ಇಂಗ್ಲೆಂಡ್-ಭಾರತ ಟಿ20 ಸರಣಿ
- ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್-ಭಾರತ ಟಿ20 ಸರಣಿಯ ಕೊನೆಯ ಪಂದ್ಯ
- ಟೀಮ್ ಇಂಡಿಯಾವನ್ನು ಕ್ಲೀನ್ ಸ್ವೀಪ್ ಮಾಡಲು ಇಂಗ್ಲೆಂಡ್ ಸಜ್ಜು
- ಶ್ರೇಯಸ್ ಅಯ್ಯರ್ ಪಡೆಗೆ ಕ್ಯಾಪ್ಟನ್ ಹ್ಯಾರಿ ಬ್ರೂಕ್
Harry Brook: ಐದು ಪಂದ್ಯಗಳ ಟಿ20 ಸರಣಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು 3-0 ಅಂತರದಲ್ಲಿ ಮಣಿಸಿರುವ ಇಂಗ್ಲೆಂಡ್, ಇಂದಿನ ಪಂದ್ಯದಲ್ಲಿಯೂ ಗೆದ್ದು ಕ್ಲೀನ್ ಸ್ವೀಪ್ ಮಾಡಲು ಪಣತೊಟ್ಟಿದೆ. ಮತ್ತೊಂದೆಡೆ, 5ನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೂ ಮುನ್ನ ಆಂಗ್ಲರ ತಂಡದ ನಾಯಕ ಹ್ಯಾರಿ ಬ್ರೂಕ್ ಕೆಲವು ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ.
ಬ್ರಿಸ್ಟಲ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದು ಐದು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ 3-0 ಅಂತರದಿಂದ ಗೆದ್ದಿರುವ ಇಂಗ್ಲೆಂಡ್, ಇಂದು ಸಂಜೆ 7 ಗಂಟೆಗೆ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಬಹುದಿನಗಳ ಬಳಿಕ ಕ್ಲೀನ್ ಸ್ವೀಪ್ ರುಚಿ ತೋರಿಸಲು ಸಜ್ಜಾಗಿದೆ. ಈ ಮೂಲಕ ಭಾರತವನ್ನು ಕೆಳಕ್ಕೆ ತಳ್ಳಿ ಅಂತಾರಾಷ್ಟ್ರೀಯ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ವಶಪಡಿಸಿಕೊಳ್ಳುವುದು ಇಂಗ್ಲೆಂಡ್ನ ಗುರಿ ಎಂದು ಕ್ಯಾಪ್ಟನ್ ಹೇಳಿದ್ದಾರೆ.
"ಮುಂದಿನ ಪಂದ್ಯ ಗೆದ್ದರೆ ನಾವು ವಿಶ್ವದ ನಂಬರ್ ಒನ್ ತಂಡ ಆಗುತ್ತೇವೆ ಎಂಬ ಸಂಗತಿ ನಮಗೆ ಗೊತ್ತಿದೆ. ಆ ಸ್ಥಾನವನ್ನು ಸಾಧಿಸಲು ನಮ್ಮ ಪಡೆ ಸನ್ನದ್ಧವಾಗಿದೆ. ಭಾರತ ಅತ್ಯಂತ ಬಲಿಷ್ಠ ತಂಡ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಅವರು ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದರೂ, ಅವರ ವಿರುದ್ಧ ನಮ್ಮ ಪ್ಲ್ಯಾನ್ಗಳನ್ನು ಸರಿಯಾಗಿ ಬಳಸಿದ್ದೇವೆ ಎಂಬ ಸಂತೋಷವಿದೆ. ಟೀಮ್ ಇಂಡಿಯಾ ಎದುರು ಸರಣಿಯನ್ನು 4-0 ಅಂತರದಿಂದ ಗೆಲ್ಲುವುದು ವಿಶೇಷವೇ ಎಂದಿದ್ದಾರೆ.