ಎಸ್ಆರ್ಎಚ್ ಕೋಚ್ ಡೆನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ
- ನಿನ್ನೆ (ಮಾ.29) ಇಲ್ಲಿನ ಎಂ. ಚಿನ್ನಸ್ವಾಮಿಯಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಮೊದಲ ಪಂದ್ಯ
- ತವರಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು
- ಆರ್ಸಿಬಿಗೆ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ರಿಂದ ಅದ್ಭುತ ಬ್ಯಾಟಿಂಗ್
ಬೆಂಗಳೂರು: ನಿನ್ನೆ (ಮಾ.29) ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ ಕೇವಲ 15.4 ಓವರ್ನಲ್ಲಿ 202 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತುವ ಮೂಲಕ ಭರ್ಜರಿ ಗೆಲುವು ದಾಖಲಿಸಿತು. ತವರಿನಲ್ಲಿ ಮೊದಲ ಗೆಲುವು ಕಂಡ ಆರ್ಸಿಬಿಗೆ ಅಭಿಮಾನಿ ಬಳಗದಿಂದ ಮೆಚ್ಚುಗೆಗಳು ಹರಿದುಬಂದಿತು. ಮತ್ತೊಂದೆಡೆ, ಇಶಾನ್ ಕಿಶನ್ ನಾಯಕತ್ವದಲ್ಲಿ ಆಡಿದ ಸನ್ರೈಸರ್ಸ್ ಹೈದರಾಬಾದ್ ತಮ್ಮ ಹೀನಾಯ ಸೋಲಿಗೆ ಕಡೆಗೂ ಮೌನಮುರಿದಿದೆ.
ಕ್ಯಾಪ್ಟನ್ ಕಿಶನ್ ಬೇಸರ
ಈ ಪಂದ್ಯದ ಬಳಿಕ ಮಾತನಾಡಿದ ಎಸ್ಆರ್ಎಚ್ ನಾಯಕ ಇಶಾನ್ ಕಿಶನ್, ತಮ್ಮ ತಂಡದ ಸೋಲಿಗೆ ಕಾರಣಗಳು ಏನು ಎಂಬುದನ್ನು ತಿಳಿಸಿದರು. ಅಗ್ರ ಕ್ರಮಾಂಕದ ಮೂರು ಬ್ಯಾಟ್ಸ್‌ಮನ್‌ಗಳ ವೈಫಲ್ಯ ಮತ್ತು ಕಳಪೆ ಬೌಲಿಂಗ್ ತಮ್ಮ ತಂಡದ ಸೋಲಿಗೆ ಪ್ರಮುಖ ಕಾರಣ ಎಂದರು. ಮೊದಲ ಮೂರು ಅಥವಾ ನಾಲ್ಕು ಓವರ್‌ಗಳ ನಂತರ, ಪಿಚ್ ಬ್ಯಾಟಿಂಗ್‌ಗೆ ಸೂಕ್ತವಾಯಿತು. ನಾವು ಆರಂಭದಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡೆವು. ವಿಕೆಟ್ ಉಳಿಸಿಕೊಳ್ಳುವುದರ ಕಡೆ ನಾವು ಗಮನ ಹರಿಸಬೇಕಾಗಿದೆ ಎಂದರು.
ಸಿಟ್ಟಾದ ಎಸ್ಆರ್ಎಚ್ ಕೋಚ್
ಕಿಶನ್ ಬಳಿಕ ಮಾತನಾಡಿದ ಕೋಚ್ ಡೆನಿಯಲ್ ವೆಟ್ಟೋರಿ, ನಿಮಗೆ ಉತ್ತಮ ಆರಂಭ ಸಿಗಬೇಕು. ಅದನ್ನೇ ನಾವು ಫಿಲ್ ಸಾಲ್ಟ್ ಅವರ ವಿಕೆಟ್ ಕಬಳಿಸಿದಾಗ ಪಡೆದವು. ಆದರೆ, ಅದು ಮುಂದುವರಿಯಲಿಲ್ಲ. ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅವರಿಗೆ ಹೆಚ್ಚುವರಿ ರನ್ಗಳನ್ನು ಬಾರಿಸಲು ಅವಕಾಶ ಮಾಡಿಕೊಟ್ಟೆವು. ಅದು ನಮಗೆ ಬೇಕಿರಲಿಲ್ಲ. ಅವರಿಬ್ಬರ ಆಟ ನಿಜಕ್ಕೂ ಅದ್ಭುತವಾಗಿತ್ತು ಎಂದರು.
ನಮ್ಮ ಪಡೆ ತುಂಬ ಶಿಸ್ತಿನಿಂದ ಇರಬೇಕು. ಅದನ್ನು ಕಾಪಾಡಿಕೊಂಡು ಹೋಗಬೇಕು. ಅದರಲ್ಲೂ, ಸಾಲ್ಟ್ ಅವರಂತಹ ಬಹುಮುಖ್ಯ ವಿಕೆಟ್ ಪಡೆದಾಗ ಇನ್ನಷ್ಟು ಚುರುಕಾಗಬೇಕಿತ್ತು. ಅವರ (ಆರ್ಸಿಬಿ) ಬ್ಯಾಟಿಂಗ್ ಅದ್ಭುತವಾಗಿತ್ತು. ಮತ್ತೊಂದು ಕಡೆ, ನಮ್ಮವರ ಬೌಲಿಂಗ್ ತುಂಬ ಕಳಪೆಯಾಗಿತ್ತು. ನಾವು ಆರ್ಸಿಬಿಯಿಂದ ತುಂಬ ಕಲಿತೆವು. ಅವರ ಬೌಲರ್ಗಳು ಉತ್ತಮ ಕೆಲಸ ಮಾಡಿದರು. ಆದರೆ, ನಮ್ಮವರು ಅದನ್ನು ಅಳವಡಿಸಿಕೊಳ್ಳಲು ಎಡವಿದರು. ಪ್ರತಿಯೊಂದು ಐಪಿಎಲ್ ಪಂದ್ಯವು ತುಂಬ ಮುಖ್ಯ. ಅತೀ ಮುಖ್ಯವಾಗಿ ಆರಂಭ ಎಂದು ತಮ್ಮ ಬೇಸರ ಹೊರಹಾಕಿದರು,(ಏಜೆನ್ಸೀಸ್).