ಟಿ20 ವಿಶ್ವಕಪ್ 2026 ಗೆದ್ದ ಭಾರತ
- 3ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಭಾರತ
- ನ್ಯೂಜಿಲೆಂಡ್ ವಿರುದ್ಧ 96 ರನ್ಗಳಿಂದ ಜಯ ಸಾಧಿಸಿದ ತಂಡಕ್ಕೆ ಎಷ್ಟು ಹಣ?
- ವಿನ್ನರ್ ಮತ್ತು ರನ್ನರ್ಅಪ್ ತಂಡಗಳಿಗೆ ಸಿಗುವ ಒಟ್ಟು ಬಹುಮಾನ ಹಣವೆಷ್ಟು?
ಅಹಮದಾಬಾದ್: ನಿನ್ನೆ (ಮಾ.08) ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರಕ್ಕೆ ಸಾಕ್ಷಿಯಾದ ಟೀಮ್ ಇಂಡಿಯಾ ಗೆಲುವು, ನ್ಯೂಜಿಲೆಂಡ್ ತಂಡದ ಚೊಚ್ಚಲ ಟಿ20 ವಿಶ್ವಕಪ್ ಕನಸನ್ನು ಭಗ್ನಗೊಳಿಸಿತು. 96 ರನ್‌ಗಳ ಭಾರೀ ಅಂತರದಿಂದ ಕಿವೀಸ್ ಪಡೆಯನ್ನು ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಸೂರ್ಯಕುಮಾರ್ ಯಾದವ್ ಪಡೆಗೆ ಕೋಟ್ಯಂತರ ಅಭಿಮಾನಿಗಳಿಂದ ಅಭಿನಂದನೆಗಳ ಹೊಳೆಯೇ ಹರಿದುಬರುತ್ತಿದೆ.
ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಭಾರತವಾಗಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (3 ಸಲ) ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಟೀಮ್ ಇಂಡಿಯಾ ಪರ ಟೂರ್ನಿ ಪೂರ ಅದ್ಭುತ ಇನ್ನಿಂಗ್ಸ್ ಆಡಿದ ಸಂಜು ಸ್ಯಾಮ್ಸನ್ ಒಂದೆಡೆಯಾದರೆ, ಬೌಲಿಂಗ್ನಲ್ಲಿ ಭಾರತಕ್ಕೆ ಅಭಯ ನೀಡಿದ್ದೇ ಜಸ್ಪ್ರಿತ್ ಬುಮ್ರಾ. ಇವರಿಬ್ಬರನ್ನು ಹೊರತುಪಡಿಸಿದರೆ, ಶಿವಂ ದುಬೆ, ಇಶಾನ್ ಕಿಶನ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್ ಸೇರಿ ತಂಡದ ಒಂದಷ್ಟು ಆಟಗಾರರು ಟೂರ್ನಿ ಪೂರ ಅದ್ಭುತ ಪ್ರದರ್ಶನ ನೀಡಿದ್ದು ಗಮನಾರ್ಹ.
ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಎಷ್ಟು ರೋಚಕವಾಗಿ ಮೂಡಿಬಂತೋ, ಆ ಮಟ್ಟಿಗಿನ ರೋಚಕತೆ ಅಥವಾ ಕುತೂಹಲ ಫೈನಲ್ ಪಂದ್ಯದಲ್ಲಿ ಇರಲಿಲ್ಲ. ಕಾರಣ, ನ್ಯೂಜಿಲೆಂಡ್ ವಿರುದ್ಧದ ಪಂದ್ಯ 10 ಓವರ್ ಅಂತ್ಯಕ್ಕೆ ಒನ್ ಸೈಡೆಡ್ ಆಗಿ ಹೋಗಿತ್ತು. ಕ್ರಿಕೆಟ್ ಅಭಿಮಾನಿಗಳಿಗೆ ಗೆಲುವು ಭಾರತದ್ದೇ ಎಂಬ ಸ್ಪಷ್ಟತೆ ಅದಾಗಲೇ ಸಿಕ್ಕಿಬಿಟ್ಟಿತು. 159ಕ್ಕೆ ಕಿವೀಸ್ ಪಡೆಯನ್ನು ಆಲ್ಔಟ್ ಮಾಡಿ, ವಿಶ್ವಕಪ್ ಟ್ರೋಫಿ ಎತ್ತಿಹಿಡಿದ ಟೀಮ್ ಇಂಡಿಯಾಗೆ ಐಸಿಸಿಯಿಂದ ಸಿಗುವ ಬಹುಮಾನ ಮೊತ್ತ ಎಷ್ಟು? ಎಂಬ ಕೌತುಕ ಸದ್ಯ ಹಲವರಲ್ಲಿ ಕಾಡತೊಡಗಿದೆ.
ಎಷ್ಟು ಕೋಟಿ ರೂ.?
ಪ್ರಶಸ್ತಿ ವಿಜೇತ ತಂಡಕ್ಕೆ ಐಸಿಸಿಯಿಂದ ಭಾರಿ ಬಹುಮಾನದ ಹಣವನ್ನು ನೀಡಲಾಗಿದೆ. ಈ ಹಿಂದೆಯೇ ತಿಳಿಸಿದಂತೆ, ವಿಶ್ವ ಚಾಂಪಿಯನ್ ಟೀಮ್ ಇಂಡಿಯಾಗೆ 27.50 ಕೋಟಿ ರೂ. ಹಣ ಸಿಗಲಿದೆ. ಅದೇ ರೀತಿ, ಫೈನಲ್‌ನಲ್ಲಿ ಭಾರತದ ಎದುರು ಸೋತು, ರನ್ನರ್ಅಪ್ ಸ್ಥಾನವನ್ನು ಅಲಂಕರಿಸಿದ ನ್ಯೂಜಿಲೆಂಡ್ ತಂಡಕ್ಕೆ 13.67 ಕೋಟಿ ದೊರೆಯಲಿದೆ. ಸೆಮಿಫೈನಲಿಸ್ಟ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ತಲಾ 7.24 ಕೋಟಿ ಸಿಗಲಿದ್ದು, ಸೂಪರ್-8 ಹಂತ ತಲುಪಿದ ಟೀಮ್ಗಳಿಗೆ 3.48 ಕೋಟಿ ರೂಪಾಯಿ ಸೇರಲಿದೆ,(ಏಜೆನ್ಸೀಸ್).