SRH vs CSK ಪಂದ್ಯ, ಎಸ್​ಆರ್​ಎಚ್​ ತಂಡದ ನಾಯಕ ಇಶಾನ್ ಕಿಶನ್  
ಕ್ರಿಕೆಟ್

ಅವರೇ ನಮ್ಮ ಗೆಲುವಿಗೆ ಕಾರಣ... ಚೆನ್ನೈ ಪಡೆಗೆ ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ ಎಸ್​ಆರ್​ಎಚ್​ ಕ್ಯಾಪ್ಟನ್

ಪ್ರಮುಖ ಮುಖ್ಯಾಂಶಗಳು

  • CSK ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ 10 ರನ್​ಗಳ ರೋಚಕ ಗೆಲುವು
  • ತಂಡದ ಪರ ಅಭಿಷೇಕ್ ಶರ್ಮ ಮತ್ತು ಹೆನ್ರಿಚ್​ ಕ್ಲಾಸೆನ್ ಮಿಂಚಿನಾಟ
  • ತವರಿನಲ್ಲಿ ಮತ್ತೊಂದು ಗೆಲುವು ದಾಖಲಿಸಿದ ಸನ್​ರೈಸರ್ಸ್​
  • ಪಂದ್ಯ ಗೆದ್ದ ಬೆನ್ನಲ್ಲೇ ಸಂಭ್ರಮದ ಹೇಳಿಕೆ ನೀಡಿದ ಇಶಾನ್ ಕಿಶನ್​
SRH vs CSK: ಐಪಿಎಲ್ 19ನೇ ಆವೃತ್ತಿಯ ಭಾಗವಾಗಿ, ಶನಿವಾರ (ಏ.18) ಹೈದರಾಬಾದ್‌ನ ಉಪ್ಪಾಲ್​ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದಲ್ಲಿ ಇಶಾನ್​ ಕಿಶನ್​ ಪಡೆ 10 ರನ್​ಗಳ ರೋಚಕ ಗೆಲುವು ದಾಖಲಿಸಿತು.
ಕೊನೆಯ ಓವರ್​ವರೆಗೂ ಹೋದ ರೋಮಾಂಚನಕಾರಿ ಪಂದ್ಯದಲ್ಲಿ, ಉತ್ತಮ ಆಲ್​ರೌಂಡ್​ ಪ್ರದರ್ಶನದಿಂದ ಸನ್​ರೈಸರ್ಸ್​ ಗೆದ್ದು ಬೀಗಿದ್ದು ಗಮನಾರ್ಹ. ಗೆಲುವಿನ ಖುಷಿಯಲ್ಲಿ ಮಾತನಾಡಿದ ತಂಡದ ನಾಯಕ ಇಶಾನ್ ಕಿಶನ್, ನಾವು ಬೌಲರ್​​ಗಳು ಮಾಡಿದ ಕಮಾಲ್​ ಮತ್ತು ಪರಿಣಾಮಕಾರಿ ಬೌಲಿಂಗ್​ನಿಂದಲೇ ಗೆಲುವು ಪಡೆದುಕೊಂಡೆವು ಎಂದರು.
ನಮ್ಮ ಯುವ ಬೌಲರ್‌ಗಳು ಅದ್ಭುತ ಬೌಲಿಂಗ್​ನಿಂದ ಎದುರಾಳಿ ಬ್ಯಾಟರ್‌ಗಳ ಮೇಲೆ ಭಾರೀ ಒತ್ತಡ ಹೇರಿದರು. ತಮ್ಮದೇ ಆದ ಆಲೋಚನೆಗಳೊಂದಿಗೆ ಮತ್ತು ಪ್ಲ್ಯಾನಿಂಗ್​ ಪ್ರಕಾರ ಬೌಲಿಂಗ್ ಮಾಡುತ್ತಿದ್ದಾರೆ. ಕ್ಯಾಪ್ಟನ್​ ಆಗಿ ನನ್ನ ಮೇಲಿರುವ ಒತ್ತಡವು ಬಹಳಷ್ಟು ಕಡಿಮೆಯಾಗಿದೆ. ಅದು ನನಗೆ ಫೀಲ್ಡಿಂಗ್​ ಮಾಡಲು ಉತ್ತಮ ಸಾಥ್​ ನೀಡಿತು. ಇಂದು ಅವರೆಲ್ಲ ಬೌಲಿಂಗ್ ಮಾಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು ಎಂದು ಕಿಶನ್ ಹೇಳಿದರು.
"ಸಾಮಾನ್ಯವಾಗಿ ನಾವು 220 ಅಥವಾ 230 ರನ್ ಗಳಿಸಿದಾಗಲೆಲ್ಲಾ, ಟಾಪ್ ಮೂರು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದರೂ ಬಿಗ್ ಸ್ಕೋರ್​ ಮಾಡುತ್ತಾರೆ. ಇಂದು ನಾವು ಆ ದೊಡ್ಡ ಇನ್ನಿಂಗ್ಸ್​ನಿಂದ ದೂರ ಉಳಿದೆವು. ಈ ಬ್ಯಾಟಿಂಗ್ ಲೈನ್‌ಅಪ್‌ನೊಂದಿಗೆ ನಾವು ಖಂಡಿತವಾಗಿಯೂ 20ರಿಂದ 30 ರನ್‌ಗಳನ್ನು ಬಿಟ್ಟುಕೊಟ್ಟಿದ್ದೇವೆ. ಈ ಪಂದ್ಯದಿಂದ ಕಲಿಯಲು ಬಹಳಷ್ಟಿದೆ. ಶಾಟ್ ಆಯ್ಕೆಯ ವಿಷಯದಲ್ಲಿ ನಾವು ಇನ್ನೂ ಸುಧಾರಿಸಬೇಕಾಗಿದೆ. ಇದು ಬಹಳ ದೀರ್ಘವಾದ ಲೀಗ್​. ಪ್ರತಿ ಪಂದ್ಯವನ್ನು ಗೆಲ್ಲುವುದು ನಮ್ಮ ಮುಖ್ಯ ಗುರಿ" ಎಂದು ಇಶಾನ್ ಖುಷಿಯ ಮಾತುಗಳನ್ನಾಡಿದರು.

ಪಂದ್ಯದ ವಿವರ

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 9 ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಿತು. ಅಭಿಷೇಕ್ ಶರ್ಮಾ (59) ಮತ್ತು ಕ್ಲಾಸೆನ್ (59) ಅರ್ಧಶತಕಗಳೊಂದಿಗೆ ಮಿಂಚಿದರು. 195 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ಎಂಟು ವಿಕೆಟ್‌ಗಳ ನಷ್ಟಕ್ಕೆ ಕೇವಲ 184 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲೂ ಹೈದರಾಬಾದ್ ಬೌಲರ್‌ಗಳು ಮತ್ತೊಮ್ಮೆ ತಮ್ಮ ತಂಡದ ಪರ ಮಿಂಚಿದರು. ಎದುರಾಳಿ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಮಾಲಿಂಗ ಮೂರು, ನಿತೀಶ್ ರೆಡ್ಡಿ ಎರಡು ಮತ್ತು ಶಿವಂಗ್ ಕುಮಾರ್ ಒಂದು ವಿಕೆಟ್​ ಪಡೆದು ಎಸ್​ಆರ್​ಎಚ್​ ಗೆಲುವಿಗೆ ಕಾರಣರಾದರು,(ಏಜೆನ್ಸೀಸ್).