Team India: ಪ್ರಸಕ್ತ ತವರಿನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಶ್ರೇಯಸ್ ಅಯ್ಯರ್ ಪಡೆ ಮುನ್ನಡೆ ಸಾಧಿಸಿದೆ. ಈಗಾಗಲೇ ಏಕದಿನ ಸರಣಿಯನ್ನು ವಶಪಡಿಸಿಕೊಂಡ ಟೀಮ್ ಇಂಡಿಯಾ, ಟಿ20 ಸರಣಿಯಲ್ಲಿ ವಿಂಡೀಸ್ ಪಡೆಯನ್ನು ಕ್ಲೀನ್ ಸ್ವೀಪ್ ಮಾಡಲು ಎದುರುನೋಡುತ್ತಿದೆ. ಈ ಮಧ್ಯೆ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಬೆನ್ನಿನಲ್ಲಿ ಕಪ್ಪು ಬಣ್ಣದ ವಸ್ತುವೊಂದು ಕಾಣಿಸಿಕೊಂಡಿರುವುದು ಸದ್ಯ ಹಲವರ ಕುತೂಹಲಕ್ಕೆ ಕಾರಣವಾಗಿದೆ.
ಏಕದಿನ ಸರಣಿಯ ಭಾಗವಾಗಿದ್ದ ರೋಹಿತ್, ವಿರಾಟ್ ಮತ್ತು ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವರ ಭುಜದ ಮಧ್ಯ ಭಾಗದಲ್ಲಿ ಕಪ್ಪು ಬಣ್ಣದ ವಸ್ತು ಇರುವ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡಿದೆ. ಇದು ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಗೊಂದಲ ಹಾಗೂ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಇದೆಂಥಾ ವಸ್ತು? ಇದನ್ನು ಆಟಗಾರರು ಧರಿಸುವ ಕಾರಣವೇನು? ಯಾವ ಉದ್ದೇಶಕ್ಕೆ ಅದು ಅವರ ಭುಜದ ಮಧ್ಯೆಯಿದೆ ಎಂಬ ಸಾಕಷ್ಟು ಪ್ರಶ್ನೆಗಳು ನೆಟ್ಟಿಗರಿಂದ ಕೇಳಿಬಂದಿದೆ. ಇದಕ್ಕೆ ಉತ್ತರ ಹೀಗಿದೆ ನೋಡಿ.
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಜರ್ಸಿಯನ್ನು ತೆಗೆದಾಗ, ಅವರ ಬೆನ್ನಿನ ಮೇಲೆ ಕಪ್ಪು ಬಣ್ಣದ ಸಾಧನವೊಂದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಅಸಲಿಗೆ ಇದು ಜಿಪಿಎಸ್ ಪ್ಲೇಯರ್ ಟ್ರ್ಯಾಕರ್. ಇದನ್ನು ಭುಜಗಳ ನಡುವೆ ಅಥವಾ ದೇಹಕ್ಕೆ ಬಿಗಿಯಾಗಿ ಹೊಂದಿಕೊಳ್ಳುವ ವಿಶೇಷ ಸಾಧನವಾಗಿದೆ. ಇವುಗಳನ್ನು ಹೆಚ್ಚಾಗಿ 'STATSports' ನಂತಹ ಕಂಪನಿಗಳು ತಯಾರಿಸುತ್ತವೆ. ಪಂದ್ಯಗಳು ಮತ್ತು ಅಭ್ಯಾಸದ ಸಮಯದಲ್ಲಿ ಆಟಗಾರರು ಎಷ್ಟು ದೂರ ಓಡುತ್ತಾರೆ, ಅವರ ವೇಗ, ಹೃದಯ ಬಡಿತ ಮತ್ತು ದೇಹಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನು ಈ ಸಾಧನಗಳು ದಾಖಲಿಸುತ್ತವೆ.
ಆಟಗಾರರ ದೈಹಿಕ ಕ್ಷಮತೆಯನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಲು ಈ ಆಧುನಿಕ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಗಾಯಗಳನ್ನು ತಡೆಗಟ್ಟಲು ಮತ್ತು ಆಟಗಾರರ ಪ್ರ್ಯಾಕ್ಟೀಸ್ ವಿಧಾನವನ್ನು ಮತ್ತಷ್ಟು ಸುಧಾರಿಸಲು ಕೂಡ ಇದನ್ನು ಬಳಕೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ, ಬಿಡುವಿಲ್ಲದ ವೇಳಾಪಟ್ಟಿ ಮತ್ತು ಐಪಿಎಲ್‌ನಂತಹ ಟೂರ್ನಿಯಿಂದಾಗಿ ಆಟಗಾರರು ತೀವ್ರ ಆಯಾಸಕ್ಕೆ ಒಳಗಾಗುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರಿಗೆ ಗಾಯಗಳೂ ಆಗುತ್ತಿವೆ. ಈ ಸಾಧನದ ಸಹಾಯದಿಂದ, ಯಾವುದೇ ಆಟಗಾರನ ಮೇಲೆ ಅತಿಯಾದ ಹೊರೆ ಬೀಳದಂತೆ ಟೀಮ್ ಮ್ಯಾನೇಜ್ಮೆಂಟ್ ನಿಗಾ ವಹಿಸುತ್ತದೆ,(ಏಜೆನ್ಸೀಸ್).