ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ
- ವಿರಾಟ್ ಕೊಹ್ಲಿ ಟಿ20 ಹಾಗೂ ಟೆಸ್ಟ್ ಮಾದರಿ ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡಿರುವುದು ಗೊತ್ತೇ ಇದೆ
- ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅಚ್ಚರಿ ಹೇಳಿಕೆ ನೀಡಿದ್ದಾರೆ
- ವಿರಾಟ್ ಕೊಹ್ಲಿ ಅವರು ತಮ್ಮ ಸ್ವಂತ ಇಚ್ಛೆಯಿಂದ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿಲ್ಲ ಎಂದಿದ್ದಾರೆ
ನವದೆಹಲಿ: ಟೀಮ್ ಇಂಡಿಯಾದ ದಿಗ್ಗಜ ಆಟಗಾರ, ದಾಖಲೆಗಳ ಸರದಾರ, ಚೇಸ್ ಮಾಸ್ಟರ್ ಹಾಗೂ ರನ್ ಮೆಷಿನ್ ಎಂದೇ ಹೆಸರಾಗಿರುವ ವಿರಾಟ್ ಕೊಹ್ಲಿ ( Virat Kohli ) ಟಿ20 ಹಾಗೂ ಟೆಸ್ಟ್ ಮಾದರಿ ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಕೊಹ್ಲಿ, ಟೆಸ್ಟ್ ನಿವೃತ್ತಿಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅಚ್ಚರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ಅವರು ತಮ್ಮ ಸ್ವಂತ ಇಚ್ಛೆಯಿಂದ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿಲ್ಲ. ಬದಲಾಗಿ, ತಂಡದಲ್ಲಿ ಉಂಟಾದ ಕೆಲ ಸಂದರ್ಭಗಳು ಅವರನ್ನು ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಾಯಿಸಿದವು ಎಂದು ಮನೋಜ್ ತಿವಾರಿ ಅವರು ಹೇಳಿದ್ದಾರೆ. ಅಂದಹಾಗೆ, 2025ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮೊದಲೇ ಕೊಹ್ಲಿ ಅನಿರೀಕ್ಷಿತ ನಿವೃತ್ತಿ ಘೋಷಣೆ ಮಾಡಿದರು. ರೋಹಿತ್ ವಿದಾಯ ಹೇಳಿದ ಕೆಲವೇ ದಿನಗಳಲ್ಲಿ ಕೊಹ್ಲಿ ಕೂಡ ವಿದಾಯ ಹೇಳಿದರು.
ಇನ್‌ಸೈಡ್ ಸ್ಪೋರ್ಟ್ ಜೊತೆ ಮಾತನಾಡಿದ ತಿವಾರಿ, ನನ್ನ ಅವಲೋಕನದ ಪ್ರಕಾರ, ಕೊಹ್ಲಿಯನ್ನು ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಬೇಕಾದ ಪರಿಸ್ಥಿತಿ ಕೊಹ್ಲಿಗೆ ಎದುರಾಗಿತ್ತು. ಕೊಹ್ಲಿ ತಾನಾಗಿಯೇ ಆಟವಾಡುವುದನ್ನು ನಿಲ್ಲಿಸುವ ವ್ಯಕ್ತಿಯಲ್ಲ. ಅವರು ನಿವೃತ್ತಿ ಘೋಷಿಸಿದ್ದು ನಿಜ ಆದರೆ, ಅದರ ಹಿಂದೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಮನೋಜ್ ತಿವಾರಿ ಹೇಳಿದರು.
ತಂಡದ ಒಳಗಿನ ವಾತಾವರಣವು ಕೊಹ್ಲಿಗೆ ಪೂರಕವಾಗಿರಲಿಲ್ಲ. ಅಂತಹ ಒಂದು ವಾತಾವರಣವನ್ನು ಸೃಷ್ಟಿಸಲಾಗಿತ್ತು. ಅಲ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವುದು ಅನಿವಾರ್ಯವಾಯಿತು. ತಂಡದ ಹೊಸ ವ್ಯವಸ್ಥೆಯಲ್ಲಿ ಕೊಹ್ಲಿ ಅವರಿಗೆ ತಾವು ಅಲ್ಲಿ 'ಬೇಡವಾದವರು' ಎಂಬ ಭಾವನೆ ಮೂಡುವಂತೆ ಮಾಡಲಾಗಿತ್ತು. ರೆಡ್-ಬಾಲ್ ಕ್ರಿಕೆಟ್ ಅನ್ನು ಅತೀವವಾಗಿ ಪ್ರೀತಿಸುವ ಕೊಹ್ಲಿ ಅದನ್ನು ಬಿಟ್ಟುಕೊಡುವ ವ್ಯಕ್ತಿಯಲ್ಲ ಆದರೆ, ಸಂದರ್ಭಗಳು ಹಾಗೆ ಮಾಡಿಸಿದವು ಎಂದು ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
ಪರಿವರ್ತನೆಯ ಹಂತ ಎಂಬ ಹೇಳಿಕೆಯನ್ನು ಖಂಡಿಸಿದ ತಿವಾರಿ, ಅಂತಹ ಅನಗತ್ಯ ಬದಲಾವಣೆಯ ಹೆಸರಿನಲ್ಲಿ ಕೊಹ್ಲಿ ಮತ್ತು ರೋಹಿತ್ ಅವರಂತಹ ದಿಗ್ಗಜರನ್ನು ಟೆಸ್ಟ್‌ನಿಂದ ದೂರ ಸರಿಯುವಂತೆ ಮಾಡಲಾಯಿತು ಎಂದು ಹೇಳಿದ್ದಾರೆ. ಅಲ್ಲದೆ, ಕೊಹ್ಲಿ ಅವರ ಫಿಟ್ನೆಸ್ ಗಮನಿಸಿದರೆ, ಅವರು ಇನ್ನೂ ಕನಿಷ್ಠ 3 ರಿಂದ 4 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಲು ಶಕ್ತರಾಗಿದ್ದರು ಎಂದು ತಿವಾರಿ ಹೇಳಿದ್ದಾರೆ, (ಏಜೆನ್ಸೀಸ್).