ವಿರಾಟ್ ಕೊಹ್ಲಿ ಜತೆ ಮಿನಿ ವಿರಾಟ್
- ಇಂದಿನಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭ
- ಮೊದಲ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸುತ್ತಿದ್ದ ವೇಳೆ 'ಮಿನಿ ವಿರಾಟ್' ದರ್ಶನ
- ಕೊಹ್ಲಿಯಿಂದ ಆಟೋಗ್ರಾಫ್ ಪಡೆದ ಮಿನಿ ವಿರಾಟ್ ಈಗ ವೈರಲ್
ಗುಜರಾತ್: ಇಂದಿನಿಂದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಈ ಪಂದ್ಯಕ್ಕೂ ಮೊದಲು ಮೈದಾನದಲ್ಲಿ ಬಿರುಸಿನ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ ಆಟಗಾರರ ಪೈಕಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಎಲ್ಲರ ಗಮನಸೆಳೆದರು. ಕಾರಣ, ದಿಗ್ಗಜ ಕ್ರಿಕೆಟಿಗನನ್ನು ನೋಡುವುದೇ ಫ್ಯಾನ್ಸ್ಗಳಿಗೆ ಒಂದು ಹಬ್ಬ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲೇ ಅಭಿಮಾನಿಗಳು ಕ್ರಿಕೆಟಿಗರ ಅಭ್ಯಾಸದ ವೇಳೆ ಸ್ಟೇಡಿಯಂಗೆ ಆಗಮಿಸಿದ್ದರು. ಈ ವೇಳೆ, ಕೊಹ್ಲಿಯಿಂದ ಆಟೋಗ್ರಾಫ್ ಪಡೆಯಲು ಮುಂದೆ ಬಂದ ಪುಟ್ಟ ಪೋರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾನೆ.
ವಡೋದರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ರನ್ನು ಭೇಟಿ ಆಗಲು ಸಾಧ್ಯವಾಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಅಭ್ಯಾಸ ನಡೆಸುವ ವೇಳೆ ಅವರಿಗಾಗಿ ಕಾದು ಕುಳಿತರೆ, ಖಂಡಿತ ಒಂದು ಫೋಟೋ ಅಥವಾ ಆಟೋಗ್ರಾಫ್ಗಂತು ಮೋಸವಿಲ್ಲ ಎಂಬ ಬಲವಾದ ನಂಬಿಕೆ ಅಪಾರ ಅಭಿಮಾನಿಗಳದ್ದು. ಹೀಗೆ ಅಂದುಕೊಂಡು ಮೈದಾನದ ಬಳಿ ಹೋದ ಪುಟ್ಟ ಬಾಲಕನೊಬ್ಬ ಕೇವಲ ಆಟೋಗ್ರಾಫ್ ಪಡೆಯಲು ಹೋಗಿ ನೆಟ್ಟಿಗರು ಮಾತ್ರವಲ್ಲದೇ ವಿರಾಟ್ ಕೊಹ್ಲಿಯ ಫೇವರೇಟ್ ಆಗಿಬಿಟ್ಟಿದ್ದಾನೆ.
'ಮಿನಿ ವಿರಾಟ್' ಕಂಡ ಫ್ಯಾನ್ಸ್ ಖುಷ್
ಮೈದಾನದ ಬಳಿ ತನಗಾಗಿ ಕಾದು ನಿಂತಿದ್ದ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದ ವಿರಾಟ್ಗೆ ಒಂದು ಅಚ್ಚರಿ ಕಾದಿತ್ತು. ಆ ಅಚ್ಚರಿಯೇ ಈ ಪುಟ್ಟ ಪೋರ. ನೋಡಲು ಥೇಟ್ ವಿರಾಟ್ ಕೊಹ್ಲಿಯಂತೆಯೇ ಕಂಡ ಬಾಲಕನನ್ನು ನೋಡಿ ಒಮ್ಮೆ ವಿರಾಟ್ ಕೂಡ ಆಶ್ಚರ್ಯಚಕಿತರಾದರು. ಬಾಲ್ಯದಲ್ಲಿ ತಾನು ಹೇಗಿದ್ದೇ ಎಂಬ ನೆನಪು ಒಂದು ನಿಮಿಷ ಅವರಿಗೆ ಕಾಡಿರುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಬಾಲಕನಿಗೆ ಫೋಟೋ ಕೊಟ್ಟ ಕೊಹ್ಲಿ, ಆತನನ್ನು ನೋಡಿ ಮುಗುಳುನಗೆ ಬೀರಿದ್ದು ವಿಶೇಷ. ವಿರಾಟ್ ಮತ್ತು ಮಿನಿ ವಿರಾಟ್ ಫೋಟೋ ಮತ್ತು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ,(ಏಜೆನ್ಸೀಸ್).
ಏಕದಿನ ಸರಣಿಗೆ ಟೀಮ್ ಇಂಡಿಯಾ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.