ಆರ್‌ಸಿಬಿಯ ಡೇಂಜರಸ್ ಬೌಲರ್ ಚೆಂಡನ್ನು ಎದುರಿಸಲಾಗದೇ ಪರದಾಡಿ ಕ್ಲೀನ್ ಬೋಲ್ಡ್ ಆದ ಕೊಹ್ಲಿ! ವಿಡಿಯೋ ವೈರಲ್... Virat Kohli
- ಈ ಬಾರಿ ಆರ್ಸಿಬಿ ತಂಡಕ್ಕೆ ಬೌಲಿಂಗ್ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
- ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಶ್ ಹ್ಯಾಜಲ್ವುಡ್ ಮೊದಲ ಒಂದಿಷ್ಟು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ
- ತಂಡದ ಎಡಗೈ ಹಾಗೂ ನಿರ್ಣಾಯಕ ಬೌಲರ್ ಎನಿಸಿಕೊಂಡಿರುವ ಯಶ್ ದಯಾಳ್ ಕುರಿತ ಅನಿಶ್ಚಿತತೆ ಮುಂದುವರಿದಿದೆ
- ಆರ್ಸಿಬಿ ತಂಡ ಭಾರತದ ಅನುಭವಿ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಅವರ ಮೇಲೆ ಅವಲಂಬಿತವಾಗಿದೆ
Virat Kohli : ಮತ್ತೊಂದು ಕ್ರಿಕೆಟ್ ಹಬ್ಬಕ್ಕೆ ಭಾರತ ರೆಡಿಯಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಟಿ20 ವಿಶ್ವಕಪ್ ಮೆಗಾ ಟೂರ್ನಿ ಮುಕ್ತಾಯಗೊಂಡಿತು. ಆತಿಥೇಯ ಭಾರತ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಇತಿಹಾಸ ಬರೆಯಿತು. ಇದೀಗ, ಕ್ರೀಡಾಪ್ರೇಮಿಗಳ ಕಣ್ಣು ಕ್ಯಾಶ್ ರಿಚ್ ಲೀಗ್ ಐಪಿಎಲ್ ಮೇಲೆ ಬಿದ್ದಿದೆ. ಮಾರ್ಚ್ 28ರಿಂದ ಆರಂಭವಾಗಲಿದ್ದು ದಿನಗಣನೆ ಆರಂಭವಾಗಿದೆ.
ಈ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳು ಸಿದ್ಧತೆಯಲ್ಲಿ ತೊಡಗಿವೆ. ಎಲ್ಲ ಆಟಗಾರರು ಆಯಾ ತಂಡಗಳನ್ನು ಸೇರಿಕೊಂಡಿದ್ದು, ಕಠಿಣ ತರಬೇತಿಯಲ್ಲಿ ತೊಡಗಿವೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಮತ್ತೊಮ್ಮೆ ಟ್ರೋಫಿ ಗೆಲ್ಲುವ ಭರವಸೆ ಹೊಂದಿದೆ. ಹೀಗಾಗಿ, ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ಫಿಲ್ ಸಾಲ್ಟ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ನಾಯಕ ರಜತ್ ಪಾಟಿದಾರ್ ಸೇರಿದಂತೆ ಎಲ್ಲ ಆಟಗಾರರು ನೆಟ್ನಲ್ಲಿ ಬೆವರಿಳಿಸುತ್ತಿದ್ದಾರೆ.
ಆರ್ಸಿಬಿ ತಂಡಕ್ಕೆ ಈ ಬಾರಿ ಬೌಲಿಂಗ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಏಕೆಂದರೆ, ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಶ್ ಹ್ಯಾಜಲ್ವುಡ್ ಮೊದಲ ಒಂದಿಷ್ಟು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅಲ್ಲದೆ, ತಂಡದ ಎಡಗೈ ಹಾಗೂ ನಿರ್ಣಾಯಕ ಬೌಲರ್ ಎನಿಸಿಕೊಂಡಿರುವ ಯಶ್ ದಯಾಳ್, ಈ ಸೀಸನ್ನಲ್ಲಿ ತಂಡದ ಭಾಗವಾಗುತ್ತಾರಾ? ಇಲ್ಲವಾ? ಅನ್ನೋದು ಕೂಡ ಅನಿಶ್ಚಿತತೆಯಲ್ಲಿದೆ. ಹೀಗಾಗಿ, ಆರ್ಸಿಬಿ ತಂಡ ಭಾರತದ ಅನುಭವಿ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಅವರ ಮೇಲೆ ಅವಲಂಬಿತವಾಗಿದೆ. ಆ ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯ 36 ವರ್ಷದ ಭುವನೇಶ್ವರ್ ಅವರಿಗಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ತಕ್ಕಂತೆ ಕಠಿಣ ತರಬೇತಿಯಲ್ಲಿ ತೊಡಗಿರುವ ಭುವನೇಶ್ವರ್, ಇತ್ತೀಚೆಗೆ ತಮ್ಮ ಖಡಕ್ ಯಾರ್ಕರ್ ಬೌಲಿಂಗ್ ಮೂಲಕ ದಾಖಲೆಗಳ ಸರದಾರ, ರನ್ ಮೆಷಿನ್ ಹಾಗೂ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೋಲ್ಡ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಭುವನೇಶ್ವರ್ ಕುಮಾರ್ ಅವರು ಕೊಹ್ಲಿಯ ಕಾಲು ಮತ್ತು ಸ್ಟಂಪ್ಗಳತ್ತ ಕರಾರುವೊಕ್ಕಾದ ಯಾರ್ಕರ್ ದಾಳಿ ಮಾಡುತ್ತಾರೆ. ಈ ಬಾಲ್ನಿಂದ ತಮ್ಮ ನಿಯಂತ್ರಣ ಕಳೆದುಕೊಳ್ಳುವ ಕೊಹ್ಲಿ, ಕ್ಲೀನ್ ಬೋಲ್ಡ್ ಆಗುತ್ತಾರೆ. ಇದನ್ನು ನೋಡಿದ ನೆಟ್ಟಿಗರು, ಭುವಿ ಬೌಲಿಂಗ್ ಫಿದಾ ಆಗಿದ್ದಾರೆ. ಈ ಬಾರಿಯೂ ಭುವಿಯಿಂದ ಸಖತ್ ಬೌಲಿಂಗ್ ಫಾರ್ಮ್ ನಿರೀಕ್ಷೆ ಮಾಡಬಹುದು ಎಂದು ಆರ್ಸಿಬಿ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ, ಕೊಹ್ಲಿ ಮತ್ತು ಭುವಿ 2025ರಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ ತಮ್ಮ ಚೊಚ್ಚಲ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. 15 ಇನ್ನಿಂಗ್ಸ್ ಆಡಿದ ಕೊಹ್ಲಿ 657 ರನ್ ಗಳಿಸುವ ಮೂಲಕ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮತ್ತೊಂದೆಡೆ ಭುವಿ, 14 ಪಂದ್ಯಗಳಿಂದ 17 ವಿಕೆಟ್ಗಳನ್ನು ಪಡೆಯುವ ಮೂಲಕ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
2025ರ ಐಪಿಎಲ್ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ.ಗಳಿಗೆ ಆರ್ಸಿಬಿ ತಂಡ ಸೇರಿಕೊಂಡ ಭುವನೇಶ್ವರ್, ಮಾರ್ಚ್ 28ರಿಂದ ಆರಂಭವಾಗಲಿರುವ 19ನೇ ಸೀಸನ್ಗೆ ಆರ್‌ಸಿಬಿಯ ಯುವ ವೇಗಿಗಳಿಗೆ ಮಾರ್ಗದರ್ಶಕನ ಪಾತ್ರ ವಹಿಸಬೇಕಾಗಬಹುದು. ರಸಿಕ್ ಸಲಾಂ ದಾರ್ (6 ಕೋಟಿ ರೂ. ) ಅವರು ಫ್ರಾಂಚೈಸಿಗೆ ಆರಂಭಿಕ ಬೌಲರ್ ಆಗಿ ರೂಪುಗೊಳ್ಳುವ ಭರವಸೆಯಲ್ಲಿದ್ದಾರೆ. ಅದೇ ಸಮಯದಲ್ಲಿ ಅಭಿಮಾನಿಗಳು ಎಡಗೈ ವೇಗಿ ಮಂಗೇಶ್ ಯಾದವ್ (5.20 ಕೋಟಿ ರೂ.) ಮೇಲೆಯೂ ಕಣ್ಣಿಟ್ಟಿದ್ದಾರೆ, (ಏಜೆನ್ಸೀಸ್).