ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ
- ಸ್ಮೃತಿ ಮಂಧಾನ ದೇಶದ ಹೆಮ್ಮೆಯ ಮಹಿಳಾ ಕ್ರಿಕೆಟಿಗರಲ್ಲಿ ಪ್ರಮುಖರು
- ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಮತ್ತು ಉಪನಾಯಕಿ
- ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅನೇಕ ದಾಖಲೆಗಳನ್ನು ಸ್ಮೃತಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ
- ಸ್ಮೃತಿ ಮಂಧಾನ ಅವರ ಪಾಲಕರು ಸಾಕಷ್ಟು ಅಪಹಾಸ್ಯಗಳನ್ನು ಎದುರಿಸಿದ್ದಾರೆ
ಮುಂಬೈ: ಸ್ಮೃತಿ ಮಂಧಾನ ( Smriti Mandhana ) ದೇಶದ ಹೆಮ್ಮೆಯ ಮಹಿಳಾ ಕ್ರಿಕೆಟಿಗರಲ್ಲಿ ಪ್ರಮುಖರು. ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಮತ್ತು ಉಪನಾಯಕಿಯಾಗಿ ಮಹಿಳಾ ಕ್ರಿಕೆಟ್‌ನಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅನೇಕ ದಾಖಲೆಗಳನ್ನು ಸ್ಮೃತಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಅಂದಹಾಗೆ, ಸ್ಮೃತಿ ಅವರು 1996, ಜುಲೈ 18ರಂದು ಮಹಾರಾಷ್ಟ್ರದ ಸಾಂಗ್ಲಿ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. ಆಕೆಯ ತಾಯಿಯ ಹೆಸರು ಸ್ಮಿತಾ ಮಂಧಾನ ಮತ್ತು ತಂದೆಯ ಹೆಸರು ಶ್ರೀನಿವಾಸ್ ಮಂಧಾನ. ತನ್ನ ತಂದೆ ಮತ್ತು ಸಹೋದರನನ್ನು ನೋಡಿ, ತಾನು ಕ್ರಿಕೆಟಿಗಳಾಗಬೇಕೆಂಬ ಆಸೆ ಸ್ಮೃತಿಯ ಮನಸ್ಸಿನಲ್ಲಿ ಚಿಕ್ಕ ವಯಸ್ಸಿನಲ್ಲೇ ಚಿಗುರಿತು. ಬಳಿಕ ತಂದೆಯ ಪ್ರೋತ್ಸಾಹದಿಂದ ತನ್ನ ಗುರಿಯತ್ತ ಸ್ಮೃತಿ ಹೆಜ್ಜೆ ಹಾಕಿದರು. ನಿರಂತರ ಶ್ರಮದ ಪ್ರತಿಫಲವಾಗಿ ಸ್ಮೃತಿ ಮಂಧಾನ ಅವರು ಮಹಾರಾಷ್ಟ್ರದ ಅಂಡರ್ -15 ತಂಡಕ್ಕೆ ಆಯ್ಕೆಯಾದರು. ಅಲ್ಲದೆ, ಹನ್ನೊಂದನೇ ವಯಸ್ಸಿನಲ್ಲಿ ಅಂಡರ್ -19 ತಂಡವನ್ನು ಸೇರಿದರು. ಹದಿನಾರನೇ ವಯಸ್ಸಿನಲ್ಲಿ ಅಂದರೆ, 2013ರಲ್ಲಿ ಭಾರತೀಯ ತಂಡವನ್ನು ಪ್ರವೇಶಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಸ್ಮೃತಿ ಅವರು ಮತ್ತೆಂದಿಗೂ ಹಿಂತಿರುಗಿ ನೋಡಲಿಲ್ಲ.
ತಮ್ಮ ವೃತ್ತಿ ಜೀವನದಲ್ಲಿ ಕೆಲವು ಹಿನ್ನಡೆಗಳು ಎದುರಾದರು ಕೂಡ ಎಲ್ಲಿಯೂ ಧೃತಿಗೆಡದ ಸ್ಮೃತಿ, ತಮ್ಮ ದೃಢನಿಶ್ಚಯದಿಂದ ಆರಂಭಿಕ ಆಟಗಾರ್ತಿಯಾಗಿ ದಾಖಲೆಗಳನ್ನು ಮುರಿದು ಉನ್ನತ ಸ್ಥಾನದತ್ತ ಸಾಗಿದರು. ಅವರು ಅತ್ಯುತ್ತಮ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟಿಗಳೆಂಬ ಪ್ರಶಸ್ತಿ ಪಡೆದರು. ಭಾರತ ತಂಡದ ಉಪನಾಯಕಿಯಾಗಿರುವ 29 ವರ್ಷದ ಸ್ಮೃತಿ, 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ವಿಶ್ವಕಪ್ ಚಾಂಪಿಯನ್ ಆದರು. ಆದಾಗ್ಯೂ, ಸ್ಮೃತಿ ಅವರು ಕ್ರಿಕೆಟಿಗರಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ಅವರ ಪಾಲಕರು ಸಾಕಷ್ಟು ಅಪಹಾಸ್ಯವನ್ನು ಎದುರಿಸಿದ್ದಾರೆ.
ಹೌದು, 2023ರಲ್ಲಿ ನಡೆದ 15ನೇ ಆವೃತ್ತಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಸ್ವತಃ ಸ್ಮೃತಿ ಮಂಧಾನಾ ಅವರೇ ಈ ಮಾತುಗಳನ್ನು ಹೇಳಿದರು. ತಮ್ಮ ತಂದೆ ಎದುರಿಸಿದ ಅವಮಾನಗಳನ್ನು ನೆನೆದರು. ನಿರೂಪಕ ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ, ನಾನು ಮತ್ತು ನನ್ನ ಅಣ್ಣ ಬಾಲ್ಯದಿಂದಲೂ ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತೇವೆ. ನನ್ನ ತಂದೆ ಕೂಡ ಕ್ರಿಕೆಟಿಗನಾಗಬೇಕೆಂದು ಬಯಸಿದ್ದರು. ಆದರೆ, ಅವರ ಕುಟುಂಬ ಅವರಿಗೆ ಅವಕಾಶ ನೀಡಲಿಲ್ಲ. ಆದ್ದರಿಂದ ನನ್ನ ತಂದೆ ನಮ್ಮ ಮೂಲಕ ತಮ್ಮ ಕನಸು ನನಸಾಗಬೇಕೆಂದು ಬಯಸಿದ್ದರು. ಓರ್ವ ಮಾಮೂಲಿ ಭಾರತೀಯ ತಂದೆಯಾಗಿ ಅದು ಅವರ ಆಸೆಯಾಗಿತ್ತು. ನಾನು ನನ್ನ ತಾಯಿಯ ಗರ್ಭದಲ್ಲಿರುವಾಗಲೇ ನನ್ನ ತಂದೆಯ ಕನಸು ಅದೇ ಆಗಿತ್ತು ಎಂದರು.
ನಾನು ನನ್ನ ಸಹೋದರನೊಂದಿಗೆ ಕ್ರಿಕೆಟ್ ಆಡುತ್ತಿದ್ದೆ. ಆತನ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ, ನಾನು ಅವನ ಬ್ಯಾಟಿಂಗ್ ಶೈಲಿಯನ್ನು ಗಮನಿಸುತ್ತಿದ್ದೆ. ವಾಸ್ತವವಾಗಿ ನಾನು ರೈಟ್ ಹ್ಯಾಂಡ್ ಮತ್ತು ನನ್ನ ಸಹೋದರ ಲೆಫ್ಟ್ ಹ್ಯಾಂಡ್. ಆದರೆ, ನನ್ನ ಸಹೋದರ ಬ್ಯಾಟಿಂಗ್ ಮಾಡುವುದನ್ನು ನೋಡುವ ಮೂಲಕ ನಾನು ಲೈಫ್ಟ್ ಹ್ಯಾಂಡ್ ಆಟಗಾರಳಾದೆ ಎಂದು ಸ್ಮೃತಿ ಹೇಳಿಕೊಂಡರು.
ಎಲ್ಲ ಹುಡುಗಿಯರ ಪಾಲಕರಂತೆ ನಮ್ಮ ಪಾಲಕರು ಕೂಡ ಕೆಲವು ಅವಮಾನಗಳನ್ನು ಎದುರಿಸಿದರು. ಕ್ರೀಡಾಪಟುವಿನ ಜೀವನ ಅಷ್ಟೊಂದು ಸುಲಭವಲ್ಲ ಎಂದು ಹೇಳಿ ಅನೇಕ ಜನರು ನಮ್ಮನ್ನು ನಿರುತ್ಸಾಹಗೊಳಿಸಿದರು. ಹೇಳಬೇಕೆಂದರೆ, ಅವರೆಲ್ಲ ಒಂದು ರೀತಿಯಲ್ಲಿ ನಮಗೆ ಕಿರುಕುಳ ನೀಡಿದರು. ಬಿಸಿಲಿನಲ್ಲಿ ಆಡಿದರೆ, ಮುಖ ಕೆಂಪಾಗುತ್ತದೆ ಮತ್ತು ಮುಖ ಕಪ್ಪಾಗುತ್ತದೆ. ಆ ರೀತಿ ಆದಾಗ ಆಕೆಯನ್ನು ಯಾರು ಮದುವೆಯಾಗುತ್ತಾರೆ? ಎಂದು ಬೆದರಿಕೆ ಹಾಕಿದರು. ಆದರೆ, ಯಾರು ಏನೇ ಅಂದರು ನನ್ನ ಪಾಲಕರು ಮಾತ್ರ ಹಿಂದೆ ಸರಿಯಲಿಲ್ಲ. ಕ್ರಿಕೆಟ್ ಆಡಲು ನನ್ನನ್ನು ಪ್ರೋತ್ಸಾಹಿಸಿದರು ಎಂದು ಸ್ಮೃತಿ ಮಂಧಾನ ತನ್ನ ಹಿಂದಿನ ನೆನಪುಗಳನ್ನು ಕಾರ್ಯಕ್ರಮದಲ್ಲಿ ಮೆಲಕು ಹಾಕಿದರು.
ತನ್ನ ತಂದೆಯ ಮಹತ್ವಾಕಾಂಕ್ಷೆಗಳಿಗೆ ಅನುಗುಣವಾಗಿ ಕ್ರಿಕೆಟಿಗರಾಗಿ ಬೆಳೆದ ಸ್ಮೃತಿ, ಅತ್ಯುತ್ತಮ ಏಕದಿನ ಮಹಿಳಾ ಕ್ರಿಕೆಟಿಗ ಎಂದು ಪ್ರಶಂಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ, ಅವರು ಭಾರತ ಪರ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 629 ರನ್ ಗಳಿಸಿದ್ದಾರೆ. ಅದೇ ರೀತಿ 117 ಏಕದಿನ ಪಂದ್ಯಗಳಲ್ಲಿ 5322 ರನ್ ಮತ್ತು 153 ಟಿ20ಐಗಳಲ್ಲಿ 3982 ರನ್ ಗಳಿಸಿದ್ದಾರೆ. ಸ್ಮೃತಿ ಅಂಡರ್-19 ಮಟ್ಟದಲ್ಲಿ ಲಿಸ್ಟ್-ಎ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಮೊದಲ ಮಹಿಳಾ ಕ್ರಿಕೆಟಿಗಳೆಂಬ ದಾಖಲೆ ಹೊಂದಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲ ಪ್ರಶಸ್ತಿಗೆ ಕೊಂಡೊಯ್ದ ನಾಯಕಿಯಾಗಿ ಕ್ರಿಕೆಟ್ ಜಗತ್ತಿನಲ್ಲಿ ಈಗ ಉತ್ತುಂಗ ಸ್ಥಾನದಲ್ಲಿದ್ದಾರೆ.
ತಮ್ಮ ವೃತ್ತಿಜೀವನದ ಉತ್ತುಂಗಕ್ಕೇರಿರುವ ಸ್ಮೃತಿ, ವಿಶ್ವ ಚಾಂಪಿಯನ್ ಆದ ನಂತರ ವಿವಾಹಕ್ಕೆ ಸಿದ್ಧರಾಗಿದ್ದಾರೆ. ತಮ್ಮ ಗೆಳೆಯ ಪಲಾಶ್ ಮುಚ್ಚಲ್ ಅವರೊಂದಿಗೆ ವಿವಾಹವಾಗಲು ಹಲ್ದಿ ಮತ್ತು ಸಂಗೀತ ಸಮಾರಂಭಗಳಲ್ಲಿ ನೃತ್ಯ ಮಾಡಿದರು. ಆದರೆ, ಕೊನೆಯ ಕ್ಷಣದಲ್ಲಿ, ಅವರ ತಂದೆ ಅನಾರೋಗ್ಯಕ್ಕೆ ಒಳಗಾದರು. ಆದ್ದರಿಂದ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಈ ಸಂದರ್ಭದಲ್ಲಿ, ಪಲಾಶ್ ವಿರುದ್ಧ ಅನೇಕ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಚಂಚಲ ಮನಸ್ಸಿನ ಪಲಾಶ್, ಸ್ಮೃತಿಗೆ ಮೋಸ ಮಾಡಿದ್ದಾರೆ ಎಂಬ ವದಂತಿಗಳಿವೆ. ಈ ಬಗ್ಗೆ ತಿಳಿದ ನಂತರ ಸ್ಮೃತಿಯ ತಂದೆಗೆ ಹೃದಯಾಘಾತವಾಗಿದೆ ಎಂಬ ವದಂತಿಗಳಿವೆ. ಆದರೆ, ಇದೆಲ್ಲ ವದಂತಿಗಳಷ್ಟೇ. ಈ ಬಗ್ಗೆ ಉಭಯ ಕುಟುಂಬಗಳಲ್ಲಿ ಯಾರೊಬ್ಬರು ಸ್ಪಷ್ಟನೆ ನೀಡಿಲ್ಲ. ಮದುವೆಯ ಬಗ್ಗೆ ಈವರೆಗೂ ಸ್ಪಷ್ಟತೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಮಾತನಾಡುವ ಸಾಧ್ಯತೆ ಇದೆ, (ಏಜೆನ್ಸೀಸ್).