ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸದ ಅಭಿಷೇಕ್ ಶರ್ಮ
- ಅಭಿಷೇಕ್ ಒಬ್ಬ ಟೆಕ್ನಿಕ್ ಇಲ್ಲದೆ ಆಡುವ ಬ್ಯಾಟರ್ ಎಂದಿದ್ದ ಮೊಹಮ್ಮದ್ ಅಮೀರ್
- ನಾಲಿಗೆ ಹರಿಬಿಟ್ಟ ಅಮೀರ್ ಈಗ ದಿಢೀರ್ ಉಲ್ಟಾ!
ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯ ಮೂರು ಗ್ರೂಪ್ ಸ್ಟೇಜ್ ಹಾಗೂ ಮೊದಲ ಸೂಪರ್-8 ಪಂದ್ಯದಲ್ಲಿ ಫ್ಲಾಪ್ ಶೋ ನೀಡಿದ ಟೀಮ್ ಇಂಡಿಯಾದ ಸ್ಟಾರ್ ಓಪನರ್ ಅಭಿಷೇಕ್ ಶರ್ಮ, ಉತ್ತಮ ಪ್ರದರ್ಶನ ನೀಡಲು ಪದೇ ಪದೇ ವಿಫಲರಾಗುತ್ತಿದ್ದಾರೆ. ಇದನ್ನು ತೀವ್ರವಾಗಿ ಟೀಕಿಸಿದ್ದ ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್, ಈತನೊಬ್ಬ ಸ್ಲಾಗರ್ (ಟೆಕ್ನಿಕ್ ಇಲ್ಲದೆ ಆಡುವ ಆಟಗಾರ). ಸುಮ್ಮನೆ ಬ್ಯಾಟ್ ಬೀಸುವ ಆಟಗಾರ ಎಂದೆಲ್ಲ ನಾಲಿಗೆ ಹರಿಬಿಟ್ಟಿದ್ದರು. ಆದರೀಗ, ತಮ್ಮ ಹೇಳಿಕೆಗೆ ಕೊಂಚ ಬೆಣ್ಣೆ ಹಚ್ಚಿರುವ ಅಮಿರ್, ನನಗೆ ನಮ್ಮ ತಂಡಕ್ಕಿಂತ ಟೀಮ್ ಇಂಡಿಯಾ ಸೋತರೆ ಹೆಚ್ಚು ಬೇಸರವಾಗುತ್ತೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾಗೆ ಭಾರೀ ಟೀಕೆಗಳು ಹರಿದುಬಂದವು. ಗ್ರೂಪ್ ಸ್ಟೇಜ್ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಸರಣಿ ಜಯ ಸಾಧಿಸಿದ ಸೂರ್ಯಕುಮಾರ್ ಯಾದವ್ ಪಡೆಗೆ ಸೌತ್ ಆಫ್ರಿಕಾ ಎದುರು ಗೆಲುವಿನ ಓಟ ಮುಂದುವರೆಸಲು ಆಗಲಿಲ್ಲ. ಭಾರತ 74 ರನ್ಗಳ ಹೀನಾಯ ಸೋಲು ಅನುಭವಿಸಿತು. ಮತ್ತೊಂದೆಡೆ, ಮೂರು ಡಕ್ಔಟ್ ಬಳಿಕ ಮತ್ತೊಂದು ಪಂದ್ಯದಲ್ಲಿಯೂ ಫ್ಲಾಪ್ ಶೋ ಮುಂದುವರಿಸಿದ ಅಭಿಷೇಕ್ ಶರ್ಮ ಭಾರೀ ಟೀಕೆ, ಆಕ್ರೋಶಕ್ಕೆ ಗುರಿಯಾದರು.
ಅಭಿಷೇಕ್ ವಿರುದ್ಧ ಅಮಿರ್ ಬಳಸಿದ 'ಸ್ಲಾಗರ್' ಪದಕ್ಕೆ ಭಾರೀ ವಿರೋಧಗಳು ವ್ಯಕ್ತವಾಯಿತು. ಪಾಕ್ ಆಟಗಾರನ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಕಿಡಿಕಾರಿದ್ದೇ ತಡ ಅಮೀರ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ ದಿಢೀರ್ ಉಲ್ಟಾ ಹೊಡೆದಿದ್ದಾರೆ. ನಾನು ಭಾರತದ ವಿರೋಧಿ ಅಲ್ಲ. ಅಸಲಿಗೆ, ಅವರ ಎಲ್ಲ ಪಂದ್ಯಗಳನ್ನು ನಾನು ಖುಷಿಯಿಂದ ನೋಡುತ್ತೇನೆ ಎಂದರು.
ಪಾಕಿಸ್ತಾನ ಪಂದ್ಯಕ್ಕಿಂತ ಟೀಮ್ ಇಂಡಿಯಾ ಪಂದ್ಯಗಳನ್ನು ಎಂಜಾಯ್ ಮಾಡ್ತೇನೆ. ಯಾವಾಗ ಭಾರತ ಸೋಲುತ್ತೋ, ಆಗ ನನ್ನ ಮನಸಿಗೆ ತುಂಬಾ ಘಾಸಿಯಾಗುತ್ತದೆ. ಎರಡು ಬಾರಿ ಡಕ್ಔಟ್ ಆದಾಗಲೇ ಅಭಿಷೇಕ್ ಬೆನ್ನಿಗೆ ನಿಂತು ನಾನು ಮಾತನಾಡಿದ್ದೆ. ಆದರೆ, ಒಬ್ಬ ಹಿರಿಯ ಆಟಗಾರನಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಿನ್ನ ವೀಕ್ನೆಸ್ಗಳು ಬೆತ್ತಲಾಗುತ್ತಿದೆ ಎಂದು ಹೇಳಿದೆ. ಆತನಿಗೆ ಒಳ್ಳೆಯ ಸ್ಕಿಲ್ಗಳಿವೆ. ಟೆಕ್ನಿಕ್ ಮೇಲೆ ಹೆಚ್ಚು ಕೆಲಸ ಮಾಡಿದ್ರೆ ಉತ್ತಮ. ಸುಖಾಸುಮ್ಮನೆ ಎಲ್ಲ ಬಾಲ್ಗೂ ಬೀಸಿದರೆ, ಅಭಿಷೇಕ್ ಕರಿಯರ್ ಆಯಸ್ಸು ಕುಂಠಿತವಾಗುವುದು ಖಚಿತ ಎಂದಿದ್ದಾಗಿ ಅಮೀರ್ ಸ್ಪಷ್ಟಪಡಿಸಿದ್ದಾರೆ.
ಅಂದು ಅಮೀರ್ 'ಅಭಿ' ಬಗ್ಗೆ ಹೇಳಿದ್ದೇನು?
"ಅಭಿಷೇಕ್ ಒಬ್ಬ ಅದ್ಭುತ ಬ್ಯಾಟರ್ ಏನಲ್ಲ. ಆತ ಸ್ಲಾಗರ್ (ಟೆಕ್ನಿಕ್ ಇಲ್ಲದೆ ಆಡುವ ಕ್ರಿಕೆಟಿಗ). ಅಭಿಷೇಕ್ರನ್ನು ನಾನು ನಮ್ಮದೇ ತಂಡದ ಬ್ಯಾಟರ್ ಸೈಮ್ ಆಯುಬ್ಗೆ ಹೋಲಿಸುತ್ತೇನೆ. ಕಾರಣ, ಆಯುಬ್ ಬಂದಾಗ ಅವನಿಗೆ ಯಾವ ಕಡೆ ಹೊಡೆಯಬೇಕು ಅನ್ನೋದೇ ಗೊತ್ತಿರಲಿಲ್ಲ. ಆಡಬಾರದ ಜಾಗದಲ್ಲಿ ಆಡ್ತಿದ್ದ. ಲೆಗ್ಸೈಡ್ ರನ್ಗಳನ್ನು ಕಲೆಹಾಕುತ್ತಿದ್ದ. ಬಾಲ್ ನಾಲ್ಕನೇ ಅಥವಾ ಐದನೇ ಸ್ಟಂಪ್ನತ್ತ ಬಂದರೆ ಅವನಿಗೆ ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಅಭಿಷೇಕ್ ಕೂಡ ಹಾಗೆಯೇ" ಎಂದಿದ್ದರು.