ಪಹಲ್ಗಾಮ್ ದಾಳಿ ನಂತರ ಭಾರತ-ಪಾಕ್ ಮತ್ತೆ ಮುಖಾಮುಖಿ: ಅ. 10ಕ್ಕೆ WCL ಕ್ರಿಕೆಟ್ ಕದನ, ಈ ಬಾರಿ ಲೆಜೆಂಡ್ಸ್ ಆಡ್ತಾರಾ? WCL 2026
- ಅಕ್ಟೋಬರ್ 10ಕ್ಕೆ ಭಾರತ–ಪಾಕ್ ನಡುವೆ ಕ್ರಿಕೆಟ್ ಕದನ, ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ
- ಪಹಲ್ಗಾಮ್ ದಾಳಿ ಬಳಿಕ ಭಾರತ, ಪಾಕಿಸ್ತಾನ ವಿರುದ್ಧ ಆಡುತ್ತಿರುವ ಮೊದಲ ಪಂದ್ಯ
- ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಮತ್ತು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯಗಳ ಆಯೋಜನೆ
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದ ಹಿನ್ನೆಲೆ ಕಳೆದ ವರ್ಷದ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (WCL) ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿತ್ತು. ಆದರೆ, ಅಕ್ಟೋಬರ್ 10ರಂದು ದುಬೈನಲ್ಲಿ ನಡೆಯಲಿರುವ ಡಬ್ಲ್ಯುಸಿಎಲ್ (WCL 2026) ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ.
ಕಳೆದ ಟೂರ್ನಿಯಲ್ಲಿ ಈ ತಂಡಗಳ ನಡುವೆ ಎರಡು ಪಂದ್ಯಗಳು ರದ್ದಾಗಿದ್ದವು. ಪಹಲ್ಗಾಮ್ ಉಗ್ರ ದಾಳಿ ಮತ್ತು ಆ ಬಳಿಕ ನಡೆದ ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರರು ಎಡ್ಜ್ಬಾಸ್ಟನ್ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಟವಾಡಲು ನಿರಾಕರಿಸಿದ್ದರು. ಇದೀಗ ಮತ್ತೊಮ್ಮೆ ಮುಖಾಮುಖಿ ಆಗುವ ಸಮಯ ಬಂದಿದೆ. ಈ ಬಾರಿ ಆಡುತ್ತಾರಾ? ಇಲ್ಲವಾ? ಅನ್ನೋದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಭಾರತದ ಪಂದ್ಯಗಳ ವೇಳಾಪಟ್ಟಿ
ಭಾರತ ತಂಡ ತಮ್ಮ ಮೊದಲು ಪಂದ್ಯವನ್ನು ಅಕ್ಟೋಬರ್ 3ರಂದು ಶಾರ್ಜಾದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಆಡಲಿದೆ. ನಂತರ ಅಕ್ಟೋಬರ್ 4ರಂದು ಇಂಗ್ಲೆಂಡ್ ತಂಡದ ವಿರುದ್ಧ ಆಡಲಿದೆ. ಅಕ್ಟೋಬರ್ 6ರಂದು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ವಿರುದ್ಧ ಪಂದ್ಯ ನಡೆಯಲಿದ್ದು, ಬಳಿಕ ಅಕ್ಟೋಬರ್ 10ರಂದು ದುಬೈನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಎದುರಿಸಲಿದೆ. ಹಲವು ಪಂದ್ಯಗಳ ನಿರಾಕರಣೆ ನಂತರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯ ಎಲ್ಲರಲ್ಲೂ ಕಾತುರ ಮೂಡಿಸಿದೆ. ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 16ರಂದು ನಡೆಯಲಿವೆ. ಶಾರ್ಜಾದಲ್ಲಿ ಅಕ್ಟೋಬರ್ 18ರಂದು ಫೈನಲ್ ಪಂದ್ಯವನ್ನು ಆಯೋಜಿಸಲಾಗಿದೆ.
ಭಾರತ ಯಾವ ಪಂದ್ಯಗಳನ್ನು ನಿರಾಕರಿಸಿತ್ತು
ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಬೇಕಿತ್ತು. ಆದರೆ ಆ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಮೈದಾನಕ್ಕಿಳಿಯಲು ನಿರಾಕರಿಸಿತು. ಹೀಗಾಗಿ ಪಂದ್ಯ ರದ್ದಾಗಿ, ಯಾವುದೇ ಎಸೆತ ನಡೆಯದೆ ಪಾಕಿಸ್ತಾನ ಚಾಂಪಿಯನ್ಸ್ ತಂಡ ಫೈನಲ್ಗೆ ಪ್ರವೇಶಿಸಿತ್ತು.
ಇದೀಗ 2026ರ ವೇಳಾಪಟ್ಟಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಮತ್ತೆ ಸೇರ್ಪಡೆಯಾಗಿರುವುದು ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಈ ವರ್ಷವು ಪಂದ್ಯ ನಡೆಯಲಿದೆಯೇ ಅಥವಾ ಕಳೆದ ವರ್ಷದಂತೆ ರದ್ದಾಗಲಿದೆಯೇ ಎಂಬುದು ಎಲ್ಲೆಡೆ ಭಾರಿ ಚರ್ಚೆಯಾಗುತ್ತದೆ.
WCL ಸಂಸ್ಥಾಪಕ ಹರ್ಷಿತ್ ತೋಮರ್ ಹೇಳಿದ್ದೇನು?
ಮೂರನೇ ಆವೃತ್ತಿಯಲ್ಲಿ ಕ್ರಿಕೆಟ್ನ ಪ್ರಮುಖ ಪ್ರತಿಸ್ಪರ್ಧಿಗಳನ್ನು ಹಾಗೂ ದಿಗ್ಗಜ ಆಟಗಾರರನ್ನು ಮತ್ತೆ ಒಂದೇ ವೇದಿಕೆಗೆ ತರುವ ಉದ್ದೇಶವಿದೆ ಎಂದು ಹೇಳಿದ್ದಾರೆ. UAEನಲ್ಲಿ ಟೂರ್ನಿ ಆಯೋಜಿಸುತ್ತಿರುವುದು ಬಹಳ ಸಂತೋಷ ತಂದಿದೆ. ಎಲ್ಲ ಆಟಗಾರರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು WCL ಸಂಸ್ಥಾಪಕ ಹಾಗೂ ಸಿಇಒ ಹರ್ಷಿತ್ ತೋಮರ್ ಹೇಳಿದ್ದಾರೆ.
ಫೈನಲ್ ಪಂದ್ಯ ಎಲ್ಲಿ?
WCLನ ಮೂರನೇ ಆವೃತ್ತಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯ ವಹಿಸಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಮತ್ತು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯಗಳು ನಡೆಯಲಿವೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ಭಾಗವಹಿಸಲಿವೆ. ಈ ಬಾರಿ ಬಾಂಗ್ಲಾದೇಶ ಕೂಡ ಟೂರ್ನಿಯಲ್ಲಿ ಭಾಗವಹಿಸಲಿದೆ, (ಏಜೆನ್ಸೀಸ್).