ಐಪಿಎಲ್​ನ ಗ್ರೀನ್ ಡಾಟ್ ಬಾಲ್ ಟ್ರೋಫಿಯೊಳಗೆ ಏನಿದೆ? ಕುತೂಹಲಕ್ಕೆ ತೆರೆಎಳೆದ ಸಿಎಸ್​ಕೆ ಆಟಗಾರ! Green Dot Ball Trophy 
ಕ್ರಿಕೆಟ್

ಐಪಿಎಲ್​ನ ಗ್ರೀನ್ ಡಾಟ್ ಬಾಲ್ ಟ್ರೋಫಿಯೊಳಗೆ ಏನಿದೆ? ಕುತೂಹಲಕ್ಕೆ ತೆರೆಎಳೆದ ಸಿಎಸ್​ಕೆ ಆಟಗಾರ! Green Dot Ball Trophy

ಪ್ರಮುಖ ಮುಖ್ಯಾಂಶಗಳು

  • ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ರೋಚಕ ಪಂದ್ಯಗಳು, ಬೃಹತ್ ಮೊತ್ತದ ರನ್‌ಗಳಿಗೆ ಸೀಮಿತವಾಗಿಲ್ಲ
  • ಕ್ರಿಕೆಟ್‌ ಮೀರಿ ಸಮಾಜಕ್ಕೆ ಪೂರಕವಾದ ಹೊಸ ಆಲೋಚನೆಗಳನ್ನು ಸಹ ಐಪಿಎಲ್​ ಪರಿಚಯಿಸುತ್ತಿದೆ
  • ಗ್ರೀನ್ ಡಾಟ್ ಬಾಲ್' ಅಭಿಯಾನವು ತನ್ನ ಸಾಮಾಜಿಕ ಕಾಳಜಿಯಿಂದಾಗಿ ಗಮನ ಸೆಳೆಯುತ್ತಿದೆ
  • ಬೌಲರ್‌ಗಳು ಎಸೆಯುವ ಪ್ರತಿ 'ಡಾಟ್ ಬಾಲ್' ಕೂಡ ಒಂದು ವಿಶೇಷ ಅರ್ಥವನ್ನು ಪಡೆದುಕೊಂಡಿದೆ
Green Dot Ball Trophy : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್, ಕೇವಲ ರೋಚಕ ಪಂದ್ಯಗಳು ಮತ್ತು ಬೃಹತ್ ಮೊತ್ತದ ರನ್‌ಗಳಿಗೆ ಸೀಮಿತವಾಗದೆ, ಕ್ರಿಕೆಟ್‌ ಮೀರಿ ಸಮಾಜಕ್ಕೆ ಪೂರಕವಾದ ಹೊಸ ಆಲೋಚನೆಗಳನ್ನು ಸಹ ಪರಿಚಯಿಸುತ್ತಿದೆ. ಹೌದು, 'ಗ್ರೀನ್ ಡಾಟ್ ಬಾಲ್' (Green Dot Ball) ಅಭಿಯಾನವು ತನ್ನ ಸಾಮಾಜಿಕ ಕಾಳಜಿಯಿಂದಾಗಿ ಗಮನ ಸೆಳೆಯುತ್ತಿದೆ.
ಹೌದು, ಐಪಿಎಲ್​ನಲ್ಲಿ ಬೌಲರ್‌ಗಳು ಕೇವಲ ವಿಕೆಟ್‌ಗಳಿಗಾಗಿ ಮಾತ್ರ ಹೋರಾಡುತ್ತಿಲ್ಲ, ಬದಲಾಗಿ ಅವರು ಎಸೆಯುವ ಪ್ರತಿ 'ಡಾಟ್ ಬಾಲ್' ಕೂಡ ಒಂದು ವಿಶೇಷ ಅರ್ಥವನ್ನು ಪಡೆದುಕೊಂಡಿದೆ. ಪಂದ್ಯವೊಂದರಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆಯುವ ಬೌಲರ್‌ನನ್ನು ಗುರುತಿಸಿ, ಗೌರವಿಸುವ ಮೂಲಕ, ಐಪಿಎಲ್ ಕ್ರೀಡೆಯನ್ನು ಪರಿಸರ ಪ್ರಜ್ಞೆಯೊಂದಿಗೆ ಬೆಸೆಯಲಾಗಿದೆ.
ಅತಿ ಹೆಚ್ಚು ಡಾಟ್​ ಬಾಲ್​ಗಳನ್ನು ಎಸೆಯುವ ಬೌಲರ್​ಗೆ ಪಂದ್ಯದ ಪ್ರಸ್ತುತಿ ಸಮಯದಲ್ಲಿ ಒಂದು ವಿಶೇಷ ಸ್ಮರಣಿಕೆಯನ್ನು ನೀಡಲಾಗುತ್ತಿದೆ. ಆ ಸ್ಮರಣಿಕೆಯು ನಯವಾದ ಮತ್ತು ಹೊಳೆಯುವ ವಿನ್ಯಾಸದೊಂದಿಗೆ, ಮೇಲ್ಭಾಗದಲ್ಲಿ ಕ್ರಿಕೆಟ್ ಬಾಲ್ ಹೊಂದಿರುವ ಸಾಂಪ್ರದಾಯಿಕ ಶೈಲಿಯಲ್ಲಿದೆ. ನೋಡೋಕೆ ಕ್ರಿಕೆಟ್​ ಬಾಲ್​ನಂತೆ ಕಂಡರು ಕೂಡ ಅದರ ಒಳಗೆ ಒಂದು ಸರ್ಪ್ರೈಸ್​ ಅಡಗಿದೆ.
ಇಷ್ಟು ದಿನ ಆ ಗ್ರೀನ್​ ಡಾಟ್​ ಬಾಲ್​ ಟ್ರೋಫಿಯಲ್ಲಿ ಏನಿದೆ ಎಂಬ ಕುತೂಹಲ ಹೊಂದಿದ್ದ ಕ್ರೀಡಾಭಿಮಾನಿಗಳಿಗೆ ಸಿಎಸ್​ಕೆ ತಂಡದ ಆಟಗಾರ ಅಕೀಲ್​ ಹೊಸೈನ್ ಉತ್ತರ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಅಕೀಲ್​ ಹೊಸೈನ್​ ಅವರು ಗ್ರೀನ್​ ಡಾಟ್​ ಬಾಲ್​ ಟ್ರೋಫಿ ಒಳಗಡೆ ಇರುವ ವಸ್ತುವನ್ನು ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದಾರೆ.​
ಅಂದಹಾಗೆ, ಅಕೀಲ್ ಹೊಸೈನ್ ಟ್ರೋಫಿಯ ಮೇಲ್ಭಾಗವನ್ನು ತೆರೆದಾಗ ಅಲ್ಲಿ ಕಂಡಿದ್ದು ಕೇವಲ ಪ್ಲಾಸ್ಟಿಕ್ ತುಣುಕು ಅಥವಾ ನಾಮಫಲಕವಲ್ಲ, ಬದಲಿಗೆ ಅದರೊಳಗೆ ಒಂದು "ಪ್ಲಾಂಟಬಲ್ ಸೀಡ್ ಬಾಲ್" (ಬಿತ್ತನೆ ಮಾಡಬಹುದಾದ ಬೀಜದ ಉಂಡೆ) ಇತ್ತು. ಪರಿಸರ ಸ್ನೇಹಿಯಾದ ಈ ಸರಳ ನಡೆ "ಗ್ರೀನ್ ಡಾಟ್" ಪರಿಕಲ್ಪನೆಗೆ ಪೂರಕವಾಗಿದ್ದು, ಪ್ರಕೃತಿಯ ಸಂರಕ್ಷಣೆಯ ಸಂದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಸಾರುವಂತಿದೆ.
ಎಬಿಡಿ ಎಕ್ಸ್​ಕ್ಲೂಸಿವ್​ ವಿನ್ಯಾಸಗೊಳಿಸಿದ ಈ 'ಗ್ರೀನ್ ಡಾಟ್ ಬಾಲ್' ಟ್ರೋಫಿಯು ಕೇವಲ ಒಂದು ಪ್ರಶಸ್ತಿಯಲ್ಲ, ಅದೊಂದು ಸುಸ್ಥಿರತೆಯ ಸಂಕೇತ. ಕ್ರಿಕೆಟ್‌ನ ಕೆಂಪು ಚೆಂಡನ್ನೇ ಬೀಜದ ಚೆಂಡನ್ನಾಗಿ ರೂಪಿಸಿರುವುದು ಇಲ್ಲಿನ ವಿಶೇಷ. ಬೌಲರ್ ಪ್ರತಿ ಬಾರಿ 'ಡಾಟ್ ಬಾಲ್' ಎಸೆದಾಗಲೂ ಅದು ಪರಿಸರದ ಪುನರುತ್ಪಾದನೆಗೆ ಹಾಕುವ ಒಂದು ಅಡಿಪಾಯ ಎಂಬ ಅರ್ಥವನ್ನು ಇದು ನೀಡುತ್ತದೆ. ಕೇವಲ ಮನರಂಜನೆಗೆ ಸೀಮಿತವಾಗದೆ, ಕ್ರಿಕೆಟ್ ಮೂಲಕ ಭೂಮಿಯ ರಕ್ಷಣೆಯ ಸಂದೇಶವನ್ನು ಇದು ಸಾರುತ್ತದೆ.
ಸಾಮಾನ್ಯವಾಗಿ ಐಪಿಎಲ್ ಅಂದ ತಕ್ಷಣ ಸಿಕ್ಸರ್ ಮತ್ತು ಬೌಂಡರಿಗಳ ಅಬ್ಬರ ನೆನಪಾಗುತ್ತದೆ. ಆದರೆ ಈ ಅಭಿಯಾನವು ಮೈದಾನದ ಆ 'ನಿಶ್ಯಬ್ದ' ಕ್ಷಣಗಳಿಗೆ ಹೊಸ ಮೌಲ್ಯ ತಂದುಕೊಟ್ಟಿದೆ. ರನ್ ಬಿಟ್ಟುಕೊಡದ ಶಿಸ್ತಿನ ಬೌಲಿಂಗ್ ಹೇಗೆ ಪಂದ್ಯವನ್ನು ನಿಯಂತ್ರಿಸುತ್ತದೆಯೋ, ಹಾಗೆಯೇ ಈ ಸಣ್ಣ ಪ್ರಯತ್ನಗಳು ಭವಿಷ್ಯದ ಹಸಿರಿಗಾಗಿ ದೊಡ್ಡ ಬದಲಾವಣೆ ತರಬಲ್ಲವು ಎಂಬುದು ಇದರ ಆಶಯ. ಆಟ ಮುಗಿದ ನಂತರವೂ ಪರಿಸರದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಈ ಆಲೋಚನೆ ನಿಜಕ್ಕೂ ವಿಭಿನ್ನವಾಗಿದೆ, (ಏಜೆನ್ಸೀಸ್​).