ವಿರಾಟ್ ಕೊಹ್ಲಿ  
ಕ್ರಿಕೆಟ್

ಯಾವ ಪ್ರಶಸ್ತಿಯನ್ನೂ ತಮ್ಮ ಬಳಿ ಇರಿಸಿಕೊಳ್ಳಲ್ಲ ಕೊಹ್ಲಿ! ಯಾಕೆಂದು ಕಾರಣ ತಿಳಿದ್ರೆ ನಿಜಕ್ಕೂ ಹೆಮ್ಮೆ ಪಡ್ತೀರಿ | Virat Kohli

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಗೆಲುವು
  • ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ರಿಕೆಟ್​ ಲೋಕದ ಕಿಂಗ್​​​ ವಿರಾಟ್ ಕೊಹ್ಲಿ
  • ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ಸಮಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮ ಬಳಿ ಇಟ್ಟುಕೊಳ್ಳಲ್ಲ ಎಂದ ಕಿಂಗ್
Virat Kohli: ನಿನ್ನೆ (ಜ.11) ಗುಜರಾತಿನ ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ದಾಖಲೆಗಳ ಸರದಾರ, ಚೇಸ್​ ಮಾಸ್ಟರ್​, 'ರನ್​ ಮಷಿನ್'​ ಆದ ವಿರಾಟ್​ ಕೊಹ್ಲಿ (93 ರನ್,​ 91 ಎಸೆತ, 8 ಬೌಂಡರಿ, 1 ಸಿಕ್ಸರ್) ಸ್ಫೋಟಕ ಇನ್ನಿಂಗ್ಸ್ ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ, ಪಂದ್ಯಶ್ರೇಷ್ಠ ಪ್ರಶಸ್ತಿ ಅವರ ಪಾಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು.

ಲೆಕ್ಕ ನಾನಿಡಲ್ಲ

ಪ್ಲೇಯರ್​ ಆಫ್​ ದಿ ಮ್ಯಾಚ್​ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವಿರಾಟ್​, "ಶತಕವನ್ನು ಕಳೆದುಕೊಂಡಿದ್ದಕ್ಕೆ ನನಗೆ ಸ್ವಲ್ಪವೂ ಬೇಸರವಿಲ್ಲ. ತಂಡದ ಗೆಲುವಷ್ಟೇ ನನಗೆ ತುಂಬಾ ಮುಖ್ಯ ಎಂದರು. ಇದೇ ವೇಳೆ ನೀವೆಷ್ಟು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕಿಂಗ್ ಕೊಹ್ಲಿ, ನಿಜಕ್ಕೂ ಎಷ್ಟಿದೆ? ಎಷ್ಟು ಬಂದಿವೆ ಎಂಬುದರ ಲೆಕ್ಕ ನಾನಿಡಲ್ಲ. ಅಷ್ಟಕ್ಕೂ, ನನಗೆ ಬಂದ ಪ್ರಶಸ್ತಿಗಳನ್ನು ನಾನು ನನ್ನೊಂದಿಗೆ ಇಟ್ಟುಕೊಳ್ಳುವುದಿಲ್ಲ" ಎಂದು ಹೇಳಿದರು.
ಪಂದ್ಯಗಳಿಂದ ಬಂದಿರುವ ಪ್ರತಿಯೊಂದು ಪ್ರಶಸ್ತಿಗಳನ್ನು ಗುರುಗ್ರಾಮ್​ನಲ್ಲಿರುವ ನನ್ನ ತಾಯಿಗೆ ಕಳುಹಿಸುತ್ತೀನಿ. ಇದನ್ನೆಲ್ಲ ನೋಡುತ ಅವರು ಖುಷಿ ವ್ಯಕ್ತಪಡಿಸುತ್ತಾರೆ. ಅವರಿಗೆ ನನ್ನ ಅವಾರ್ಡ್​ಗಳನ್ನು ನೋಡುವುದೇ ಒಂದು ಸಂತಸ. ಇಲ್ಲಿಯವರೆಗಿನ ಪಯಣವನ್ನು ಒಮ್ಮೆ ಮೆಲಕು ಹಾಕಿದಾಗ ಎಷ್ಟು ದೂರ ಸಾಗಿ ಬಂದಿದ್ದೀನಿ. ಇದೊಂದು ಕನಸು ಎಂದೇ ಅನಿಸುತ್ತೆ. ನನ್ನ ಸಾಮರ್ಥ್ಯ ಏನೆಂಬುದು ನನಗೆ ಮೊದಲೇ ತಿಳಿದಿತ್ತು. ಆದರೂ, ನಾನು ಈ ಹಂತಕ್ಕೆ ಬರಲು ತುಂಬಾ ಶ್ರಮಿಸಬೇಕಾಯಿತು. ನಾನು ಬಯಸಿದ್ದಕ್ಕಿಂತ ಹೆಚ್ಚಿನದನ್ನು ದೇವರು ನೀಡಿದ್ದಾನೆ. ಅದಕ್ಕಾಗಿ ನಾನು ದೇವರಿಗೆ ಎಂದಿಗೂ ಕೃತಜ್ಞನಾಗಿರುವೆ ಎಂದು ಕೊಹ್ಲಿ ಹೇಳಿದರು,(ಏಜೆನ್ಸೀಸ್).

ಮೊದಲ ಏಕದಿನ ಪಂದ್ಯದ ವಿವರ

ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತು. ಕಿವೀಸ್ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ಡ್ಯಾರೆಲ್ ಮಿಚೆಲ್ (84 ರನ್​, 71 ಎಸೆತ, 5 ಬೌಂಡರಿ, 3 ಸಿಕ್ಸರ್‌), ಹೆನ್ರಿ ನಿಕೋಲ್ಸ್ (62 ರನ್​, 69 ಎಸೆತ, 8 ಬೌಂಡರಿ) ಮತ್ತು ಡೆವೊನ್ ಕಾನ್ವೇ (56 ರನ್​, 67 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳನ್ನು ಗಳಿಸಿದರು. ಟೀಮ್ ಇಂಡಿಯಾ ಬೌಲರ್‌ಗಳಲ್ಲಿ ಸಿರಾಜ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಪಡೆದರು. ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಭಾರತದ ಪರ ವಿರಾಟ್ ಕೊಹ್ಲಿ (93 ರನ್​, 8 ಬೌಂಡರಿ, 91 ಎಸೆತ, 1 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತ 49 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಉಳಿದ ಬ್ಯಾಟ್ಸ್‌ಮನ್‌ಗಳಲ್ಲಿ, ಶುಭಮಾನ್ ಗಿಲ್ (56 ರನ್​, 71 ಎಸೆತ 3 ಬೌಂಡರಿ, 2 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ (49 ರನ್​, 47 ಎಸೆತ, 4 ಬೌಂಡರಿ, 1 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಕಿವೀಸ್ ಬೌಲರ್‌ಗಳಲ್ಲಿ ಕೈಲ್ ಜೇಮಿಸನ್ ನಾಲ್ಕು ವಿಕೆಟ್ ಪಡೆದರು. ಆದಿತ್ಯ ಅಶೋಕ್ ಮತ್ತು ಕ್ರಿಶ್ಚಿಯನ್ ಕ್ಲಾರ್ಕ್ ತಲಾ ಒಂದು ವಿಕೆಟ್ ಪಡೆದರು.