ಪಂಜಾಬ್ ದಾಖಲೆ ಮುರಿದ ವಾಷಿಂಗ್ಟನ್ ಫ್ರೀಡಂ:ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಚೇಸಿಂಗ್!
ಓಕ್‌ಲ್ಯಾಂಡ್: ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್‌ನಲ್ಲಿ 270 ರನ್‌ಗಳ ಯಶಸ್ವಿ ಚೇಸಿಂಗ್ ನಡೆಸಿದ ವಾಷಿಂಗ್ಟನ್ ಫ್ರೀಡಂ ತಂಡ ಟಿ20 ಕ್ರಿಕೆಟ್‌ನಲ್ಲಿ ಸರ್ವಾಧಿಕ ಮೊತ್ತದ ಯಶಸ್ವಿ ಚೇಸಿಂಗ್ ವಿಶ್ವದಾಖಲೆ ನಿರ್ಮಿಸಿದೆ. ಮೂರು ಶತಕ ಹಾಗೂ 51 ಸಿಕ್ಸರ್ ದಾಖಲಾದ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡ, ಎಂಐ ನ್ಯೂಯಾರ್ಕ್ ವಿರುದ್ಧ ಆರು ವಿಕೆಟ್‌ಗಳ ಗೆಲುವು ಒಲಿಸಿಕೊಂಡಿತು. ಇದರೊಂದಿಗೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 265 ರನ್ ಯಶಸ್ವಿ ಚೇಸಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ದಾಖಲೆಯನ್ನು ಮುರಿಯಿತು.
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ನಿಕೋಲಸ್ ಪೂರನ್ (106 ರನ್, 33 ಎಸೆತ, 5 ಬೌಂಡರಿ, 13 ಸಿಕ್ಸರ್) ಶತಕದ ನೆರವಿನಿಂದ ಎಂಐ ನ್ಯೂಯಾರ್ಕ್ ತಂಡ 9 ವಿಕೆಟ್‌ಗೆ 266 ರನ್‌ಗಳಿಸಿತು. ಪ್ರತಿಯಾಗಿ ನಾಯಕ ಸ್ಟೀವನ್ ಸ್ಮಿತ್ (110* ರನ್, 48 ಎಸೆತ, 7 ಬೌಂಡರಿ, 9 ಸಿಕ್ಸರ್) ಹಾಗೂ ಆಂಡ್ರಿಯಸ್ ಗೌಸ್ (132 ರನ್, 51 ಎಸೆತ, 10 ಬೌಂಡರಿ, 12 ಸಿಕ್ಸರ್) ಶತಕಗಳ ನೆರವಿನಿಂದ ವಾಷಿಂಗ್ಟನ್ ಫ್ರೀಡಂ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 270 ರನ್‌ಗಳಿಸಿ ಭರ್ಜರಿ ಚೇಸಿಂಗ್ ನಡೆಸಿತು. ಸ್ಮಿತ್ ಹಾಗೂ ಗೌಸ್ ಮೂರನೇ ವಿಕೆಟ್‌ಗೆ 89 ಎಸೆತಗಳಲ್ಲಿ 241 ರನ್‌ಗಳ ದ್ವಿಶತಕದ ಜತೆಯಾಟ ನಡೆಸಿದರು.