ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಅನುಭವಿಸಿದ 244 ರನ್‌ಗಳ ಹೀನಾಯ ಸೋಲಿಗೆ ಪಿಚ್‌ನಲ್ಲಾದ ಅನಿರೀಕ್ಷಿತ ಬದಲಾವಣೆಯೇ ಪ್ರಮುಖ ಕಾರಣ ಎಂದು ಭಾರತೀಯ ಏಕದಿನ ತಂಡದ ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ( Shreyas Iyer ) ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಅಯ್ಯರ್, ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಅತ್ಯಂತ ಪೂರಕವಾಗಿದ್ದ ಪಿಚ್, ನಂತರ ವೇಗದ ಬೌಲರ್‌ಗಳಿಗೆ ನೆರವಾಗುವ ಸೀಮಿಂಗ್ ಟ್ರ್ಯಾಕ್ ಆಗಿ ಬದಲಾಯಿತು ಎಂದು ಅಯ್ಯರ್ ವಿವರಿಸಿದ್ದಾರೆ. ಮೊದಲ ಎರಡು ಪಂದ್ಯಗಳ ಪ್ರದರ್ಶನದಿಂದ ಸ್ಫೂರ್ತಿ ಪಡೆದು ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವ ಮೂಲಕ ಸರಣಿಯನ್ನು ಸಮಬಲಗೊಳಿಸಲಿದ್ದೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಹೀನಾಯ ಸೋಲನ್ನು ಅರಗಿಸಿಕೊಳ್ಳುವುದು ನಿಜಕ್ಕೂ ಕಷ್ಟಕರವಾಗಿದೆ ಎಂದಿರುವ ಶ್ರೇಯಸ್ ಅಯ್ಯರ್, ಎರಡೂ ಇನ್ನಿಂಗ್ಸ್‌ಗಳ ನಡುವೆ ಪಿಚ್‌ನ ವರ್ತನೆಯಲ್ಲಿ ದೊಡ್ಡ ವ್ಯತ್ಯಾಸವಿತ್ತು ಎಂದು ಹೇಳಿದ್ದಾರೆ. ಆದರೆ, ಪಂದ್ಯದ ಆರಂಭದಿಂದಲೂ ಅತ್ಯಂತ ನಿಖರವಾದ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಿದ ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಅವರಿಗೆ ಗೆಲುವಿನ ಶ್ರೇಯಸ್ಸು ಸಲ್ಲಲೇಬೇಕು, ಅವರ ಬೌಲಿಂಗ್ ಅಸಾಧಾರಣವಾಗಿತ್ತು ಎಂದು ಅಯ್ಯರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಬ್ಯಾಟರ್‌ಗಳು ಅದ್ಭುತವಾಗಿ ಬ್ಯಾಟ್ ಬೀಸಿ 330ಕ್ಕೂ ಹೆಚ್ಚು ರನ್ ಕಲೆಹಾಕಿದ್ದನ್ನು ನೋಡಿದಾಗ, ಈ ಪಿಚ್ ಬ್ಯಾಟಿಂಗ್‌ಗೆ ತುಂಬಾ ಚೆನ್ನಾಗಿದೆ ಎಂದೇ ತಾವು ಭಾವಿಸಿದ್ದೆವು. ಆದರೆ, ನಮ್ಮ ಇನ್ನಿಂಗ್ಸ್ ವೇಳೆ ಎಲ್ಲವೂ ಬದಲಾಯಿತು ಎಂದು ಅಯ್ಯರ್ ತಿಳಿಸಿದ್ದಾರೆ.
ಪಂದ್ಯದ ವೇಳೆ ಕೆಲವು ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ಆಟದ ಒಂದು ಭಾಗವಾಗಿದೆ. ಇಂತಹ ತಪ್ಪುಗಳು ಕ್ರೀಡೆಯಲ್ಲಿ ಸಾಮಾನ್ಯ. ಮೊದಲ ಇನ್ನಿಂಗ್ಸ್ ಮುಗಿಸಿ ಡ್ರೆಸ್ಸಿಂಗ್ ರೂಮ್ ತಲುಪಿದಾಗ, ಈ ಬೃಹತ್ ಗುರಿಯನ್ನು ಸುಲಭವಾಗಿ ಬೆನ್ನಟ್ಟಬಹುದು ಎಂಬ ಆಶಾವಾದ ತಮಗಿತ್ತು. ಆದರೆ, ಭಾರತ ಬ್ಯಾಟಿಂಗ್ ಆರಂಭಿಸಿದಾಗ ಚೆಂಡು ಪಿಚ್‌ನ ಎರಡೂ ಬದಿಗಳಿಗೆ ಅಸಾಮಾನ್ಯವಾಗಿ ಸ್ವಿಂಗ್ ಆಗಲು ಶುರುಮಾಡಿತು, ಇದರಿಂದ ಬ್ಯಾಟರ್‌ಗಳಿಗೆ ತಮ್ಮ ಶಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಕಷ್ಟಕರವಾಯಿತು. ಅಲ್ಲದೆ, ಭಾರತೀಯ ಬ್ಯಾಟರ್‌ಗಳು ಅನಗತ್ಯವಾಗಿ ತಮ್ಮ ವಿಕೆಟ್‌ಗಳನ್ನು ಕೈಚೆಲ್ಲಿಲ್ಲ ಎಂದು ಅಯ್ಯರ್ ಅವರು ತಮ್ಮ ಸಹ ಆಟಗಾರರನ್ನು ಸಮರ್ಥಿಸಿಕೊಂಡರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ ಓವರ್‌ಗಳಲ್ಲಿ 333 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಬಳಿಕ ಬ್ಯಾಟಿಂಗ್‌ಗೆ ಇಳಿದ ಭಾರತೀಯ ಬ್ಯಾಟಿಂಗ್ ಪಡೆ ಸಂಪೂರ್ಣ ಕುಸಿತ ಕಂಡು, ಕೇವಲ 26.4 ಓವರ್‌ಗಳಲ್ಲಿ 89 ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಕೇವಲ 27 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತೀಯ ಬ್ಯಾಟಿಂಗ್ ಬೆನ್ನೆಲುಬು ಮುರಿದು ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು, (ಏಜೆನ್ಸೀಸ್).