- ಆರ್‌ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಆತಂಕ
- ಆರ್‌ಸಿಬಿ-ಕೊಹ್ಲಿ ಒಂದೇ ನಾಣ್ಯದ ಎರಡು ಮುಖವೆಂದ ಫ್ರಾಂಚೈಸಿ ಸಿಇಒ
- ಮುಂದಿನ ಐಪಿಎಲ್‌ನಲ್ಲಿ ಕೊಹ್ಲಿ ಆಡುವುದು ಡೌಟ್ ಮಾತಿಗೆ ಸ್ಪಷ್ಟನೆ
Virat Kohli: ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, ಅಭಿಮಾನಿಗಳ ನೆಚ್ಚಿನ 'ಕಿಂಗ್', ವಿರಾಟ್ ಕೊಹ್ಲಿ ತಮ್ಮ ಭವಿಷ್ಯದ ಬಗ್ಗೆ ಹರಿದಾಡುತ್ತಿರುವ ಚರ್ಚೆಗಳ ಕುರಿತು ಈಗಾಗಲೇ ಕೆಲವು ಸಂದರ್ಶನದಲ್ಲಿ ಮುಖಕ್ಕೆ ಹೊಡೆದಂತೆ ಕೆಲವು ಊಹಾಪೋಹಗಳಿಗೆ ಉತ್ತರಿಸಿದ್ದಾರೆ. ಆದ್ರೆ, ಆರ್‌ಸಿಬಿ ಪರ ಆಟವನ್ನು ಮುಂದುವರಿಸುವ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಸದ್ಯ ಇದೇ ಈಗ ಅವರ ಐಪಿಎಲ್ ನಿವೃತ್ತಿ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದಕ್ಕೆ ಸ್ವತಃ ಆರ್‌ಸಿಬಿ ಸಿಇಒ ಅವರೇ ಪ್ರತಿಕ್ರಿಯಿಸಿ, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಐಪಿಎಲ್ 19ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅದ್ಭುತ ಇನ್ನಿಂಗ್ಸ್ ಆಡಿದ ಕಿಂಗ್ ಕೊಹ್ಲಿ, 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಪ್ರಸಕ್ತ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ವಿರಾಟ್, ಇಂಜುರಿ ಸಮಸ್ಯೆಯಿಂದ ತಂಡ ಸೇರಿಲ್ಲ. ಈ ಮಧ್ಯೆ, ಮುಂದಿನ ವರ್ಷದ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕೊಹ್ಲಿ ಆಡೋದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಉತ್ತರಿಸಿರುವ ಆರ್‌ಸಿಬಿ ಸಿಇಒ, ಮುಂದಿನ 4 ವರ್ಷಗಳು ಕೊಹ್ಲಿ ನಮ್ಮ ತಂಡವನ್ನು ಬಿಟ್ಟು ಹೋಗಲ್ಲ ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ನಡುವಿನ ಸಂಬಂಧವು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟ ಹಾಗೂ ದಾಖಲೆ ಎಂಬುದು ಬಹುತೇಕರಿಗೆ ಗೊತ್ತೇ ಇದೆ. ಐಪಿಎಲ್ ಆರಂಭದಿಂದಲೂ ಒಂದೇ ಫ್ರಾಂಚೈಸಿಗೆ ಆಡುತ್ತಿರುವ ಏಕೈಕ ಕ್ರಿಕೆಟಿಗ ಎಂಬ ದಾಖಲೆಯನ್ನು ಕೊಹ್ಲಿ ಸೃಷ್ಟಿಸಿದ್ದಾರೆ. ಈಗಾಗಲೇ ಸಂದರ್ಶನಗಳಲ್ಲಿ ಒತ್ತಿ ಹೇಳಿರುವ ವಿರಾಟ್, ಆರ್‌ಸಿಬಿ ಜೆರ್ಸಿಯಲ್ಲೇ ಐಪಿಎಲ್ಗೆ ಗುಡ್ಬೈ ಹೇಳುವುದಾಗಿ ತಿಳಿಸಿದ್ದಾರೆ.
ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಅವರ ಇತ್ತೀಚಿನ ಹೇಳಿಕೆ ಈಗ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿಯನ್ನು ಬೇರ್ಪಡಿಸುವುದು ಕಷ್ಟ. ಫ್ರಾಂಚೈಸಿ ಹಾಗೂ ಕೊಹ್ಲಿ ಒಂದೇ ನಾಣ್ಯದ ಎರಡು ಮುಖಗಳಂತೆ. ಅವರು ಸದಾ ಯಾವಾಗಲೂ ತಂಡದ ಪ್ರಯಾಣದ ಪ್ರಮುಖ ಭಾಗವಾಗಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರವೂ ಅವರು ಆರ್‌ಸಿಬಿಯೊಂದಿಗೆ ಒಂದಲ್ಲ ಒಂದು ರೂಪದಲ್ಲಿ ಜೊತೆಗಿರುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಕೊಹ್ಲಿ ನಿವೃತ್ತಿ ಬಗ್ಗೆ ಕೇಳಿಬಂದ ಊಹಾಪೋಹಗಳನ್ನು ತಳ್ಳಿಹಾಕಿದ ರಾಜೇಶ್ ಮೆನನ್, ವಿರಾಟ್ ಇನ್ನೂ ಮೂರರಿಂದ ನಾಲ್ಕು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡುತ್ತಾರೆ ಎಂಬ ವಿಶ್ವಾಸವಿದೆ. ಇಂದಿಗೂ ಅವರ ಫಿಟ್ನೆಸ್ ಅದ್ಭುತವಾಗಿದೆ. ರನ್‌ಗಳ ಹಸಿವು ಮತ್ತು ಗೆಲ್ಲುವ ಬಯಕೆ ಹಾಗೆಯೇ ಇರುವುದರಿಂದ ಗುಡ್ಬೈ ಮಾತು ದೂರ. ಇನ್ನೂ ಮೂರರಿಂದ ನಾಲ್ಕು ವರ್ಷಗಳ ಕಾಲ ಆಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).