಿನಲ್ಲಿ ಸರಣಿ ಗೆದ್ದು ಭಾರಿ ಮುಖಭಂಗದಿಂದ ತಪ್ಪಿಸಿಕೊಳ್ಳಲು ಟೀಮ್ ಇಂಡಿಯಾ ಸಜ್ಜಾಗಿರುವಾಗಲೇ ಬೆಂಗಳೂರಿನಲ್ಲಿ ಮಳೆಯ ಅಡಚಣೆ ಆರಂಭಗೊಂಡಿದೆ.

ಹವಾಮಾನ ಮುನ್ಸೂಚನೆ ಪ್ರಕಾರ...

ಮತ್ತೊಂದೆಡೆ, ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ಗೆ ಅಪರೂಪದ ಅವಕಾಶ ಲಭಿಸಿದೆ. 2002ರಿಂದ ಭಾರತದ ನೆಲದಲ್ಲಿ ಯಾವುದೇ ಮಾದರಿಯಲ್ಲೂ ವಿಂಡೀಸ್​ ಸರಣಿಯನ್ನು ಗೆದ್ದಿಲ್ಲ. ಹೀಗಿರುವಾಗ, ಕೆರಿಬಿಯನ್ ತಂಡವು ಈ ಪಂದ್ಯವನ್ನು ಗೆದ್ದರೆ, ಹೊಸ ದಾಖಲೆ ಜತೆಗೆ ಬಹಳ ವರ್ಷಗಳ ಕಾಯುವಿಕೆಯನ್ನು ರೋಚಕ ಗೆಲುವಿನ ಮೂಲಕ ಅಂತ್ಯಗೊಳಿಸಲಿದೆ. ಸದ್ಯ ಈ ನಿರ್ಣಾಯಕ ಪಂದ್ಯಕ್ಕೆ ಮಳೆ ಉಂಟಾಗಿದ್ದು, ಹವಾಮಾನ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಸಂಜೆಯಿಂದ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇದು ಪಂದ್ಯವನ್ನು ರದ್ದು ಮಾಡುವ ಸಾಧ್ಯತೆಯೂ ಇದೆ ಎಂಬ ಅನುಮಾನಗಳು ಮೂಡಿವೆ. ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಹವಾಮಾನ ಅನುಕೂಲಕರವಾಗಿರುತ್ತದೆ. ಆದರೆ, ಸಂಜೆ 4 ಗಂಟೆಯಿಂದ ಮಳೆಯ ಸಾಧ್ಯತೆ ಗಣನೀಯವಾಗಿ ಹೆಚ್ಚಾಗಲಿದೆ. ಗುಡುಗು, ಸಿಡಿಲು ಸಹಿತ ಜೋರಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಸಂಜೆ 4 ಗಂಟೆಗೆ ಶೇ.68ರಷ್ಟು, ಸಂಜೆ 5 ಗಂಟೆಗೆ ಶೇ.71ರಷ್ಟು ಮತ್ತು ಸಂಜೆ 6 ಗಂಟೆಗೆ ಶೇ.49 ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ಆರಂಭದ ಸಮಯವಾದ ಸಂಜೆ 7 ಗಂಟೆಗೆ ಶೇ.64 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ರಾತ್ರಿ 8 ಮತ್ತು 9 ಗಂಟೆಗೆ 49ರಷ್ಟು, ರಾತ್ರಿ 10 ಗಂಟೆಗೆ 56ರಷ್ಟು ಮತ್ತು ರಾತ್ರಿ 11 ಗಂಟೆಗೆ ಶೇ.49% ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು, ಟಿ20 ಪಂದ್ಯದಲ್ಲಿ ಫಲಿತಾಂಶ ಲಭಿಸಬೇಕಾದರೆ, ಉಭಯ ತಂಡಗಳು ತಲಾ ಐದು ಓವರ್‌ಗಳನ್ನು ಆಡಬೇಕಿದೆ. ಮಳೆಯಿಂದಾಗಿ ಮ್ಯಾಚ್​ ವಿಳಂಬವಾದರೆ ಕಡಿಮೆ ಓವರ್‌ಗಳಲ್ಲಿ ಪಂದ್ಯ ನಡೆಯಲಿದೆ. ಆದರೆ, ಮೊದಲ ಎಸೆತವನ್ನು ರಾತ್ರಿ 10:16ರೊಳಗೆ ಎಸೆಯದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಇದೇ ವೇಳೆ, ಐದು ಪಂದ್ಯಗಳ ಟಿ20 ಸರಣಿ 2-2 ಅಂತರದಲ್ಲಿ ಸಮಬಲವಾಗಲಿದೆ.

ಯಾವುದೇ ಮೀಸಲು ದಿನವಿಲ್ಲ

ಇದು ಸಂಭವಿಸಿದರೆ, ಎರಡೂ ತಂಡಗಳು ಕಪ್ ಅನ್ನು ಹಂಚಿಕೊಳ್ಳಲಿದೆ. ಕಾರಣ, ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ. ಮಳೆ ಕೊಂಚ ಬಿಡುವು ನೀಡಿದರೆ, ಬೇಗನೇ ಫೀಲ್ಡ್ ಸಿದ್ಧಪಡಿಸಿಕೊಂಡರೆ, ಕಡಿಮೆ ಓವರ್​ಗಳಲ್ಲಿ ಸರಣಿ ವಿಜೇತರನ್ನು ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ. ಟೀಮ್ ಇಂಡಿಯಾ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಆದರೀಗ, ಟಿ20 ಸರಣಿ ಗೆಲ್ಲುವವರ ನಿರ್ಧಾರಕ್ಕೆ ವರುಣ ಸಹಕಾರ ನೀಡಬೇಕು ಅಷ್ಟೇ,(ಏಜೆನ್ಸೀಸ್).