ಯಾರಿಗೆ ಸಿಗಲಿದೆ ಲಂಕಾ ಟಿಕೆಟ್!: ಆಯ್ಕೆಗಾರರಿಗೆ ಸವಾಲಾದ ಆಟಗಾರರ ಫಿಟ್ನೆಸ್ ಸಮಸ್ಯೆ! 
ಕ್ರಿಕೆಟ್

ಯಾರಿಗೆ ಸಿಗಲಿದೆ ಲಂಕಾ ಟಿಕೆಟ್?: ಆಯ್ಕೆಗಾರರಿಗೆ ಸವಾಲಾದ ಆಟಗಾರರ ಫಿಟ್ನೆಸ್ ಸಮಸ್ಯೆ!

ನವದೆಹಲಿ: ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೂ ಮುನ್ನ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಗೊಂದಲದಲ್ಲಿ ಸಿಲುಕಿದೆ. ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಸಹಿತ ಹಲವು ಆಟಗಾರರು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ನಡುವೆ ಲಂಕಾ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ದೊಡ್ಡ ಸವಾಲೆನಿಸಿದೆ.
ಮೊಣಕಾಲಿನ ಗಾಯದ ಸಮಸ್ಯೆಯಿಂದ ಸುಧಾರಿಸಿಕೊಳ್ಳುತ್ತಿರುವ ಬುಮ್ರಾ ಜುಲೈ 30ರವರೆಗೆ ವಿಶ್ರಾಂತಿ ಪಡೆಯಲಿದ್ದು, ನಂತರ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ (ಸಿಒಇ) ಫಿಟ್ನೆಸ್ ಟೆಸ್ಟ್ ಎದುರಿಸಲಿದ್ದಾರೆ. ಸರಣಿಗೆ ಬುಮ್ರಾ ಅಲಭ್ಯರಾದರೆ, ವೇಗಿಗಳಾಗಿ ಮೊಹಮದ್ ಸಿರಾಜ್, ಗುರುನೂರ್ ಬ್ರಾರ್‌ಮತ್ತು ಪ್ರಸಿದ್ಧ ಕೃಷ್ಣ ಸ್ಥಾನ ಪಡೆಯುವ ನಿರೀಕ್ಷೆಯಿದೆ. 2025ರ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ನಿರ್ವಹಣೆ ತೋರಿದ್ದ ವೇಗಿ ಆಕಾಶ್ ದೀಪ್, ‘ರಿಟರ್ನ್ ಟು ಪ್ಲೇ’ ಪ್ರೋಟೋಕಾಲ್ ಪೂರೈಸಬೇಕಿದ್ದು, ಆಯ್ಕಗೆ ಅಲಭ್ಯರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸ್ನಾಯುಸೆಳೆತಕ್ಕೆ ಒಳಗಾಗಿರುವ ವಾಷಿಂಗ್ಟನ್ ಸುಂದರ್ ಆರಂಭಿಕ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದು, ಆಲ್ರೌಂಡರ್ ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಸಿಒಇ ಅಧಿಕಾರಿಗಳು ಅಧಿಕೃತಪಡಿಸಿದ್ದಾರೆ.
ವಾಷಿಂಗ್ಟನ್ ಎರಡನೇ ಟೆಸ್ಟ್ ವೇಳೆಗೆ ಫಿಟ್ ಆಗಲಿದ್ದು, ಒಂದು ಪಂದ್ಯಕ್ಕೆ ಅವರನ್ನು ಆಯ್ಕೆ ಸಮಿತಿ ಅವಕಾಶ ನೀಡುವುದೇ ಎಂಬುದು ಕಾದು ನೋಡಬೇಕಿದೆ. ಅವರ ಬದಲಿಗೆ ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಹರ್ಷ್ ದುಬೆ ಜತೆಗೆ ಸಾರಾಂಶ್ ಜೈನ್ ರೇಸ್‌ನಲ್ಲಿದ್ದಾರೆ. ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಸಹ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಶ್ರೀಲಂಕಾ ಪ್ರವಾಸಕ್ಕೆ ಮಂಗಳವಾರ ಭಾರತ ತಂಡದ ಆಯ್ಕೆ ನಡೆಯಲಿದ್ದು, ಮೊದಲ ಟೆಸ್ಟ್ ಆಗಸ್ಟ್ 15ರಂದು ಗಾಲೆಯಲ್ಲಿ ಆರಂಭವಾಗಲಿದೆ.
ಹಾರ್ದಿಕ್ ಪಾಂಡ್ಯ ಫಿಟ್!
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ ಆಗಿದ್ದು,
ಮಾಸಾಂತ್ಯಕ್ಕೆ ರಿಟರ್ನ್ ಟು ಪ್ಲೇ ಪ್ರೋಟೋಕಾಲ್‌ಗಳನ್ನು ಪೂರ್ಣಗೊಳಿಸಲಿದ್ದಾರೆ. ನಂತರ ಆಗಸ್ಟ್ ತಿಂಗಳಿನಿಂದ ಟೀಮ್ ಇಂಡಿಯಾದ ವೈಟ್ ಬಾಲ್ ಸರಣಿಗಳ ಆಯ್ಕೆಗೆ ಅವರು ಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪ್ರಸ್ತುತ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಎರಡು ಅವಧಿಯಲ್ಲಿ ಹಾರ್ದಿಕ್ ಬ್ಯಾಟಿಂಗ್-ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.