Virat Kohli | ವಿಲಿಯಮ್ಸನ್ ನಿವೃತ್ತಿಗೆ ಕೊಹ್ಲಿ ಬರೆದ ಸಾಲುಗಳು ವೈರಲ್
Virat Kohli: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ನಿವೃತ್ತಿಯ ಬೆನ್ನಲ್ಲೇ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ವಿದಾಯದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ಕಳೆದ ವರ್ಷವೇ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದ ವಿಲಿಯಮ್ಸನ್, ಈಗ ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ನ್ಯೂಜಿಲೆಂಡ್ ಪರ 378 ಪಂದ್ಯಗಳಿಂದ 48 ಶತಕ ಹಾಗೂ 6 ದ್ವಿಶತಕಗಳೂ ಸೇರಿದಂತೆ ಒಟ್ಟು 19.346 ರನ್ ಗಳಿಸಿರುವ ಅವರು, ನ್ಯೂಜಿಲೆಂಡ್ನ ಸಾರ್ವಕಾಲಿಕ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ. ತಮ್ಮ ಸಮಕಾಲೀನ ಶ್ರೇಷ್ಠ ಆಟಗಾರರಾದ ವಿಲಿಯಮ್ಸನ್ ಅವರ ವೃತ್ತಿಜೀವನವನ್ನು ಶ್ಲಾಘಿಸಿರುವ ಕೊಹ್ಲಿ, ನಿಜವಾದ ಜೀವನ ಈಗಷ್ಟೇ ಆರಂಭವಾಗಿದೆ ಎಂದು ಶುಭ ಹಾರೈಸಿದ್ದಾರೆ.
2008ರ ಅಂಡರ್-19 ವಿಶ್ವಕಪ್‌ನಲ್ಲಿ ತಮ್ಮ ತಮ್ಮ ದೇಶಗಳನ್ನು ಪ್ರತಿನಿಧಿಸಿದ್ದ ಕೊಹ್ಲಿ ಮತ್ತು ವಿಲಿಯಮ್ಸನ್, ಕಳೆದೊಂದು ದಶಕಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜತೆಯಾಗಿಯೇ ಪ್ರಾಬಲ್ಯ ಸಾಧಿಸಿದ್ದರು. ವರ್ಷಗಳು ಉರುಳಿದಂತೆ ತಮ್ಮ ನಡುವಿನ ಸ್ಪರ್ಧೆಯು ಗಾಢವಾದ ಸ್ನೇಹವಾಗಿ ಹೇಗೆ ಬದಲಾಯಿತು ಎಂಬುದನ್ನು ನೆನಪಿಸಿಕೊಂಡಿರುವ ಕೊಹ್ಲಿ, ಈ ಕಿವೀಸ್ ಬ್ಯಾಟರ್ ಜೊತೆ ಮಾತುಕತೆ ನಡೆಸಲು ಕಾತರನಾಗಿದ್ದೇನೆ ಎಂದು ಹೇಳಿದ್ದಾರೆ.
ಕೊಹ್ಲಿ ಪೋಸ್ಟ್
ವರ್ಷಗಳ ಪಯಣದಲ್ಲಿ ಎದುರಾಳಿಯಿಂದ ಸ್ನೇಹಿತನಾಗಿ ಬೆಳೆದ ಜೀವನ ಇದು. ಇಷ್ಟು ವರ್ಷಗಳ ಕಾಲ ನೀವು ಬ್ಯಾಟ್ ಮಾಡುವುದನ್ನು ಮತ್ತು ಸ್ಪರ್ಧಿಸುವುದನ್ನು ನೋಡುವುದೇ ಒಂದು ಆನಂದವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಮತ್ತು ಅದರಾಚೆಗಿನ ನಮ್ಮ ಸ್ನೇಹ ಹಾಗೂ ಒಟ್ಟಾರೆ ದೃಷ್ಟಿಕೋನಗಳನ್ನು ನಾನು ಗೌರವಿಸುತ್ತೇನೆ. ನಮ್ಮ ಪ್ರತಿ ಮಾತುಕತೆ ಮತ್ತು ಭೇಟಿಯನ್ನು ನಾನು ಸದಾ ನೆನಪಿನಲ್ಲಿಡುತ್ತೇನೆ. ಸಹೋದರ ನಿಮಗೆ ಸದಾ ಒಳ್ಳೆಯದಾಗಲಿ. ನೀವು ಮಾಡಬೇಕಾದದ್ದನ್ನು ಮಾಡಿದ್ದೀರ, ಈಗ ವಿಶ್ರಾಂತಿ ಪಡೆದು ಎಲ್ಲವನ್ನೂ ಆನಂದಿಸಲು ನೀವು ಅರ್ಹ. ಇನ್ನು ಮುಂದೆ ನಿಜವಾದ ಜೀವನ ಆರಂಭವಾಗಲಿದೆ ಎಂದು ಕೊಹ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವು ವಿಲಿಯಮ್ಸನ್ ಪಾಲಿಗೆ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 18 ರನ್ ಗಳಿಸಲಷ್ಟೇ ಶಕ್ತರಾದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ 115 ರನ್‌ಗಳ ಸೋಲನ್ನು ಅನುಭವಿಸಿತು. ಬ್ಯಾಟಿಂಗ್ ಅಂಕಿ-ಅಂಶಗಳ ಜೊತೆಗೆ ವಿಲಿಯಮ್ಸನ್ ಅವರ ಶಾಂತ ಸ್ವಭಾವದ ನಾಯಕತ್ವವೂ ಕ್ರಿಕೆಟ್ ಜಗತ್ತಿನಲ್ಲಿ ಅಪಾರ ಮೆಚ್ಚುಗೆ ಗಳಿಸಿತ್ತು.
2016 ರಿಂದ 2024 ರವರೆಗೆ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಮುನ್ನಡೆಸಿದ್ದ ವಿಲಿಯಮ್ಸನ್, ತಂಡವನ್ನು ಎರಡು ಏಕದಿನ ವಿಶ್ವಕಪ್ ಫೈನಲ್, ಮೂರು ಸೆಮಿಫೈನಲ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ 2021ರಲ್ಲಿ ನಡೆದ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಟ್ರೋಫಿಯನ್ನು ಮುಡಿಗೇರಿಸಿಕೊಂಡ ಹೆಗ್ಗಳಿಕೆ ವಿಲಿಯಮ್ಸನ್ ನಾಯಕತ್ವದ್ದಾಗಿದೆ(ಏಜೆನ್ಸೀಸ್).