RCB 
ಕ್ರಿಕೆಟ್

ನಾವು ಯಾರನ್ನೂ ಕೆಣಕಲು ಹೋಗುವುದಿಲ್ಲ, ನಮ್ಮ ಆಟವೇ ನಮಗೆ ಮುಖ್ಯ: RCB ಯಶೋಗಾಥೆ ಬಿಚ್ಚಿಟ್ಟ ಕಿಂಗ್ ಕೊಹ್ಲಿ!

ಪ್ರಮುಖ ಮುಖ್ಯಾಂಶಗಳು

  • ಗೆಲುವಿನ ರನ್ ಬಾರಿಸುವುದು ನನ್ನ ಕನಸಾಗಿತ್ತು!
  • ಯಾರೊಬ್ಬರ ಮೇಲೂ ಅವಲಂಬಿತವಾಗಿಲ್ಲ ಈ ಬಾರಿಯ ಆರ್‌ಸಿಬಿ!
  • "ನಾವು ಯಾರನ್ನೂ ಕೆಣಕುವುದಿಲ್ಲ, ಗೌರವಿಸುತ್ತೇವೆ"
  • 'ಬ್ಯಾಕ್ ಟು ಬ್ಯಾಕ್' ಟ್ರೋಫಿ ಗೆಲುವಿನ ರಹಸ್ಯ
ಅಹಮದಾಬಾದ್: "ಮೊದಲ ಐಪಿಎಲ್ ಟ್ರೋಫಿಗಾಗಿ ನಾನು ಬರೋಬ್ಬರಿ 18 ವರ್ಷ ಕಾಯಬೇಕಾಯಿತು. ಆದರೆ ಈಗ ನಮ್ಮ ಬಳಿ ಎರಡು ಟ್ರೋಫಿಗಳಿವೆ!" – ಸತತ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ರನ್ ಮಷಿನ್ ವಿರಾಟ್ ಕೊಹ್ಲಿ ಆಡಿದ ಭಾವುಕ ನುಡಿಗಳಿವು.
ಭಾನುವಾರ ನಡೆದ ಐಪಿಎಲ್ 2026ರ ಮಹಾ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಜಯಭೇರಿ ಬಾರಿಸಿದ ನಂತರ ಮಾತನಾಡಿದ ಕೊಹ್ಲಿ, ತಂಡದ ಯಶಸ್ಸಿನ ರಹಸ್ಯ, ಬದಲಾದ ರಣತಂತ್ರ ಮತ್ತು ಅಭಿಮಾನಿಗಳ ಬೆಂಬಲದ ಬಗ್ಗೆ ಮುಕ್ತವಾಗಿ ಮಾತನಾಡಿದರು. 37 ವರ್ಷದ ಪ್ರಾಯದಲ್ಲೂ ಯುವಕನಂತೆ ಓಡಿ, ಕೇವಲ 25 ಎಸೆತಗಳಲ್ಲಿ ತಮ್ಮ ಟಿ20 ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಕೊಹ್ಲಿ, ತಾವೇಕೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಗೆಲುವಿನ ರನ್ ಬಾರಿಸುವುದು ನನ್ನ ಕನಸಾಗಿತ್ತು!

ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಕೊಹ್ಲಿ, "ಇದು ನಾನು ಸದಾ ಕಾಣುತ್ತಿದ್ದ ಕನಸು. ಆರ್‌ಸಿಬಿ ಪರ ಫೈನಲ್ ಪಂದ್ಯದಲ್ಲಿ ಗೆಲುವಿನ ರನ್ ಬಾರಿಸಬೇಕು ಎಂದು ನಾನು ಸಾಕಷ್ಟು ಬಾರಿ ಯೋಚಿಸಿದ್ದೆ. ಇಂದು ಅದು ನನಸಾಗಿದೆ. ಈ ಕ್ಷಣ ಅತ್ಯಂತ ಮಧುರವಾದದ್ದು" ಎಂದು ಸಂತಸ ಹಂಚಿಕೊಂಡರು. ತಮ್ಮ ಬಿರುಗಾಳಿ ಬ್ಯಾಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಇಂದಿನ ಟಿ20 ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರತಿಭೆಯುಳ್ಳ ಯುವ ಆಟಗಾರರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವರ ವೇಗಕ್ಕೆ ಸರಿಹೊಂದುವಂತೆ ನಾವು ನಮ್ಮ ಆಟವನ್ನು ಅಪ್‌ಗ್ರೇಡ್ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ನಾನು ನನ್ನ ಆಟವನ್ನೇನೂ ಬದಲಾಯಿಸಲಿಲ್ಲ, ಬದಲಿಗೆ ನನ್ನ ಆಲೋಚನಾ ಶೈಲಿಯನ್ನು ಬದಲಾಯಿಸಿಕೊಂಡೆ. ಬೌಲರ್‌ಗಳ ಮೇಲೆ ಮುಗಿಬಿದ್ದು ರನ್ ವೇಗ ಹೆಚ್ಚಿಸುವುದು ಅನಿವಾರ್ಯವಾಗಿತ್ತು" ಎಂದರು.

ಯಾರೊಬ್ಬರ ಮೇಲೂ ಅವಲಂಬಿತವಾಗಿಲ್ಲ ಈ ಬಾರಿಯ ಆರ್‌ಸಿಬಿ!

ಈ ಬಾರಿಯ ಸೀಸನ್‌ನಲ್ಲಿ ತಮಗೆ ಅತಿ ಹೆಚ್ಚು ಸಂತೋಷ ತಂದ ವಿಚಾರವನ್ನು ಹಂಚಿಕೊಂಡ ಕೊಹ್ಲಿ, ತಂಡದ ಒಗ್ಗಟ್ಟನ್ನು ಶ್ಲಾಘಿಸಿದರು. "ಈ ಬಾರಿ ಮೊದಲ 10 ಪಂದ್ಯಗಳಲ್ಲಿ ನಮ್ಮ ತಂಡದ 8 ಬೇರೆ ಬೇರೆ ಆಟಗಾರರು 'ಪಂದ್ಯ ಶ್ರೇಷ್ಠ' (ಪ್ಲೇಯರ್ ಆಫ್ ದಿ ಮ್ಯಾಚ್) ಪ್ರಶಸ್ತಿ ಪಡೆದಿದ್ದಾರೆ. ಇದರರ್ಥ, ಇಡೀ ತಂಡ ಕೇವಲ ನನ್ನ ಹೆಗಲ ಮೇಲಷ್ಟೇ ಕುಳಿತಿಲ್ಲ. ಮೈದಾನಕ್ಕೆ ಇಳಿಯುವಾಗ ಪ್ರತಿಯೊಬ್ಬ ಆಟಗಾರನೂ ಪಂದ್ಯ ಗೆಲ್ಲಿಸಬಲ್ಲ ನಂಬಿಕೆ ಮೂಡಿಸಿದೆ. ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಜೇಕಬ್ ಡಫಿ ಮತ್ತು ಕೃಣಾಲ್ ಪಾಂಡ್ಯ ಅವರಂತಹ ವಿಶ್ವದರ್ಜೆಯ ಬೌಲಿಂಗ್ ನಮ್ಮ ಬಲವಾಗಿತ್ತು. ಯುವ ಬೌಲರ್ ರಸಿಖ್ ಸಲಾಮ್ ಈ ಸೀಸನ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು" ಎಂದು ಇಡೀ ತಂಡವನ್ನು ಕೊಂಡಾಡಿದರು.

"ನಾವು ಯಾರನ್ನೂ ಕೆಣಕುವುದಿಲ್ಲ, ಗೌರವಿಸುತ್ತೇವೆ"

ಆರ್‌ಸಿಬಿ ತಂಡದ ಯಶಸ್ಸಿನ ಹಿಂದಿರುವ ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡಿದ ಕೊಹ್ಲಿ, "ನಮ್ಮ ಮೊದಲ ಗುರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದಾಗಿತ್ತು. ಅದಾದ ಬಳಿಕ ಎದುರಾಳಿ ತಂಡ ಯಾವ ಜರ್ಸಿ ತೊಟ್ಟಿದೆ ಎಂಬುದು ನಮಗೆ ಮುಖ್ಯವಾಗಿರಲಿಲ್ಲ. ನಾವು ಪ್ರತಿಯೊಂದು ತಂಡವನ್ನು ಗೌರವಿಸುತ್ತೇವೆ, ಯಾರನ್ನೂ ಅನಾವಶ್ಯಕವಾಗಿ ಕೆಣಕಲು (Poke) ಹೋಗುವುದಿಲ್ಲ. ನಮ್ಮ ತಂಡದಲ್ಲಿ ಅನುಭವಿ ಮತ್ತು ಪ್ರಬುದ್ಧ ಆಟಗಾರರಿದ್ದಾರೆ. ದೊಡ್ಡ ಪಂದ್ಯಗಳಲ್ಲಿ ಹಿರಿಯ ಆಟಗಾರರು ಜವಾಬ್ದಾರಿ ತೆಗೆದುಕೊಳ್ಳಬೇಕು. ಗುರಿ ಬೆನ್ನಟ್ಟುವಾಗ ಎದುರಾಳಿಗಳು ನನ್ನನ್ನು ಬೇಗನೆ ಔಟ್ ಮಾಡಲು ನೋಡುತ್ತಾರೆ ಎಂಬುದು ಗೊತ್ತಿತ್ತು. ಆದರೆ ನನ್ನ ವಿಕೆಟ್ ಬಿದ್ದರೂ ಪಂದ್ಯವನ್ನು ಇನ್ನು 3-4 ಓವರ್ ಬಾಕಿ ಇರುವಂತೆಯೇ ಗೆಲ್ಲಿಸಬಲ್ಲ ಚಾಂಪಿಯನ್ ಆಟಗಾರರು ನಮ್ಮ ತಂಡದಲ್ಲಿದ್ದಾರೆ ಎಂಬ ಸಂಪೂರ್ಣ ಭರವಸೆ ನನಗಿತ್ತು" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

'ಬ್ಯಾಕ್ ಟು ಬ್ಯಾಕ್' ಟ್ರೋಫಿ ಗೆಲುವಿನ ರಹಸ್ಯ

ಕಳೆದ ವರ್ಷ (2025) ಮೊದಲ ಬಾರಿಗೆ ಟ್ರೋಫಿ ಗೆದ್ದಾಗ ನಡೆದ ಒಂದು ನೆನಪನ್ನು ಕೊಹ್ಲಿ ಬಿಚ್ಚಿಟ್ಟರು. "ನಾವು ಕಳೆದ ವರ್ಷ ಚಾಂಪಿಯನ್ ಆದಾಗ, ನಮ್ಮ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು, 'ಇದು ನಮ್ಮ ಪ್ರಯಾಣದ ಅಂತ್ಯವಲ್ಲ, ನಾವು ಮುಂದಿನ ವರ್ಷವೂ ಸತತವಾಗಿ (Back-to-back) ಟ್ರೋಫಿ ಗೆಲ್ಲಬೇಕು' ಎಂದು ಹೇಳಿದ್ದರು. ಅದೇ ಸ್ಪೂರ್ತಿಯನ್ನು ನಾವು ಉಳಿಸಿಕೊಂಡೆವು. ಇಂದಿನ ಪಂದ್ಯದ ಆರಂಭದಲ್ಲೇ ನಾನು ವೆಂಕಟೇಶ್ ಅಯ್ಯರ್ ಅವರಿಗೆ ಪವರ್‌ಪ್ಲೇನಲ್ಲೇ ಪಂದ್ಯವನ್ನು ನಮ್ಮತ್ತ ತಿರುಗಿಸಬೇಕು ಎಂದು ಹೇಳಿದ್ದೆ. ನಮ್ಮಲ್ಲಿ ಸಂಪೂರ್ಣ ಸ್ಪಷ್ಟತೆಯಿತ್ತು. ಈ ಬಾರಿ ತಂಡದಲ್ಲಿ ಅದ್ಭುತ ಸಮತೋಲನವಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ಫೈನಲ್‌ನಲ್ಲಿ ಒತ್ತಡ ಕಡಿಮೆಯಿತ್ತು. ಏಕೆಂದರೆ ನಾವು ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದೆವು. ನಮ್ಮ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆಯಿತ್ತು" ಎಂದರು.

ಮೈದಾನ ಯಾವುದೇ ಇರಲಿ, ಶೇ. 90 ರಷ್ಟು ನಮ್ಮದೇ ಹವಾ!

ಫೈನಲ್ ಪಂದ್ಯ ನಡೆದ ನರೇಂದ್ರ ಮೋದಿ ಕ್ರೀಡಾಂಗಣವು ಗುಜರಾತ್ ಟೈಟನ್ಸ್ ತಂಡದ ತವರು ಮೈದಾನವಾಗಿದ್ದರೂ, ಅಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳ ಬಗ್ಗೆ ಕೊಹ್ಲಿ ಕೃತಜ್ಞತೆ ಸಲ್ಲಿಸಿದರು. "ನಮಗೆ ಐಪಿಎಲ್‌ನಲ್ಲಿ ಕೇವಲ 7 ತವರು ಪಂದ್ಯಗಳಿಲ್ಲ, ಬದಲಿಗೆ ಎಲ್ಲಾ 14 ಪಂದ್ಯಗಳೂ ತವರು ಪಂದ್ಯಗಳೇ ಆಗಿರುತ್ತವೆ! ಇಂದು ಜಿಟಿ ತಂಡದ ಹೋಮ್ ಗ್ರೌಂಡ್ ಆಗಿದ್ದರೂ ಮೈದಾನದಲ್ಲಿದ್ದ ಶೇಕಡಾ 90 ರಷ್ಟು ಅಭಿಮಾನಿಗಳು ಆರ್‌ಸಿಬಿ ಪರವಾಗಿಯೇ ಜೈಕಾರ ಹಾಕುತ್ತಿದ್ದರು. ನಮ್ಮ ಹಿಂದೆ ಸದಾ ಇಷ್ಟೊಂದು ದೊಡ್ಡ ಅಭಿಮಾನಿ ಬಳಗ ಇರುವುದಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ" ಎಂದು ಕೊಹ್ಲಿ ಅಭಿಮಾನಿ ದೇವರಿಗೆ ಕೈಮುಗಿದರು,(ಏಜೆನ್ಸೀಸ್​).