- ಶ್ರೀಲಂಕನ್ ಆಟಗಾರನೊಂದಿಗೆ ವೈಭವ್ ಸೂರ್ಯವಂಶಿ ಜಗಳ
- ಮೈದಾನದಲ್ಲಿ ನಡೆದ ಹೈಡ್ರಾಮಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Vaibhav Sooryavanshi: ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ತಂಡಗಳ ನಡುವಿನ ಪಂದ್ಯ ರೋಚಕ ಕೊನೆ ಕಂಡರೂ ಕೊನೆಯಲ್ಲಿ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕನ್ ಆಟಗಾರನ ನಡುವೆ ನಡೆದ ತಳ್ಳಾಟ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸೂಪರ್ ಓವರ್ ಹಂತ ತಲುಪಿದ ಈ ಪಂದ್ಯವನ್ನು ಶ್ರೀಲಂಕಾ 'ಎ' ಗೆದ್ದರೆ, ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಹಾಗೂ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ತಮ್ಮ ಪಾಡಿಗೆ ತಾವು ಹೋಗುವಾಗ, ಶ್ರೀಲಂಕನ್ ಆಟಗಾರನ ನಡೆಯಿಂದ ಭಾರಿ ಸಿಡಿಮಿಡಿಗೊಂಡರು. ತಕ್ಷಣವೇ ವಾಪಾಸ್ ಬಂದ ವೈಭವ್, ಆತನೊಂದಿಗೆ ವಾಗ್ವಾದಕ್ಕಿಳಿದರು. ಈ ವೇಳೆ ಇಬ್ಬರ ನಡುವೆ ತಳ್ಳಾಟ ನಡೆದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 'ಎ' 49.2 ಓವರ್‌ಗಳಲ್ಲಿ 265 ರನ್‌ಗೆ ಆಲೌಟ್ ಆಯಿತು. ಸೂರ್ಯಾಂಶ್ ಶೆಡ್ಜ್ 72 ರನ್ ಮತ್ತು ವಿಪ್ರಜ್ ನಿಗಮ್ 51 ರನ್ ಗಳಿಸಿದರು. ಹೆಚ್ಚಿನ ನಿರೀಕ್ಷೆಗಳ ನಡುವೆ ಮೈದಾನಕ್ಕಿಳಿದ ವೈಭವ್ ಸೂರ್ಯವಂಶಿ, 14 ಎಸೆತಗಳಲ್ಲಿ 21 ರನ್ ಗಳಿಸಿ ಪೆವಿಲಿಯನ್ ಸೇರಿದರು. ಅಪಾರ ನಿರೀಕ್ಷೆಯಿಟ್ಟು ಕಳುಹಿಸುತ್ತಿದ್ದರೂ ಅದ್ಯಾಕೋ ಸೂರ್ಯವಂಶಿಯಿಂದ ಉತ್ತಮ ಪ್ರದರ್ಶನ ಬರುತ್ತಿಲ್ಲ. ಇದು ಕೆಲವರ ಬೇಸರಕ್ಕೆ ಕಾರಣವಾಯಿತು.
ಹೋಗು ಮನೆಗೆ ಹೋಗು....
ಈ ಮಧ್ಯೆ, 266 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ 'ಎ' ಕೂಡ 50 ಓವರ್‌ಗಳಲ್ಲಿ 265 ರನ್ ಗಳಿಸಿತು. ಪಂದ್ಯವು ಟೈ ಆದ ಕೂಡಲೇ ಸೂಪರ್ ಓವರ್ಗೆ ಎರಡೂ ತಂಡಗಳು ಸಿದ್ಧವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 'ಎ' ತಂಡವು 16 ರನ್ ಗಳಿಸಿದರೆ, ಗುರಿಯನ್ನು ಬೆನ್ನಟ್ಟಲು ಹೊರಟ ಭಾರತ 'ಎ' ತಂಡವು ಕೇವಲ 10 ರನ್‌ಗೆ ಶಕ್ತವಾಯಿತು. ಸೂಪರ್ ಓವರ್‌ನ ಕೊನೆಯ ಎಸೆತದ ಬಳಿಕ ಶ್ರೀಲಂಕಾ ಆಟಗಾರರು ಸಂಭ್ರಮದಲ್ಲಿ ತೊಡಗಿದ್ದರು. ಇದೇ ವೇಳೆ ಪೆವಿಲಿಯನ್ ಕಡೆ ಹೋಗುತ್ತಿದ್ದ ಸೂರ್ಯವಂಶಿಗೆ, ಹೋಗು ಮನೆಗೆ ಹೋಗು ಎಂಬ ಎದುರಾಳಿಯ ಮಾತು ಅಕ್ಷರಶಃ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿತು.
ಎದುರಾಳಿ ಆಟಗಾರನ ಲುಕ್ನಿಂದ ಕೆಂಡವಾದ ವೈಭವ್, ವಾಗ್ವಾದ ಬೆನ್ನಲ್ಲೇ ಅವರ ಬಳಿ ವಾಪಾಸ್ ಬಂದರು. ಈ ವೇಳೆ, ಇಬ್ಬರೂ ಪರಸ್ಪರ ತಳ್ಳಾಡಿದ್ದು, ವೈಭವ್ರನ್ನು ಶ್ರೀಲಂಕಾದ ಆಟಗಾರರು ಜಗಳದಿಂದ ಬಿಡಿಸಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಇದು ಸ್ವಲ್ಪ ಸಮಯದವರೆಗೆ ಮೈದಾನದಲ್ಲಿ ದೊಡ್ಡ ಹೈಡ್ರಾಮಾಗೆ ಕಾರಣವಾಯಿತು. ಇದಕ್ಕೂ ಮೊದಲು ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಕೂಡ ಅಂಪೈರ್‌ಗಳೊಂದಿಗೆ ಜಗಳ ಮಾಡಿದರು.
ಸೂಪರ್ ಓವರ್ ಸಮಯದಲ್ಲಿ ಅಂಪೈರ್ನ ನೋ ಬಾಲ್ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು. ಇದೇ ವಿಷಯಕ್ಕೆ ಕೆಲ ಸಮಯ ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದರು. ವಂಡರ್ ಕಿಡ್ ವೈಭವ್ ಸೂರ್ಯವಂಶಿ ಮೈದಾನದಲ್ಲಿ ಜಗಳ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ, ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ಆಟಗಾರನೊಂದಿಗೂ ವೈಭವ್ ಇದೇ ರೀತಿಯಲ್ಲಿ ಕಿತ್ತಾಡಿಕೊಂಡಿದ್ದರು.