ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್​ನ ಹೆಸರು ಬಹಿರಂಗಪಡಿಸಿದ ವಿರಾಟ್ ಕೊಹ್ಲಿ! 
ಕ್ರಿಕೆಟ್

Test cricket!: ತನ್ನ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್ ಹೆಸರು ಬಹಿರಂಗಪಡಿಸಿದ ವಿರಾಟ್ ಕೊಹ್ಲಿ!

ಮುಂಬೈ: ದಶಕದ ಕಾಲ ಭಾರತ ಟೆಸ್ಟ್ ತಂಡದ ಬೆನ್ನೆಲುಬಾಗಿದ್ದ ಬಲಗೈ ಬ್ಯಾಟರ್ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಸೇರಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ಗುರುವಾರ ನಿವೃತ್ತಿ ಪ್ರಕಟಿಸಿದರು. 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಂಗಾಮಿ ನಾಯಕನಾಗಿ ಭಾರತ ಮೊಟ್ಟ ಮೊದಲ ಬಾರಿಗೆ ಬಾರ್ಡರ್-ಗಾವಸ್ಕರ್ ಟ್ರೋಫಿ ಜಯಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಮುಂಬೈನ 38 ವರ್ಷದ ರಹಾನೆ, 2023ರಲ್ಲಿ ಕೊನೆಯದಾಗಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ರಹಾನೆ ನಿವೃತ್ತಿಯೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಒಳಗೊಂಡ ಅಗ್ರ ಕ್ರಮಾಂಕದ ಯುಗವೂ ಅಂತ್ಯ ಕಂಡಿದೆ.


12 ವರ್ಷಗಳ ವೃತ್ತಿಜೀವನದಲ್ಲಿ ‘ಜಂಟಲ್ ಮ್ಯಾನ್’ ಎಂದೇ ಕರೆಯಲ್ಪಡುವ ಅಜಿಂಕ್ಯ ರಹಾನೆ, ‘ಕ್ಯಾಪ್ ನಂ.278 ಸೈನಿಂಗ್ ಆಫ್​ ಅಡಿ ಬರಹದೊಂದಿಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮುಖಾಂತರ ನಿವೃತ್ತಿ ವಿಷಯ ಪ್ರಕಟಿಸಿದ್ದಾರೆ. ‘ಅಂತಾರಾಷ್ಟ್ರೀಯ ಮತ್ತು ಎಲ್ಲ ಮಾದರಿ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ.
ಪ್ರತಿಯೊಂದಕ್ಕೂ ಒಂದು ಆರಂಭವಿದೆ ಮತ್ತು ಪ್ರತಿಯೊಂದಕ್ಕೂ ಒಂದು ಅಂತ್ಯವಿದೆ. ಇದು ಜೀವನದ ವಾಸ್ತವ. ಸಮಯ ಬಂದಾಗ, ನೀವು ಅದನ್ನು ಗೌರವಿಸಬೇಕು ಮತ್ತು ಮುಂದುವರಿಯಬೇಕು. ಪ್ರಥಮ ದರ್ಜೆ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಸಮಯದಿಂದ, ಇಂದು ಭಾರತೀಯ ಕ್ರಿಕೆಟ್ ಅಗಾಧವಾಗಿ ಬೆಳೆದಿದೆ. ಕಳೆದ 20 ವರ್ಷಗಳಲ್ಲಿ ನಾನು ಅದರ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ಒಬ್ಬ ಭಾರತೀಯ ಕ್ರಿಕೆಟಿಗನಾಗಿ ನನ್ನ ಅಧ್ಯಾಯವು ಕೊನೆಗೊಳ್ಳುತ್ತದೆ, ಆದರೆ ಆಟದೊಂದಿಗಿನ ನನ್ನ ಪ್ರಯಾಣವು ಕೊನೆಗೊಳ್ಳುವುದಿಲ್ಲ ಎಂದು ರಹಾನೆ ಭಾವುಕರಾಗಿ ವಿಷಯ ಹಂಚಿಕೊಂಡಿದ್ದಾರೆ. ಜತೆಗೆ ಮುಂಬರುವ ದಿನಗಳಲ್ಲಿ ವೀಕ್ಷಕ ವಿವರಣೆಕಾರನಾಗಿ ಮುಂದುವರಿಯುವ ಸುಳಿವು ನೀಡಿದ್ದು, ಸದ್ಯ, ಇಂಗ್ಲೆಂಡ್ ದಿ ಹಂಡ್ರೆಡ್ ಲೀಗ್‌ನ ಕಾಮೆಂಟರಿ ಬಳಗದ ಭಾಗವಾಗಿದ್ದಾರೆ.
ಸೈಲೆಂಟ್ ಹೀರೋ 
ಶಾಂತ ಸ್ವಭಾವದ ರಹಾನೆ ಭಾರತ ಪರ ಹಲವು ಸ್ಮರಣೀಯ ಇನಿಂಗ್ಸ್‌ಗಳ ಭಾಗವಾಗಿದ್ದಾರೆ. ಆದರೆ, ಆಧುನಿಕ ಕ್ರಿಕೆಟ್‌ನ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಜತೆಗೆ ಚೇತೇಶ್ವರ ಪೂಜಾರ ಅವರ ನಡುವೆ ಎಲೆಮರೆಕಾಯಿಯಂತೆ ಉಳಿದರು. 2013ರಲ್ಲಿ ಚೊಚ್ಚಲ ಟೆಸ್ಟ್ ಆಡುವ ಒಂದೂವರೆ ವರ್ಷ ಮುಂಚಿತವಾಗಿ 2011ರಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ್ದ ಅವರು, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ಉತ್ತುಂಗಕ್ಕೇರಿದ ಅವಧಿಯಲ್ಲಿ ಅತ್ಯಂತ ವಿಶ್ವಾಸಾರ್ಹ ಭರವಸೆಯ ಬ್ಯಾಟರ್ ಆಗಿದ್ದರು.

8 ಸಾವಿರಕ್ಕೂ ಅಧಿಕ ರನ್‌ಗಳಿಸಿರುವ ರಹಾನೆ, ಶತಕಗಳಿಸಿದ ಎಲ್ಲ ಪಂದ್ಯಗಳಲ್ಲೂ ಭಾರತ ಅಜೇಯ ದಾಖಲೆ ಹೊಂದಿದೆ. ಹಂಗಾಮಿ ನಾಯಕನಾಗಿ ಆಡಿದ 6 ಪಂದ್ಯಗಳಲ್ಲೂ ಅಜೇಯ ದಾಖಲೆ ಕಾಯ್ದುಕೊಂಡಿದ್ದ ರಹಾನೆ, ಬ್ಯಾಟಿಂಗ್ ಜತೆಗೆ ಉತ್ತಮ ಫೀಲ್ಡರ್ ಆಗಿಯೂ ಹೆಸರುವಾಸಿ.  ಟೆಸ್ಟ್ ಪಂದ್ಯವೊಂದರಲ್ಲಿ ಸವಾರ್ಧಿಕ 8 ಕ್ಯಾಚ್ ಪಡೆದ ದಾಖಲೆಯೂ ಅವರದ್ದಾಗಿದೆ. ಜತೆಗೆ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ನಾಯಕ-ಆಟಗಾರನಾಗಿ ಆಸೀಸ್ ಎದುರು ಶತಕ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಸೆಂಚುರಿ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ರಹಾನೆ ಅವರದ್ದಾಗಿದೆ.


ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಭಾರತ ತಂಡ 28 ವರ್ಷಗಳ ನಂತರ ಟೆಸ್ಟ್ ಜಯಿಸುವಲ್ಲೂ ರಹಾನೆ ಶತಕ ನೆರವಾಗಿತ್ತು. 2018ರಲ್ಲಿ ಕೊನೇ ಏಕದಿನ ಪಂದ್ಯವನ್ನಾಡಿದ್ದ ರಹಾನೆ, 2023ರಲ್ಲಿ ವಿಂಡೀಸ್ ಎದುರು ಅಂತಿಮ ಟೆಸ್ಟ್ ಪಂದ್ಯವನ್ನಾಡಿದ್ದರು. ನಂತರ ವಯಸ್ಸು, ಸ್ಥಿತ್ಯಂತರ ಕಾರಣಗಳಿಂದ ಆಯ್ಕೆಗಾರರಿಂದ ಕಡೆಗಣಿಸಲ್ಪಟ್ಟಿದ್ದರು. ಆದರೆ, ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡ 42ನೇ ಬಾರಿ ರಣಜಿ ಟ್ರೋಫಿ ಗೆಲುವಿನತ್ತ ಮುನ್ನಡೆಸಿ ಸೈ ಎನಿಸಿಕೊಂಡಿದ್ದರು. 
ಐತಿಹಾಸಿಕ ವಿದೇಶಿ ಗೆಲುವಿನ ಮುಂದಾಳು
2017-18ರಲ್ಲಿ ದೊಡ್ಡ ಇನಿಂಗ್ಸ್‌ಗಳ ಕೊರತೆ ಎದುರಿಸಿದ ರಹಾನೆ, 2020-21ರಲ್ಲಿ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಜತೆಯಾಗಿ ಹಂಚಿಕೊಂಡರು. ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಆರಂಭಿಕ ಟೆಸ್ಟ್‌ನಲ್ಲಿ 36 ರನ್‌ಗೆ ಆಲೌಟ್ ಆಗಿ ಮಾನಸಿಕವಾಗಿ ಹಿನ್ನಡೆ ಕಂಡರೆ, ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಯಂ ನಾಯಕ ವಿರಾಟ್ ಕೊಹ್ಲಿ ಸರಣಿಯ ಉಳಿದ ಪಂದ್ಯಗಳನ್ನು ತಪ್ಪಿಸಿಕೊಂಡರು.
ಆಗ, ಹಂಗಾಮಿ ಸಾರಥ್ಯ ವಹಿಸಿಕೊಂಡ ರಹಾನೆ, ಮರು ಪಂದ್ಯದಲ್ಲಿ ಶತಕ ಗಳಿಸಿ ಸರಣಿ ಸಮಬಲಕ್ಕೆ ನೆರವಾದರು. ನಿರ್ಣಾಯಕ ಹಾಗೂ ಅಂತಿಮ 4ನೇ ಟೆಸ್ಟ್‌ನಲ್ಲಿ ಇನಿಂಗ್ಸ್ ಹಿನ್ನಡೆಯ ನಡುವೆಯೂ ಭಾರತ ತಂಡವನ್ನು 2-1 ಅಂತರದಿಂದ ಗೆಲುವಿನತ್ತ ಮುನ್ನಡೆಸಿದರು. ಇದು ವಿದೇಶಿ ನೆಲದಲ್ಲಿ ಭಾರತ  ಅವಿಸ್ಮರಣಿಯ  ಹಾಗೂ ಆಸೀಸ್ ನೆಲದಲ್ಲಿ 71 ವರ್ಷಗಳ ನಂತರ ಸರಣಿ ಗೆದ್ದ ಐತಿಹಾಸಿಕ ಸಾಧನೆ ಎನಿಸಿದೆ. ಕೊಹ್ಲಿ, ವೇಗಿಗಳಾದ ಬುಮ್ರಾ, ಶಮಿ ಗೈರಿನಲ್ಲೂ ಈ ಸರಣಿ ಜಯಸಿದ್ದೂ, ನಾಯಕ ರಹಾನೆಗೆ ಹೆಚ್ಚಿನ ಮನ್ನಣೆ ನೀಡಿತು.

ಅಜಿಂಕ್ಯ ರಹಾನೆ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ನಂತರ ಎಕ್ಸ್‌ನಲ್ಲಿ ಹಲವು ಮಾಜಿ-ಹಾಲಿ ಕ್ರಿಕೆಟಿಗರು ಶುಭಹಾರೈಸಿದ್ದಾರೆ. ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ,ನೀವು (ರಹಾನೆ) ಟೆಸ್ಟ್‌ನಲ್ಲಿ ನನ್ನ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್ ಎಂದು ತಿಳಿಸಿ, ಅಭಿನಂದನೆ ಹೇಳಿದ್ದಾರೆ. 



ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು ಗೆಳೆಯ ಜಿಂಕ್ಸ್ (ರಹಾನೆ). ಭಾರತೀಯ ಕ್ರಿಕೆಟ್‌ಗೆ ನೀವು ಹಲವು ಸ್ಮರಣೀಯ ಕೊಡುಗೆ ನೀಡಿದ್ದು, ಈ ಜರ್ನಿಯ ಬಗ್ಗೆ ಹೆಮ್ಮೆ ಪಡಬಹುದು. ಸ್ಲಿಪ್‌ಗಳಲ್ಲಿ ಸುರಕ್ಷಿತ ಕೈಗಳಲ್ಲಿ ಒಂದಾಗಿರುವ ನೀವು, ಟೆಸ್ಟ್‌ನಲ್ಲಿ ನನ್ನ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್. ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು  ವಿರಾಟ್ ಕೊಹ್ಲಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.