ತಂದೆ ಮಾಡಿದ ಆ ಒಂದು ತಪ್ಪು ನೋಡಿ ಕ್ರೀಡಾಂಗಣದಲ್ಲೇ ಆಕ್ರೋಶ ಹೊರಹಾಕಿದ ಹಾರ್ದಿಕ್ ಪುತ್ರ ಅಗಸ್ತ್ಯ! ವಿಡಿಯೋ ವೈರಲ್... Hardik Pandya
- ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಪಡೆಯನ್ನು ಬಗ್ಗುಬಡಿದ ಭಾರತ ಟಿ20 ವಿಶ್ವಕಪ್ನಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದೆ
- ಹಾಲಿ ಚಾಂಪಿಯನ್ಸ್ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯಲು ಇನ್ನೊಂದೇ ಹೆಜ್ಜೆ ಬಾಕಿ ಇದೆ
- ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ
- ನಿನ್ನೆ ಸೆಮಿಫೈನಲ್ ಪಂದ್ಯದ ನಡುವೆ ಮುಂಬೈ ಕ್ರೀಡಾಂಗಣದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು
Hardik Pandya : ನಿನ್ನೆ (ಮಾರ್ಚ್ 05) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಪಡೆಯನ್ನು ಬಗ್ಗುಬಡಿದ ಭಾರತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದೆ. ಹಾಲಿ ಚಾಂಪಿಯನ್ಸ್ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯಲು ಇನ್ನೊಂದೇ ಹೆಜ್ಜೆ ಬಾಕಿ. ಈಗ ಎಲ್ಲರ ಕಣ್ಣು ಫೈನಲ್ ಪಂದ್ಯದ ಮೇಲಿದೆ. ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ, ಕಿವೀಸ್ ವಿರುದ್ಧ ಸೆಣಸಾಡಲಿದೆ.
ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಅನೇಕ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಸೆಮಿಫೈನಲ್ ಪಂದ್ಯವಾದ್ದರಿಂದ ಅನೇಕ ಸೆಲೆಬ್ರಿಟಿಗಳು ಪಂದ್ಯವನ್ನು ವೀಕ್ಷಿಸಲು ಬಂದಿದ್ದರು. ಅದರಲ್ಲೂ ಮುಂಬೈನಲ್ಲಿ ನಡೆದಿದ್ದರಿಂದ ತಾರಾ ಸಮಾಗಮವೇ ಕ್ರೀಡಾಂಗಣದಲ್ಲಿತ್ತು. ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್. ಧೋನಿ, ಪತ್ನಿ ಸಾಕ್ಷಿ ಧೋನಿ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಪತ್ನಿ ರಿತಿಕಾ ಸಾಜ್ದೇಹ್, ದೇಶದ ನಂಬರ್ 1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಹಾಗೂ ಮಗಳು ಇಶಾ ಅಂಬಾನಿ, ಸೊಸೆ ರಾಧಿಕಾ ಮರ್ಚೆಂಟ್, ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಸೇರಿದಂತೆ ತಾರಾ ಸಮಾಗಮವೇ ಕ್ರೀಡಾಂಗಣದಲ್ಲಿತ್ತು. ಇದೆಲ್ಲದರ ನಡುವೆ ನಿನ್ನೆ ಮುಂಬೈ ಕ್ರೀಡಾಂಗಣದಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು.
ನಿನ್ನೆಯ ಪಂದ್ಯವನ್ನು ವೀಕ್ಷಿಸಲು ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪುತ್ರ ಅಗಸ್ತ್ಯ ಪಾಂಡ್ಯ ಕೂಡ ಕ್ರೀಡಾಂಗಣದಲ್ಲಿ ಹಾಜರಿದ್ದ. ಅಚ್ಚರಿಯ ಸಂಗತಿ ಏನೆಂದರೆ, ಅಗಸ್ತ್ಯ, ತಮ್ಮ ಅಪ್ಪನ ಹಾಲಿ ಪ್ರೇಯಸಿ ಜತೆ ಕಾಣಿಸಿಕೊಂಡ. ಹಾರ್ದಿಕ್ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಕೂಡ ಪಂದ್ಯ ವೀಕ್ಷಿಸಲು ಬಂದಿದ್ದರು. ಈ ಪಂದ್ಯದಲ್ಲಿ ಹಾರ್ದಿಕ್ ಔಟ್ ಆದಾಗ ಪುತ್ರ ಅಗಸ್ತ್ಯ ತೋರಿದ ವರ್ತನೆ ಇದೀಗ ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ ನಿನ್ನೆಯ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶನ ಮಾಡಿದರು. ಕೊನೆಯ ಹಂತದಲ್ಲಿ ಬ್ಯಾಟಿಂಗ್ ಮಾಡಲು ಬಂದ ಹಾರ್ದಿಕ್, ಕೇವಲ 12 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 27 ರನ್ ಗಳಿಸಿದರು. ಈ ಮೂಲಕ ಟೀಮ್ ಇಂಡಿಯಾ ಬೃಹತ್ ರನ್ ಕಲೆಹಾಕಲು ನೆರವಾದರು. ಆದರೆ, 19 ಓವರ್ನ 5ನೇ ಎಸೆತವನ್ನು ಬಲವಾಗಿ ಬಾರಿಸಲು ಹೋಗಿ ಕ್ಯಾಚ್ ನೀಡಿ ಔಟ್ ಆದರು. ಬಳಿಕ ಪೆವಿಲಿಯನ್ ಕಡೆ ನಡೆದು ಬರುವಾಗ ಅಪ್ಪನನ್ನು ನೋಡಿದ ಅಗಸ್ತ್ಯ, ತಮ್ಮ ಕೋಪ ಹೊರಹಾಕಿದರು. ಪಪ್ಪಾ... ಎಂದು ಜೋರಾಗಿ ಕೂಗಿದ ಅಗಸ್ತ್ಯ, ಏಕೆ ಔಟಾದೆ ಎಂದು ಸನ್ನೆಯ ಮೂಲಕ ತೋರಿ, ಆಕ್ರೋಶ ಹೊರಹಾಕಿದರು. ಈ ವೇಳೆ ಅಗಸ್ತ್ಯ ಜತೆಯಲ್ಲಿ ಹಾರ್ದಿಕ್ ಹಾಲಿ ಪ್ರೇಯಸಿ ಮಹಿಕಾ ಕೂಡ ಅಲ್ಲಿಯೇ ಇದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಭಾರತಕ್ಕೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ (42 ಎಸೆತ 89 ರನ್) ಇಶಾನ್ ಕಿಶನ್ (39), ಶಿವಂ ದುಬೆ (43) ಮತ್ತು ಹಾರ್ದಿಕ್ ಪಾಂಡ್ಯ (27) ಅವರ ಸ್ಪೋಟಕ ಇನ್ನಿಂಗ್ಸ್ ತಂಡದ ಮೊತ್ತವನ್ನು 250ರ ಗಡಿದಾಟಿಸಿತು. 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ ಭಾರತ 253 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ಗೆ ಆರಂಭದಲ್ಲೇ ಫಿಲ್ ಸಾಲ್ಟ್ ಅವರ ವಿಕೆಟ್ ದೊಡ್ಡ ಸಂಕಷ್ಟಕ್ಕೆ ದೂಡಿತು. ಅವರ ನಂತರದಲ್ಲಿ, ಜಾಸ್ ಬಟ್ಲರ್ ಮತ್ತು ನಾಯಕ ಹ್ಯಾರಿ ಬ್ರೂಕ್ ವಿಕೆಟ್ಗಳು ಆಂಗ್ಲರಿಗೆ ಸೋಲಿನ ಭೀತಿ ತಂದಿಟ್ಟಿತು. ಇಲ್ಲಿಗೆ ಭಾರತ ಗೆಲ್ಲುವುದು ಬಹುತೇಕ ಖಚಿತ ಎಂದು ಕ್ರಿಕೆಟ್ ಪ್ರಿಯರು ಖುಷಿಯಾಗಿದ್ದರು. ಆದರೆ, ಟೀಮ್ ಇಂಡಿಯಾ ಅಭಿಮಾನಿಗಳಿಗೆ ಜಾಕೆಬ್ ಬೆಥಲ್ ಮತ್ತು ವಿಲ್ ಜ್ಯಾಕ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬಿಗ್ ಶಾಕ್ ನೀಡಿದರು. ಆದರೆ, ಅಂತಿಮ ಘಟ್ಟದಲ್ಲಿ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿ ಆಂಗ್ಲರ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿತು.
ಕೊನೆಯ ಓವರ್ವರೆಗೂ ಹೋದ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದು, ಕ್ರೀಡಾಂಗಣದಲ್ಲಿ ತುಂಬಿದ್ದ ಕ್ರಿಕೆಟ್ ಪ್ರೇಮಿಗಳು ಮತ್ತು ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಸೇರಿದಂತೆ ಕ್ರಿಕೆಟ್ ದಿಗ್ಗಜರ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಪಂದ್ಯವನ್ನು ಕೇವಲ 7 ರನ್ಗಳಿಂದ ಗೆದ್ದ ಭಾರತ ಈಗ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್ ಪಟ್ಟಕ್ಕಾಗಿ ಸೆಣಸಲಿದೆ, (ಏಜೆನ್ಸೀಸ್).