ಟೀಮ್ ಇಂಡಿಯಾ ಯುವ ಸ್ಪಿನ್ನರ್​ ಮಾನವ್ ಸುತಾರ್​ 
ಕ್ರಿಕೆಟ್

ಯಾರೀ ಮಾನವ್​ ಸುತಾರ್​? ಚೊಚ್ಚಲ ಟೆಸ್ಟ್​ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಪಡೆದು ಮಿಂಚಿದ ಬೌಲಿಂಗ್ ಮಾಂತ್ರಿಕ!

ಪ್ರಮುಖ ಮುಖ್ಯಾಂಶಗಳು

  • ಆಫ್ಘಾನಿಸ್ತಾನ ವಿರುದ್ಧದ ಇನ್ನಿಂಗ್ಸ್​ನಲ್ಲಿ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಕಮಾಲ್​
  • ಚೊಚ್ಚಲ ಇನ್ನಿಂಗ್ಸ್‌ನಲ್ಲಿ 33 ರನ್ ನೀಡಿ 6 ವಿಕೆಟ್​ ಪಡೆದು ಮಿಂಚಿದ ಯುವ ಬೌಲರ್​
  • ಅಪರೂಪದ ದಾಖಲೆಗೆ ಹೆಸರು ಸೇರಿಸಿದ ಈತ ಯಾರು?
ನವದೆಹಲಿ: ಇಂದು (ಜೂ.08) ನ್ಯೂ ಚಂಡೀಗಢದ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದ ಮೂರನೇ ದಿನದಂದು ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ 300 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೆಸ್ಟ್ ಇತಿಹಾಸದಲ್ಲೇ ಅತಿ ದೊಡ್ಡ ಗೆಲುವನ್ನು ದಾಖಲಿಸಿತು. ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಭಾರತದ ಎಡಗೈ ಸ್ಪಿನ್ನರ್ ಮಾನವ್ ಸುತಾರ್, ಬರೋಬ್ಬರಿ 6 ವಿಕೆಟ್​ ಕಬಳಿಸುವ ಮೂಲಕ ಅಮೋಘ ಪ್ರದರ್ಶನ ನೀಡಿ ತಂಡದ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣರಾದರು.
ತಮ್ಮ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆಗೈದ ಮಾನವ್, ಈ ಶತಮಾನದಲ್ಲಿ ಭಾರತಕ್ಕಾಗಿ ಟೆಸ್ಟ್ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್​ ಅಮಿತ್ ಮಿಶ್ರಾ 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಮ್ಮ ಮೊದಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 71 ರನ್ ನೀಡಿ 5 ವಿಕೆಟ್​ ಗಳಿಸಿದರು. ಆದರೀಗ ಅವರ ಅಪರೂಪದ ದಾಖಲೆಯನ್ನು ಮಾನವ್​ ಕೇವಲ 33 ರನ್ ನೀಡಿ 6 ವಿಕೆಟ್​ ಪಡೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಭಾರತದ ಟೆಸ್ಟ್ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ಪಟ್ಟಿಯಲ್ಲಿ ಮಾಜಿ ಸ್ಪಿನ್ನರ್ ನರೇಂದ್ರ ಹಿರ್ವಾನಿ ಅಗ್ರಸ್ಥಾನದಲ್ಲಿದ್ದರೆ, ಮಾನವ್ ಸುತಾರ್ ಎರಡನೇ ಸ್ಥಾನದಲ್ಲಿದ್ದಾರೆ. ಹಿರ್ವಾನಿ (8/61) 1988ರ ವೆಸ್ಟ್ ಇಂಡೀಸ್ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದರು. 1967ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬಿದ್ ಅಲಿ (6/55) ಮತ್ತು 1979ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಿಲೀಪ್ ದೋಷಿ (6/103) ಅವರು ಹಿರ್ವಾನಿ ಮತ್ತು ಮಾನವ್​ ನಂತರದ ಸ್ಥಾನಗಳಲ್ಲಿದ್ದಾರೆ.
ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಸುತಾರ್​ ಸದ್ಯ ಕ್ರಿಕೆಟ್​ ಪ್ರಿಯರ ಗಮನ ಸೆಳೆದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಹಲವರು ಯುವ ಬೌಲರ್​ನ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ಮಾನವ್​ ಸುತಾರ್​ ಟೀಮ್​ ಇಂಡಿಯಾದ ಸ್ಪಿನ್ ಪಡೆಗೆ ದೊಡ್ಡ ಶಕ್ತಿಯಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

2024ರಲ್ಲಿ ಐಪಿಎಲ್​ ಪದಾರ್ಪಣೆ

ಮೂಲತಃ ರಾಜಸ್ಥಾನದ ಗಂಗಾನಗರದ ಪ್ರತಿಭೆ ಮಾನವ್​ ಸುತಾರ್​. ಎಡಗೈ ಸ್ಪಿನ್ನರ್​ ಆಗಿರುವ ಸುತಾರ್​, ಕೇವಲ ಬೌಲಿಂಗ್ ಮಾತ್ರವಲ್ಲ, ಉತ್ತಮ ಬ್ಯಾಟಿಂಗ್​ ಕೂಡ ಮಾಡುವ ಕೌಶಲ್ಯವನ್ನು ಹೊಂದಿದ್ದಾರೆ. ದೇಶಿಯ ಕ್ರಿಕೆಟ್​ನಲ್ಲಿ ರಾಜಸ್ಥಾನ ಪರ ಆಡುವ ಅವರು, 2024ರಲ್ಲಿ ತಮ್ಮ ಚೊಚ್ಚಲ ಐಪಿಎಲ್​ ಪಂದ್ಯವನ್ನು ಆಡಿದರು. 2025ರ ಆವೃತ್ತಿಯಲ್ಲಿ 30 ಲಕ್ಷ ರೂ.ಗೆ ಗುಜರಾತ್​ ಟೈಟಾನ್ಸ್ ಅವರನ್ನು ತಮ್ಮ ತಂಡಕ್ಕೆ ಖರೀದಿ ಮಾಡಿತು. ​

ಆಯ್ಕೆಗಾರರ ಗಮನ ಸೆಳೆದಿದ್ದೇ ಇಲ್ಲಿ!

2022-23ರ ರಣಜಿ ಟ್ರೋಫಿ ಆವೃತ್ತಿಯಲ್ಲಿ ಸುತಾರ್​ ಕೇವಲ ಆರು ಪಂದ್ಯಗಳಲ್ಲಿ 39 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಅವರ ಈ ಅದ್ಭುತ ಬೌಲಿಂಗ್ ಸಾಮರ್ಥ್ಯ ಆಯ್ಕೆಗಾರರ ಗಮನ ಸೆಳೆಯಿತು. ಇಲ್ಲಿಯವರೆಗೆ ಸುತಾರ್​, 120ಕ್ಕೂ ಅಧಿಕ ಪ್ರಥಮ ದರ್ಜೆ ವಿಕೆಟ್‌ಗಳನ್ನು ಪಡೆದಿದ್ದಾರೆ ಎಂಬುದು ಗಮನಾರ್ಹ.

ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್​ಗಳು

1. ನರೇಂದ್ರ ಹಿರ್ವಾನಿ - 8/61 vs ವೆಸ್ಟ್ ಇಂಡೀಸ್ (ಚೆನ್ನೈ, 1988)
2. ಮಾನವ್ ಸುತಾರ್ - 6/33 vs ಅಫ್ಘಾನಿಸ್ತಾನ (ಮುಲ್ಲನ್‌ಪುರ, 2026)
3. ಅಬಿದ್ ಅಲಿ - 6/55 vs ಆಸ್ಟ್ರೇಲಿಯಾ (ಅಡಿಲೇಡ್, 1967)
4. ದಿಲೀಪ್ ದೋಷಿ - 6/103 vs ಆಸ್ಟ್ರೇಲಿಯಾ (ಚೆನ್ನೈ, 1979)