- ಅಸಾದ್ ರೌಫ್‌ಗೆ ತಮ್ಮ ಪರ ನಿರ್ಣಯ ಕೊಡುವಂತೆ ಹೇಳಿದ್ದ ವೀರೂ
- ಹಣದ ಬದಲಿಗೆ ದುಬಾರಿ ವಸ್ತುಗಳನ್ನು ಕೊಟ್ಟಿದ್ದ ಸೆಹ್ವಾಗ್
- ಈ ಬಗ್ಗೆ ಮುಕ್ತವಾಗಿ ಸಂದರ್ಶನದಲ್ಲಿ ಮಾತನಾಡಿದ್ದ ಸ್ಟಾರ್ ಕ್ರಿಕೆಟಿಗ
ಮುಂಬೈ: ಅಂದಿನ ಭಾರತೀಯ ಕ್ರಿಕೆಟ್ನ ಸ್ಟಾರ್ ಬ್ಯಾಟರ್ ಆಗಿದ್ದ ವೀರೇಂದ್ರ ಸೆಹ್ವಾಗ್, ತಮ್ಮ ಸಹ ಓಪನರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ತಂಡದ ಪರ ಆರಂಭಿಕರಾಗಿ ಮೈದಾನಕ್ಕಿಳಿಯುತ್ತಿದ್ದರೆ, ಕ್ರಿಕೆಟ್ ಪ್ರಿಯರು ರೋಮಾಂಚಕ ಬ್ಯಾಟಿಂಗ್ ಪ್ರದರ್ಶನ ಖಚಿತ ಎಂದೇ ನಿರೀಕ್ಷಿಸುತ್ತಿದ್ದರು. ಕಾರಣ, ಇವರಿಬ್ಬರ ಜೋಡಿ ಎದುರಾಳಿ ತಂಡದ ಬೌಲರ್ಗಳ ವಿರುದ್ಧ ಆರ್ಭಟಿಸಲು ನಿಂತರೆ, ಬೌಂಡರಿ ಮತ್ತು ಸಿಕ್ಸರ್ಗಳ ಸುರಿಮಳೆ ಪಕ್ಕಾ. ಇದು ಮೈದಾನದಲ್ಲಿರುತ್ತಿದ್ದ ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿತ್ತು. ಆದರೀಗ, ಅದೇ ವೀರೂ ಬಗ್ಗೆ ಶಾಕಿಂಗ್ ವಿಚಾರವೊಂದು ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದು ಹಲವರ ಹುಬ್ಬೇರಿಸಿದೆ.
ತಮ್ಮ ತ್ರಿಬಲ್ ಸೆಂಚುರಿ ಮೂಲಕವೇ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆ ನಿರ್ಮಿಸಿರುವ ವೀರೂ, ತಮ್ಮ ಅಬ್ಬರದ ಬ್ಯಾಟಿಂಗ್ನಿಂದ ಅಪಾರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂಪಾದಿಸಿದ್ದಾರೆ. ಪ್ರಸ್ತುತ, ಕ್ರಿಕೆಟ್ ಜಗತ್ತಿಗೆ ಗುಡ್ಬೈ ಹೇಳಿ, ಆಗಾಗ್ಗೆ ಕೆಲವು ಸಂದರ್ಶನಗಳಲ್ಲಿ ತಮ್ಮ ಹಳೆಯ ನೆನಪುಗಳು ಮತ್ತು ಅನುಭವಗಳನ್ನು ಮೆಲುಕು ಹಾಕುವ ಸೆಹ್ವಾಗ್, ಹಿಂದಿನ ಸಂದರ್ಶನವೊಂದರಲ್ಲಿ ತಾವು ಮಾಡಿದ ತಪ್ಪನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಅದೀಗ, ಮತ್ತೆ ವೈರಲ್ ಆಗಿದೆ.
2023ರಲ್ಲಿ ಪ್ರಕಟವಾಗಿದ್ದ ನ್ಯೂಸ್ 18 ವರದಿ ಪ್ರಕಾರ, 'ವಾಟ್ ದಿ ಡಕ್' ವಿಥ್ ವಿಕ್ರಮ್ ಸಥಾಯೆ ಅವರ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದ ಸೆಹ್ವಾಗ್, ಪಾಕಿಸ್ತಾನಿ ಅಂಪೈರ್ ಅಸಾದ್ ರೌಫ್‌ಗೆ ತಮ್ಮ ಪರ ನಿರ್ಣಯಗಳನ್ನು ಕೊಡುವಂತೆ ಲಂಚ ನೀಡುವುದಾಗಿ ಹೇಳಿದ್ದೆ. ರೌಫ್ ಅವರಿಗೆ ಬ್ರ್ಯಾಂಡೆಡ್ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ದುಬಾರಿ ಮೌಲ್ಯದ ಸನ್ಶೇಡ್ಸ್, ಟಿ-ಶರ್ಟ್ ಮತ್ತು ಶೂಗಳನ್ನು ಧರಿಸುವುದನ್ನು ಇಷ್ಟಪಡುತ್ತಿದ್ದರು. ಆ ಸಮಯದಲ್ಲಿ ನಾನು ಒಂದು ಬ್ರ್ಯಾಂಡ್ ಸಂಸ್ಥೆಯ ರಾಯಭಾರಿಯಾಗಿದ್ದೆ. ಹೀಗಾಗಿ, ಅಲ್ಲಿ ಸಿಗುವ ವಸ್ತುಗಳನ್ನು ಇವರಿಗೆ ಕೊಟ್ಟು, ಮುಂದಿನ ಪಂದ್ಯಗಳಲ್ಲಿ ನನ್ನ ವಿರುದ್ಧ ಬೆರಳು ಎತ್ತಬೇಡಿ ಎಂದು ತಮಾಷೆಯಾಗಿ ಹೇಳಿದ್ದೆ ಎಂದಿದ್ದಾರೆ.
2008ರಲ್ಲಿ ಮೊಹಾಲಿಯಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಗ, ಈ ಘಟನೆ ನಡೆಯಿತು. ಟೀಮ್ ಇಂಡಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ, ನಾನು 90 ರನ್ ಗಳಿಸಿ, ಬ್ಯಾಟಿಂಗ್ ಮಾಡುತ್ತಿದ್ದೆ. ಈ ವೇಳೆ, ಮಿಚೆಲ್ ಜಾನ್ಸನ್ ಅವರ ಎಸೆತವು ನನ್ನ ಬ್ಯಾಟ್‌ಗೆ ತಗುಲಿತು. ತಕ್ಷಣವೇ ಇದು ಔಟ್ ಎಂದು ಆಸೀಸ್ ನಾಯಕ ರಿಕ್ಕಿ ಪಾಂಟಿಂಗ್ ಅಪೀಲ್ ಮಾಡಿದರು. ಆಶ್ಚರ್ಯ ಎಂದರೆ, ಅಂಪೈರ್ ರೌಫ್ ಅದನ್ನು ನಾಟ್ ಔಟ್ ಎಂದೇ ತೀರ್ಪು ನೀಡಿದರು ಎಂದು ಸೆಹ್ವಾಗ್ ಹೇಳಿಕೊಂಡಿದ್ದರು. ಈ ವಿಷಯ ಜಾಲತಾಣಗಳಲ್ಲಿ ಹರಿದಾಡಿದ್ದು, ನಿಜಕ್ಕೂ ವೀರೂ ಮೋಸ ಮಾಡಿದ್ರಾ? ಇದು ಸತ್ಯವೇ? ಎಂದೆಲ್ಲ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ,(ಏಜೆನ್ಸೀಸ್).