ಮುಂಬೈ ಇಂಡಿಯನ್ಸ್ ಬೌಲರ್ ರಘು ಶರ್ಮ 
ಕ್ರಿಕೆಟ್

ವಿಕೆಟ್​ ಪಡೆದ ಕೂಡಲೇ ಜೇಬಿನಲ್ಲಿದ್ದ ಚೀಟಿ ತೋರಿಸಿದ ಮುಂಬೈ ಬೌಲರ್​! ಅದರಲ್ಲಿತ್ತು ಯಾರಿಗೂ ಹೇಳದ ನೋವು ​

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್‌ನಲ್ಲಿ ಚೊಚ್ಚಲ ವಿಕೆಟ್ ಪಡೆದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಬೌಲರ್​ ರಘು ಶರ್ಮಾ ಭಾವುಕ
  • ಜೇಬಿನಿಂದ ಚೀಟಿ ತೆಗೆದು ಕ್ರಿಕೆಟ್​ ಪ್ರಿಯರಿಗೆ ತೋರಿಸುವ ಮೂಲಕ ಸಂಭ್ರಮ
  • ಜೈ ಶ್ರೀರಾಮ್​ ಎಂದು ಬರೆದು ದುಃಖವನ್ನು ಹೊರಹಾಕಿದ ರಘು
Raghu Sharma: ಸೋಮವಾರ (ಮೇ.04) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್​ ಪಡೆ ಸತತ ಸೋಲುಗಳ ಬಳಿಕ ಗೆಲುವು ಸಾಧಿಸಿತು. ಇದೇ ಪಂದ್ಯದಲ್ಲಿ ಮುಂಬೈ ಬೌಲರ್​ ತಮ್ಮ ಚೊಚ್ಚಲ ಐಪಿಎಲ್​ ವಿಕೆಟ್​ ಪಡೆದ ತಕ್ಷಣ ಜೇಬಿನಿಂದ ಹೊರತೆಗೆದ ಚೀಟಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್‌ನ ತಂಡದ ಲೆಗ್ ಸ್ಪಿನ್ನರ್ ರಘು ಶರ್ಮಾ ಐಪಿಎಲ್‌ನಲ್ಲಿ ತಮ್ಮ ಮೊದಲ ವಿಕೆಟ್ ಪಡೆದರು ಎಂಬುದು ಇಲ್ಲಿ ಗಮನಾರ್ಹ. ಚೊಚ್ಚಲ ಐಪಿಎಲ್​ ವಿಕೆಟ್​ ಕಬಳಿಸಿದ ಕೂಡಲೇ ಭಾವುಕರಾದ ಅವರು, ಪಂದ್ಯಕ್ಕೂ ಮೊದಲೇ ಜೇಬಿನಲ್ಲಿ ಬರೆದುಕೊಂಡು ಬಂದಿದ್ದ ಚೀಟಿಯೊಂದನ್ನು ಹೊರತೆಗೆದು ಸ್ಟೇಡಿಯಂನಲ್ಲಿದ್ದ ವೀಕ್ಷಕರಿಗೆ ತೋರಿಸಿದರು. ಆ ಚಿಕ್ಕ ಚೀಟಿಯಲ್ಲಿ ಏನು ಬರೆದಿದ್ದಾರೆ ಎಂದು ಸ್ವತಃ ಸೂರ್ಯಕುಮಾರ್​ ಯಾದವ್​ ಇಣುಕಿ ನೋಡಿದ್ದು ಹಾಸ್ಯಸ್ಪದ.
ಲಖನೌ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಈ ಓವರ್ ಅನ್ನು ರಘು ಶರ್ಮಾ ಮಾಡಿದರು. ಎಲ್​ಎಸ್​ಜಿ ಬ್ಯಾಟ್ಸ್‌ಮನ್ ಅಕ್ಷತ್ ರಘುವಂಶಿ (11) ಈ ಓವರ್‌ನ ಮೊದಲ ಎಸೆತದಲ್ಲಿ ಶಾಟ್ ಹೊಡೆದರು. ಚೆಂಡು ಅವರ ಬ್ಯಾಟ್‌ಗೆ ಬಡಿದು ಪ್ಯಾಡ್‌ಗೆ ತಗುಲಿ ಗಾಳಿಯಲ್ಲಿ ಮೇಲಕ್ಕೆ ಹಾರಿತು. ಕೂಡಲೇ ಓಡಿದ ರಘು, ಕ್ಯಾಚ್​ ಹಿಡಿದರು. ಇದು ಐಪಿಎಲ್‌ನಲ್ಲಿ ಅವರ ಮೊದಲ ವಿಕೆಟ್. 15 ವರ್ಷಗಳ ತಮ್ಮ ಕಾಯುವಿಕೆಗೆ ಈಗ ಸುಖಾಂತ್ಯ ಸಿಕ್ಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದ ಚೀಟಿಯಲ್ಲಿ, ಗುರುಗಳ ಕೃಪೆಯಿಂದ, 15 ವರ್ಷಗಳ ದೀರ್ಘ ಮತ್ತು ನೋವಿನ ಕಾಯುವಿಕೆ ಇಂದು ಕೊನೆಗೊಂಡಿದೆ. ನನಗೆ ಈ ಅವಕಾಶ ನೀಡಿದ್ದಕ್ಕಾಗಿ ನಾನು ಮುಂಬೈ ಇಂಡಿಯನ್ಸ್​ ತಂಡಕ್ಕೆ ಸದಾ ಋಣಿ. ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ರಘು, ಯಾವುದೇ ವಿಕೆಟ್ ಪಡೆಯಲಿಲ್ಲ. ಬದಲಿಗೆ ನಾಲ್ಕು ಓವರ್‌ಗಳಲ್ಲಿ 24 ರನ್‌ಗಳನ್ನು ನೀಡಿದರು. ಅದೇ, ಲಖನೌ ಸೂಪರ್​ ಜೈಂಟ್ಸ್​ ಎದುರು 4 ಓವರ್‌ಗಳಲ್ಲಿ ಒಂದು ವಿಕೆಟ್ ಪಡೆದು 36 ರನ್‌ಗಳನ್ನು ನೀಡುವ ಮೂಲಕ ತಮ್ಮ ಬಹುದಿನಗಳ ಆಸೆಯನ್ನು ಕಡೆಗೂ ಈಡೇರಿಸಿಕೊಂಡಿದ್ದಾರೆ,(ಏಜೆನ್ಸೀಸ್).