- ಕೆಕೆಆರ್ ವಿರುದ್ಧ ಆರ್ಸಿಬಿಗೆ ಭರ್ಜರಿ ಜಯ
- 60 ಎಸೆತದಲ್ಲಿ 105 ರನ್ ಬಾರಿಸಿದ ವಿರಾಟ್ ಕೊಹ್ಲಿ
- ಕೇವಲ 1 ರನ್ನಲ್ಲೇ ವೈರಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಕಿಂಗ್
Virat Kohli: ನಿನ್ನೆ (ಮೇ.13) ನಡೆದ ಕೋಲ್ಕತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಅವರ ಶತಕದಾಟದಿಂದ ಭರ್ಜರಿ ಜಯಗಳಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಕೆಕೆಆರ್ ನೀಡಿದ 193 ರನ್ಗಳ ಗುರಿಯನ್ನು ಬೆನ್ನತ್ತಿದ ಆರ್ಸಿಬಿಗೆ ವಿರಾಟ್ ಕೊಹ್ಲಿ ಮತ್ತು ಜಾಕೆಬ್ ಬೆಥಲ್ ಜೋಡಿಯಿಂದ ಉತ್ತಮ ಓಪನಿಂಗ್ ಬರಲಿದೆ ಎಂಬ ನಿರೀಕ್ಷೆ ದುಪ್ಪಟ್ಟಾಗಿತ್ತು. ಅಂತೆಯೇ, ಪವರ್ಪ್ಲೇನಲ್ಲಿ ಬೆಥಲ್ ಸ್ಫೋಟಕ ಓಪನಿಂಗ್ ನೀಡಿದ್ದೇ ಆದರೂ ಹೆಚ್ಚು ಕಾಲ ಕ್ರೀಸ್ನಲ್ಲಿ ಉಳಿಯಲಿಲ್ಲ. ಇದರಿಂದ ಆತಂಕಕ್ಕೊಳಗಾದ ಆರ್ಸಿಬಿ ಫ್ಯಾನ್ಸ್, ಎರಡು ಪಂದ್ಯಗಳ ಡಕ್ಔಟ್ನಿಂದ ವಿರಾಟ್ ಪಕ್ಕಾ ಹೊರಬಲಿದ್ದಾರೆ. ಅಬ್ಬರದ ಇನ್ನಿಂಗ್ಸ್ ನೀಡಲಿದ್ದಾರೆ ಎಂದೇ ಆಶಿಸಿದರು. ಕಡೆಗೂ ಅಭಿಮಾನಿಗಳ ನಿರೀಕ್ಷೆಯನ್ನು ಕೊಹ್ಲಿ ಈಡೇರಿಸಿದ್ದು ವಿಶೇಷ.
ಕೆಕೆಆರ್ ಬೌಲರ್ಗಳನ್ನು ಚೆಂಡಾಡಿದ ಕೊಹ್ಲಿ, 60 ಎಸೆತಗಳಲ್ಲಿ 105 ರನ್ ಬಾರಿಸುವ ಮೂಲಕ ಅಜೇಯರಾಗಿ ಉಳಿದರು. ಶತಕ ಬಾರಿಸಿದ ವಿರಾಟ್, ಅಭಿಮಾನಿಗಳ ಖುಷಿಗೆ ತಕ್ಕಂತೆ ಸಂಭ್ರಮಿಸಲಿಲ್ಲ. ಕಾರಣ, ಈ ಮೊದಲೇ ಅವರು ತಮ್ಮ ವಿರುದ್ಧ ಸಾಲು ಸಾಲು ಟೀಕೆ, ಟ್ರೋಲ್ಗಳನ್ನು ಮಾಡಿದ್ದ ಕೆಲ ವೈರಿಗಳಿಗೆ ಮೊದಲ ರನ್ನಲ್ಲೇ ಸಂಭ್ರಮಿಸಿ, ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದರು. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡ ವಿರಾಟ್ ಕೊಹ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಿಗಳ ಟ್ರೋಲ್ಗಳಿಗೆ ಗುರಿಯಾಗಿದ್ದರು. ಡಕ್ಔಟ್ ಆದ 'ಕೊಹ್ಲಿ ಸೀದಾ ಮನೆಗೆ', 'ಇಷ್ಟೇ ಈತನದ್ದು', 'ನಿವೃತ್ತಿ ಸಮಯ ಹತ್ತಿರ' ಎಂದೆಲ್ಲ ಕೆಲವರು ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದರು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ಕೊಹ್ಲಿ, ತಮ್ಮನ್ನು ಲಾಯಲ್ ಅಭಿಮಾನಿಗಳು ಯಾಕೆ 'ಕಿಂಗ್' ಎಂದು ಕರೆಯುತ್ತಾರೆ ಎಂಬುದನ್ನು ಮೊದಲ 1 ರನ್ನಿಂದಲೇ ಸಾಬೀತುಪಡಿಸಿದರು.
ಕೊಹ್ಲಿ ಅವರ ಈ ಸಂಭ್ರಮದಲ್ಲೇ ಹೇಟರ್ಗಳಿಗೆ ಗೊತ್ತಾಯಿತು, ಇದು ನಮಗೆ ಕೊಟ್ಟ ಸಂದೇಶ ಎಂದು. ಇದರೊಟ್ಟಿಗೆ ತಾನೊಬ್ಬ ಅದ್ಭುತ ಚೇಸ್ ಮಾಸ್ಟರ್ ಎಂದೂ ಸಾಬೀತುಪಡಿಸಿದ ವಿರಾಟ್, ಶತಕ ಸಿಡಿಸಿದಾಗ ಅಂತಹ ಸಂಭ್ರಮವೇನು ಮಾಡಲಿಲ್ಲ. ಇದಕ್ಕೆ ಮುಖ್ಯ ಕಾರಣವೇ ಆರಂಭದಲ್ಲೇ ಮಾಡಿದ ಒಂದು ರನ್ ಸೆಲೆಬ್ರೆಷನ್! 3 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಬಾರಿಸಿ, ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟ 'ಕಿಂಗ್ ಕೊಹ್ಲಿ'ಗೆ ಆರ್ಸಿಬಿ ಅಭಿಮಾನಿಗಳು ತಲೆಬಾಗಿದ್ದಾರೆ.
ಪಂದ್ಯದ ವಿವರ
ಟಾಸ್ ಗೆದ್ದ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುವಂತೆ ಕೆಕೆಆರ್ಗೆ ಆಹ್ವಾನಿಸಿತು. ಅಂತೆಯೇ, ರಹಾನೆ ಪಡೆ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 192 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 60 ಎಸೆತಗಳಲ್ಲಿ 105 ರನ್ ಗಳಿಸಿ ಅಜೇಯರಾಗಿ ಉಳಿದರು. 3 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಇನ್ನು ಕೆಕೆಆರ್ ಪರ ಬೌಲರ್ ಕಾರ್ತಿಕ್ ತ್ಯಾಗಿ 3 ವಿಕೆಟ್ಗಳನ್ನು ಪಡೆದು ಮಿಂಚಿದರು.