ವೈಭವ್ ಸೂರ್ಯವಂಶಿ 
ಕ್ರಿಕೆಟ್

ಇದೇ ವೈಭವ್​ ಸೂರ್ಯವಂಶಿಯ ವೀಕ್ನೆಸ್​! ಸಾಲು ಸಾಲು ಮೆಚ್ಚುಗೆಗಳ ಮಧ್ಯೆ ದಿಗ್ಗಜ ಕ್ರಿಕೆಟಿಗನಿಂದ ಅಚ್ಚರಿ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ನಲ್ಲಿ ಮುಂದುವರಿದ ವೈಭವ್ ಸೂರ್ಯವಂಶಿಯ ಬಿರುಗಾಳಿ ಬ್ಯಾಟಿಂಗ್
  • ಸ್ಟಾರ್​ ಆಟಗಾರರು ಮತ್ತು ಮಾಜಿ ಕ್ರಿಕೆಟಿಗರಿಂದ ಬೇಬಿ ಬಾಸ್​ಗೆ ಮೆಚ್ಚುಗೆಯ ಸುರಿಮಳೆಗಳು
  • ವೆಸ್ಟ್​ ಇಂಡೀಸ್​ ಮಾಜಿ ಆಟಗಾರನಿಂದ ವೈಭವ್ ಬಗ್ಗೆ ಶಾಕಿಂಗ್ ಹೇಳಿಕೆಗಳು
Vaibhav Sooryavanshi: ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ತನ್ನ ಬಿರುಗಾಳಿ ಬ್ಯಾಟಿಂಗ್​ ಮೂಲಕವೇ ಸಖತ್​ ಸದ್ದು ಮಾಡುತ್ತಿರುವ ರಾಜಸ್ಥಾನ ರಾಯಲ್ಸ್‌ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಸ್ಫೋಟಕ ಇನ್ನಿಂಗ್ಸ್​ ಜೊತೆಗೆ ಆಕರ್ಷಕ ಶತಕ ದಾಖಲಿಸುತ್ತಿರುವುದು ಕ್ರಿಕೆಟ್​ ದಿಗ್ಗಜರ ಹುಬ್ಬೇರಿಸುತ್ತಿದೆ. ಈ ಮಧ್ಯೆ, ಐಪಿಎಲ್​ನಲ್ಲಿ ಆರ್​ಆರ್​ ಪರ ಓಪನರ್​ ಆಗಿ ಕಣಕ್ಕಿಳಿಯುತ್ತಿರುವ ಈ ಯುವ ಬ್ಯಾಟರ್​, ಹಲವರ ಗೊಂದಲ ಮತ್ತು ಅನುಮಾನಗಳಿಗೂ ಕಾರಣವಾಗಿದ್ದಾರೆ.
15 ವರ್ಷದ ಹುಡುಗನೊಬ್ಬ ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳನ್ನು ಹಿಗ್ಗಾಮುಗ್ಗಾ ಬಾರಿಸುತ್ತಾನೆ ಎಂದರೆ ಅಚ್ಚರಿ ಹಾಗೂ ಗೊಂದಲ ಮೂಡುವುದು ತೀರ ಸಹಜ. ಕಾರಣ, ಅಂತಾರಾಷ್ಟ್ರೀಯ ಮತ್ತು ಅನುಭವಿ ಆಟಗಾರರಿಂದಲೇ ಸಾಧ್ಯವಾಗದು, ಒಬ್ಬ ಚಿಕ್ಕ ಹುಡುಗನಿಂದ ಆಗುತ್ತಿರುವುದು ಸದ್ಯ ಕ್ರಿಕೆಟ್​ ದಿಗ್ಗಜರಿಗೆ ನಂಬಲು ಕಷ್ಟಸಾಧ್ಯವಾಗಿದೆ. ಈ ವರ್ಷ ಅತ್ಯಧಿಕ ರನ್​ಗಳನ್ನು ಗಳಿಸಿದ ಬ್ಯಾಟ್ಸ್​ಮನ್​​ಗಳ ಪೈಕಿ ಬರೋಬ್ಬರಿ 400 ರನ್​ಗಳನ್ನು ದಾಖಲಿಸುವ ಮೂಲಕ ಪಟ್ಟಿಯಲ್ಲಿ ವೈಭವ್​ ಅಗ್ರ ಸ್ಥಾನಕ್ಕೂ ಏರಿದರು. ಈ ಮಧ್ಯೆ, ವೆಸ್ಟ್ ಇಂಡೀಸ್​ ದಂತಕಥೆ ಇಯಾನ್​ ಬಿಶಾಪ್​ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ತನ್ನ ಆಕ್ರಮಣಕಾರಿ ಮತ್ತು ಭಯವಿಲ್ಲದ ಬಿರುಸಿನ ಬ್ಯಾಟಿಂಗ್​ ವೈಖರಿಯನ್ನು ಹಾಡಿ ಹೊಗಳುತ್ತಿರುವವರ ನಡುವೆ ಇಯಾನ್​ ಅವರು ವೈಭವ್​ ಸೂರ್ಯವಂಶಿಗೆ ಒಂದು ವೀಕ್ನೆಸ್​ ಕೂಡ ಇದೆ ಎಂದು ಹೇಳಿದ್ದಾರೆ. ಟೆಕ್ನಿಕಲಿ, ಆತನ ಬ್ಯಾಟಿಂಗ್​ ತುಂಬ ಭಿನ್ನವಾಗಿದೆ. ಬೇಸ್​ ಬಾಲ್​ ರೀತಿ ಸ್ವಿಂಗ್​ ಆಗುತ್ತದೆ. ವೈಭವ್ ಅವರ ವೀಕ್ನೆಸ್​ ಇದೇ ಅಂತ ಹೇಳುವುದು ಬಹಳ ಕಷ್ಟಕರ. ಆದರೆ, ನಾನು ಗಮನಿಸಿರುವಂತೆ, ಅವರ ವಿರುದ್ಧ ಬ್ಯಾಕ್​ ಆಫ್​ ದಿ ಲೆಂಥ್​ ಬೌಲಿಂಗ್​ ವರ್ಕ್​ ಆಗಿದೆ ಎಂದು ಹೇಳಿದರು.
ಇತ್ತೀಚೆಗಷ್ಟೇ ಪಾಕ್​ನ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಕೆಟ್​ ಎಕ್ಸ್​ಪರ್ಟ್​ ನೌಮನ್​ ನಿಯಾಜ್​, ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ ಅವರ ದೇಹದೊಳಗೆ ಮತ್ತು ಬ್ಯಾಟ್​ನೊಳಗೆ ಯಾವುದೋ ಎಐ ಚಿಪ್​ ಅವಳಡಿಕೆಯಾಗಿದೆ. ಮೊದಲು ಆತನನ್ನು ಯಾವುದಾದರೂ ಲ್ಯಾಬ್​ಗೆ ಕಳುಹಿಸಿ, ಚೆಕ್​ ಮಾಡಿಸಿ ಎಂದು ತಮಾಷೆಯಾಗಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು,(ಏಜೆನ್ಸೀಸ್).