ಹಾರ್ದಿಕ್ ಪಾಂಡ್ಯಗೆ ಸಿಎಸ್ಕೆ ಇದೆಂಥಾ ಬಿಗ್ ಆಫರ್
- 19ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಅತ್ಯಂತ ಕಳಪೆ ಪ್ರದರ್ಶನ
- ಟೀಕೆ, ಆಂತರಿಕೆ ಸಮಸ್ಯೆ ಎಂಐಯಿಂದ ಹೊರಬರಲು ಹಾರ್ದಿಕ್ ನಿರ್ಧಾರ
- ಹಾರ್ದಿಕ್ ಪಾಂಡ್ಯ ಕರೆದುಕೊಳ್ಳಲು ಸಿಎಸ್ಕೆ ಬಿಗ್ ಆಫರ್
Hardik Pandya: ಈ ವರ್ಷ ಆರ್ಸಿಬಿ ಗೆಲುವಿನಿಂದ ಯಶಸ್ವಿಯಾಗಿ ಮುಕ್ತಾಯಗೊಂಡ ಐಪಿಎಲ್ 19ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಸತತ ಎರಡನೇ ಬಾರಿ ಅಂಕಪಟ್ಟಿಯಲ್ಲಿ ಕೆಳಸ್ಥಾನಕ್ಕೆ ತಲುಪುವ ಮೂಲಕ ಲೀಗ್ನಿಂದ ಹೊರಬಿದ್ದಿತು. ಸ್ಟಾರ್ ಆಟಗಾರರ ಅತ್ಯಂತ ಕಳಪೆ ಪ್ರದರ್ಶನ, ಬ್ಯಾಕ್ ಟು ಬ್ಯಾಕ್ ಹೀನಾಯ ಸೋಲು ಮತ್ತು ನಾಯಕ ಹಾರ್ದಿಕ್ ಮಾತು ಕೇಳಲು ಹಿರಿಯ ಕ್ರಿಕೆಟಿಗರು ತೋರಿದ ಅಸಡ್ಡೆಯೇ ಚಾಂಪಿಯನ್ಸ್ ತಂಡಕ್ಕೆ ಭಾರಿ ಮುಖಭಂಗ ತಂದೊಡ್ಡಿತು. ಆಂತರಿಕ ಸಮಸ್ಯೆ ಮತ್ತು ಸಾಲು ಸಾಲು ಟೀಕೆಗಳ ಬೆನ್ನಲ್ಲೇ ಎಂಐ ತೊರೆಯಲು ಪಾಂಡ್ಯ ನಡೆಸುತ್ತಿರುವ ತೆರೆಮರೆಯ ಕಸರತ್ತಿಗೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ.
ಅತ್ಯಂತ ಕಳಪೆ ಪ್ರದರ್ಶನ
ಗುಜರಾತ್ ಟೈಟನ್ಸ್ ಪಡೆಗೆ ಕ್ಯಾಪ್ಟನ್ ಆಗಿದ್ದ ಸ್ಟಾರ್ ಆಲ್ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ, ತಂಡವನ್ನು ಒಂದು ಬಾರಿ ಚಾಂಪಿಯನ್ ಪಟ್ಟಕೇರಿಸಿ, ಎರಡನೇ ಬಾರಿ ಫೈನಲ್ವರೆಗೂ ಕೊಂಡೊಯ್ದಿದ್ದರು. ಆದರೆ, ಅದೇ ಮುಂಬೈ ಇಂಡಿಯನ್ಸ್ಗೆ ಬಂದು ರೋಹಿತ್ ಶರ್ಮರಿಂದ ನಾಯಕನ ಸ್ಥಾನ ಪಡೆದಿದ್ದೇ ತಡ, ಅವರ ವಿರುದ್ಧ ಸಾಲು ಸಾಲು ಟೀಕೆಗಳು ವ್ಯಕ್ತವಾಯಿತು. ಮತ್ತೊಂದೆಡೆ, ಈ ವರ್ಷದ ಐಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್, ಬೌಲಿಂಗ್, ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿ ಯಾವುದರಲ್ಲೂ ಉತ್ತಮ ಪ್ರದರ್ಶನ ತೋರದೆ ಹೋಗಿದ್ದೇ ಫ್ರಾಂಚೈಸಿಯ ಸೋಲಿಗೆ ಮುಖ್ಯ ಕಾರಣ ಎಂದು ದೂಷಿಸಲಾಗಿದೆ.
ಐದು ಬಾರಿ ಟ್ರೋಫಿ ಎತ್ತಿಹಿಡಿದ ಚಾಂಪಿಯನ್ಸ್ ತಂಡವೇ ಪೈಪೋಟಿ ಕೊಡದೆ ಎಲಿಮಿನೇಟ್ ಆಗಿದ್ದು ಸದ್ಯ ಮುಂಬೈ ಫ್ರಾಂಚೈಸಿಯ ಅಭಿಮಾನಿಗಳನ್ನು ಕೆರಳಿಸಿದೆ. ಟೀಮ್ನ ಸೋಲಿಗೆ ನಾಯಕ ಹಾರ್ದಿಕ್ ಪಾಂಡ್ಯ ಕಾರಣ ಎಂಬ ಟೀಕೆ, ವ್ಯಂಗ್ಯಗಳು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಯಾದ ಬೆನ್ನಲ್ಲೇ ನಾಯಕತ್ವ ಮಾತ್ರವಲ್ಲದೇ, ತಂಡದಿಂದಲೂ ದೂರ ಸರಿಯಲು ಹಾರ್ದಿಕ್ ನಿರ್ಧರಿಸಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಈ ವಿಷಯ ಹೊರಬೀಳುತ್ತಿದ್ದಂತೆ, ಮಹೇಂದ್ರ ಸಿಂಗ್ ಧೋನಿ ಅವರ ಅಲಭ್ಯತೆಯಿಂದ ಪರದಾಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್, ತೆರೆಮರೆಯಲ್ಲಿ ಹಾರ್ದಿಕ್ಗೆ ಮಣೆ ಹಾಕಿದೆ.
ಏನದು ಸಿಎಸ್ಕೆ ಬಿಗ್ ಆಫರ್?
ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯರನ್ನು ಕಳೆದುಕೊಳ್ಳಲು ಎದುರುನೋಡುತ್ತಿರುವ ಸಿಎಸ್ಕೆ, ನಮ್ಮ ಕಡೆಯಿಂದ 10 ಕೋಟಿ ರೂ. ಮತ್ತು ಆಯುಷ್ ಮ್ಹಾತ್ರೆ ಬದಲಿಗೆ ಡೆವಾಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಅವರನ್ನು ಸ್ವಾಪ್ ಮಾಡುವುದಾಗಿ ತಿಳಿಸಿದೆ. ಒಬ್ಬ ಪಾಂಡ್ಯ ಪಡೆಯಲು ಇಬ್ಬರು ಸ್ಟಾರ್ ಆಲ್ರೌಂಡರ್ರನ್ನು ಎಂಐಗೆ ಟ್ರೇಡ್ ಮಾಡಲು ಚೆನ್ನೈ ಫ್ರಾಂಚೈಸಿ ಮುಂದಾಗಿದೆ ಎಂದು ಕ್ರಿಕೆಟ್ ವರದಿಗಳು ಸ್ಪಷ್ಟಪಡಿಸಿವೆ.
10 ಕೋಟಿ ರೂ. ಡೀಲ್
ವರದಿಯ ಪ್ರಕಾರ, ಕಳಪೆ ಫಾರ್ಮ್ನಲ್ಲಿದ್ದರೂ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ಗೆ ಸಖತ್ ಡಿಮಾಂಡ್ ಶುರುವಾಗಿದೆ. ಮುಂಬೈ ಪಾಂಡ್ಯ ಬದಲಿಗೆ ನಮಗೆ ಯುವ ಬ್ಯಾಟರ್ ಆಯುಷ್ರನ್ನು ಕಳುಹಿಸಿಕೊಡಿ ಎಂದು ಕೇಳಿದೆ. ಆದ್ರೆ, ಇದಕ್ಕೆ ಒಪ್ಪದ ಚೆನ್ನೈ ಸೂಪರ್ ಕಿಂಗ್ಸ್, ಅವರ ಬದಲಿಗೆ ಅನುಭವಿ ಶಿವಂ ದುಬೆ ಮತ್ತು ಬ್ರೆವಿಸ್ ಸೇರಿ ಒಟ್ಟು ಇಬ್ಬರು ಆಲ್‌ರೌಂಡರ್ ಜತೆ 10 ಕೋಟಿ ರೂ. ಕೊಟ್ಟು ಡೀಲ್ ಮಾಡಿಕೊಳ್ಳೋಣ ಎಂದು ಆಫರ್ ನೀಡಿದೆ ಎನ್ನಲಾಗಿದೆ.
ಇದೇನಾದರೂ ಅಧಿಕೃತವಾಗಿ ಘೋಷಣೆಯಾದರೆ, ಹಾರ್ದಿಕ್ ಪಾಂಡ್ಯ ಬರೋಬ್ಬರಿ 20 ಕೋಟಿ ರೂ. ಮೌಲ್ಯ ಪಡೆಯುವುದು ಖಚಿತ. ಇದರೊಟ್ಟಿಗೆ, ಸಿಎಸ್ಕೆ ತಂಡದ ಕ್ಯಾಪ್ಟನ್ ಆಗಿಯೂ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಎರಡೂ ಫ್ರಾಂಚೈಸಿಗಳು ಯಾವುದೇ ರೀತಿಯಲ್ಲೂ ಅಧಿಕೃತವಾಗಿ ಘೋಷಣೆ ಅಥವಾ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).