ಹೈದರಾಬಾದ್: ಐಪಿಎಲ್ 2026ರ ಲೀಗ್ ಹಂತದ ಪಂದ್ಯಗಳು ದಿನದಿಂದ ದಿನಕ್ಕೆ ಅತ್ಯಂತ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಶುಕ್ರವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳ ನಡುವೆ ನಡೆದ ಪಂದ್ಯವು, ಮೈದಾನದಲ್ಲಿ ನಡೆದ ಜಗಳದಿಂದಾಗಿಯೇ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದಿದೆ. ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ (Virat Kohli) ಮತ್ತು ಎಸ್‌ಆರ್‌ಎಚ್ ತಂಡದ ಬಿರುಸಿನ ಬ್ಯಾಟರ್ ಟ್ರಾವಿಸ್ ಹೆಡ್ ನಡುವೆ ನಡೆದ ವಾಗ್ವಾದ ಮೈದಾನದಲ್ಲಿ ಕಿಚ್ಚು ಹೊತ್ತಿಸಿದೆ.
ಹ್ಯಾಂಡ್‌ಶೇಕ್ ವೇಳೆ ನಡೆದಿದ್ದೇನು?
ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಲು ಮೈದಾನದಲ್ಲಿ ಸಾಲಾಗಿ ನಿಂತಿದ್ದರು. ಈ ವೇಳೆ ಟ್ರಾವಿಸ್ ಹೆಡ್ ಅವರು ವಿರಾಟ್ ಕೊಹ್ಲಿ ಕಡೆಗೆ ಕೈಚಾಚಿ ಹ್ಯಾಂಡ್‌ಶೇಕ್ ಮಾಡಲು ಬಂದರು. ಆದರೆ, ವಿರಾಟ್ ಕೊಹ್ಲಿ ಹೆಡ್ ನೀಡಿದ ಹ್ಯಾಂಡ್‌ಶೇಕ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅವರ ಮುಖವನ್ನೂ ನೋಡದೆ ಬೇರೆಡೆ ತಿರುಗಿಕೊಂಡು ಹೋದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಎಸ್‌ಆರ್‌ಎಚ್ ಭರ್ಜರಿ ಬ್ಯಾಟಿಂಗ್
ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ತನ್ನ ಎಂದಿನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮುಂದುವರಿಸಿ, ಮೈದಾನದಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿತು. ಅಭಿಷೇಕ್ ಶರ್ಮಾರ ಆಕರ್ಷಕ ಬ್ಯಾಟಿಂಗ್, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಎಸ್‌ಆರ್‌ಎಚ್ ತಂಡವು 4 ವಿಕೆಟ್ ನಷ್ಟಕ್ಕೆ 255 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಸೋತರೂ ಗೆದ್ದ ಆರ್‌ಸಿಬಿ: ಟಾಪ್ 2 ಸ್ಥಾನ ಗ್ಯಾರಂಟಿ!
ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಆರ್‌ಸಿಬಿ ತಂಡಕ್ಕೆ ಈ ಪಂದ್ಯದಲ್ಲಿ ಕನಿಷ್ಠ 166 ರನ್ ಗಳಿಸಬೇಕಾದ ಅನಿವಾರ್ಯತೆ ಇತ್ತು. ಇಲ್ಲದಿದ್ದರೆ ಹೈದರಾಬಾದ್ 90 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಅಂತರದಿಂದ ಗೆದ್ದು 2ನೇ ಸ್ಥಾನಕ್ಕೇರುತ್ತಿತ್ತು.
ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟನ್ಸ್ ಎದುರಾಳಿ!
ಈ ಫಲಿತಾಂಶದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಲೀಗ್ ಹಂತವನ್ನು 3ನೇ ಸ್ಥಾನದೊಂದಿಗೆ ಮುಗಿಸಿ ಎಲಿಮಿನೇಟರ್ ಹಾದಿ ಹಿಡಿದಿದೆ. ಮತ್ತೊಂದೆಡೆ, ಟಾಪ್ 2 ಹಂತಕ್ಕೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ವಾಲಿಫೈಯರ್ 1 ರ ಮಹಾ ಕದನದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ (ಏಜೆನ್ಸೀಸ್).