ಎಸ್ಆರ್ಎಚ್ ವೇಗಿ ಪ್ರಫುಲ್ ಹಿಂಗೆ
- ಸನ್‌ರೈಸರ್ಸ್ ಹೈದರಾಬಾದ್ ಮುಂದೆ ಸೋಲಿಗೆ ಶರಣಾದ ರಾಜಸ್ಥಾನ ರಾಯಲ್ಸ್
- ಮೊದಲ ಪಂದ್ಯದಲ್ಲೇ, ಮೊದಲ ಓವರ್ನಲ್ಲೇ ಅಪರೂಪದ ದಾಖಲೆ
- ಅಷ್ಟಕ್ಕೂ ಯಾರೀ ಪ್ರಫುಲ್ ಹಿಂಗೆ? ಇಲ್ಲಿದೆ ನೋಡಿ ಮಾಹಿತಿ
Praful Hinge: ನಿನ್ನೆ (ಏ.13) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಇಶಾನ್ ಕಿಶನ್ ಪಡೆ 57 ರನ್ಗಳ ಭಾರೀ ಅಂತರದಲ್ಲಿ ಜಯ ಸಾಧಿಸಿತು. ಆರ್ಆರ್ ಬಲಿಷ್ಠತೆಯನ್ನು ಕೇವಲ ಮೊದಲನೇ ಓವರ್ನಲ್ಲೇ ಕುಗ್ಗಿಸಿದ ಎಸ್ಆರ್ಎಚ್ನ ಯುವ ವೇಗಿ ಬಗ್ಗೆ ತಿಳಿದುಕೊಳ್ಳಲು ಇದೀಗ ಕ್ರಿಕೆಟ್ ಪ್ರೇಮಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.
ಸತತ ಗೆಲುವುಗಳಿಂದ ತಮ್ಮ ಬಲವನ್ನೇ ಮರೆತಿದ್ದ ಆರ್ಆರ್ ಕಡೆಗೂ ಐಪಿಎಲ್ 19ನೇ ಆವೃತ್ತಿಯಲ್ಲಿ ತನ್ನ ಮೊದಲ ಸೋಲನ್ನು ಕಂಡಿತು. ಈ ಸೋಲಿಗೆ ಮುಖ್ಯ ಕಾರಣವೇ ಸನ್‌ರೈಸರ್ಸ್ ಹೈದರಾಬಾದ್ ವೇಗಿ ಪ್ರಫುಲ್ ಹಿಂಗೆ ಅವರು ಮಾಡಿದ ಮ್ಯಾಜಿಕ್. ತನ್ನ ಚೊಚ್ಚಲ ಪಂದ್ಯದ, ಮೊದಲನೇ ಓವರ್ನಲ್ಲಿ ಕೇವಲ ಒಂದು ರನ್ ಕೊಟ್ಟು ಮೂರು ಬಹುಮುಖ್ಯ ವಿಕೆಟ್‌ಗಳನ್ನು ಪಡೆದ ಈತ, 19 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಯಾವೊಬ್ಬ ಅಂತಾರಾಷ್ಟ್ರೀಯ ಹಾಗೂ ಅನುಭವಿ ಬೌಲರ್ಗಳು ಮಾಡದ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.
ದ್ವಿತೀಯ ಇನ್ನಿಂಗ್ಸ್ 217 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ವೈಭವ್ ಸೂರ್ಯವಂಶಿಯನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ ಪ್ರಫುಲ್, ಅವರ ನಂತರದಲ್ಲಿ ಬಂದ ಧ್ರುವ್ ಜ್ಯುರೆಲ್ ಮತ್ತು ಲುವಾನ್-ಡ್ರೆ ಪ್ರಿಟೋರಿಯಸ್ ವಿಕೆಟ್ ಪಡೆದು ತಂಡದ ಪರ ಮಿಂಚಿದರು. 4 ಓವರ್ಗಳನ್ನು ಪೂರ್ತಿಯಾಗಿ ಮುಗಿಸಿದ ಅವರು, ಕೇವಲ 34 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಡೆಬ್ಯೂ ಮ್ಯಾಚ್ನಲ್ಲೇ ವಿಶೇಷ ದಾಖಲೆ ಬರೆದ ಯುವ ಪ್ರತಿಭೆ ಎಂಬ ಹೆಗ್ಗಳಿಕೆಗೆ ಪ್ರಫುಲ್ ಪಾತ್ರರಾಗಿದ್ದಾರೆ.
ಯಾರೀ ಪ್ರಫುಲ್ ಹಿಂಗೆ?
ಮೂಲತಃ ಮಹಾರಾಷ್ಟ್ರದ ನಾಗ್ಪುರದ ಪ್ರಪುಲ್ ಸಿಂಗ್, ಜನಿಸಿದ್ದು ಜನವರಿ 18, 2002ರಂದು. ಬಡ ಕುಟುಂಬದಲ್ಲಿ ಹುಟ್ಟಿದ ಈ ಪ್ರತಿಭೆ, ಆರಂಭದಲ್ಲಿ, ಕ್ರಿಕೆಟ್ಗೆ ಹೋಗಲು ಸಾಧ್ಯವಾಗಲಿಲ್ಲ. ಕಾರಣ, ತಂದೆಗೆ ತಮ್ಮ ಮಗ ಕ್ರಿಕೆಟ್ ಆಡುವುದು ಕಿಂಚಿತ್ತು ಇಷ್ಟವಿರೋದಿಲ್ಲ. ಆದರೆ, 12ನೇ ವಯಸ್ಸಿನಲ್ಲಿ, ಬೇಸಿಗೆ ಶಿಬಿರದಲ್ಲಿ ಪ್ರಪುಲ್ ಅವರ ಪ್ರತಿಭೆಯನ್ನು ಗಮನಿಸಿದ ಅವರು, ಇಲ್ಲ ಮಗನಿಗೆ ಕ್ರಿಕೆಟ್ನಲ್ಲಿ ಭವಿಷ್ಯವಿದೆ ಎಂಬುದನ್ನು ಅರಿತು, ಕಡೆಗೂ ಗ್ರೀನ್ ಸಿಗ್ನಲ್ ನೀಡಿದರು.
13ನೇ ವಯಸ್ಸಿನಲ್ಲಿ ತಮ್ಮ ಬೌಲಿಂಗ್ ಕೌಶಲ್ಯವನ್ನು ಹೆಚ್ಚಿಸಿಕೊಂಡ ಪ್ರಫುಲ್, 16ನೇ ವಯಸ್ಸಿಗೆ ಕೋಚ್ ಸಂಜೀವ್ ಅವರ ನೇತೃತ್ವದಲ್ಲಿ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿಗೆ ಸೇರಿಕೊಂಡರು. ಇಲ್ಲೇ ಅವರ ಕರಿಯರ್ಗೆ ತಿರುವು ಸಿಕ್ಕಿದ್ದು. ಅಂಡರ್-19 ಟ್ರಯಲ್ಸ್‌ನಲ್ಲಿ 36 ವಿಕೆಟ್‌ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು. 10 ಪ್ರಥಮ ದರ್ಜೆ ಪಂದ್ಯಗಳಲ್ಲಿ 27 ವಿಕೆಟ್‌ಗಳು ಮತ್ತು ಆರು ಲಿಸ್ಟ್ ಎ ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದರು. ವಿದರ್ಭ ಪ್ರೊ ಟಿ20 ಲೀಗ್‌ನಲ್ಲಿ ನೆಕೊ ಮಾಸ್ಟರ್ ಬ್ಲಾಸ್ಟರ್ ಚಾಂಪಿಯನ್ ಆಗಿ ಹೊರಹೊಮ್ಮಲು ಸಹಾಯ ಮಾಡುವಲ್ಲಿ ಪ್ರಫುಲ್ ಪ್ರಮುಖ ಪಾತ್ರ ವಹಿಸಿದರು, 6 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದರು.
ವರುಣ್ ಆರನ್ ಕರೆ
ಕಳೆದ ವರ್ಷ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಪ್ರಪುಲ್ ಐದು ವಿಕೆಟ್‌ಗಳನ್ನು ಪಡೆದು ಪ್ರಭಾವಶಾಲಿಯಾದರು. ಆ ಸಮಯದಲ್ಲಿ ಅವರ ಪ್ರದರ್ಶನವನ್ನು ನೋಡಿದ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಕೋಚ್ ವರುಣ್ ಆ್ಯರನ್, ಪ್ರಫುಲ್ಗೆ ಟ್ರಯಲ್ಸ್‌ಗೆ ಬರುವಂತೆ ಆಹ್ವಾನಿಸಿದರು. ಇಲ್ಲಿಯೂ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಬಳಿಕ, ಸನ್‌ರೈಸರ್ಸ್ ಅವರನ್ನು ಹರಾಜಿನಲ್ಲಿ ಕೇವಲ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತು. ಈಗ ತಮ್ಮ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಯುವ ವೇಗಿ, ಈ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ,(ಏಜೆನ್ಸೀಸ್).