ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ  
ಕ್ರಿಕೆಟ್

37ನೇ ವಯಸ್ಸಿನಲ್ಲಿ ಲಿಂಕ್ಡ್‌ಇನ್​ಗೆ ವಿರಾಟ್​ ಕೊಹ್ಲಿ ಎಂಟ್ರಿ: ಮೊದಲ ಪೋಸ್ಟ್​ನಲ್ಲೇ ತಮ್ಮ ಉದ್ದೇಶ ಬಿಚ್ಚಿಟ್ಟ ರನ್ ಮಷಿನ್! Virat Kohli

ಕೇವಲ ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ಉದ್ಯಮ ರಂಗದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿರುವ 37 ವರ್ಷ ವಯಸ್ಸಿನ ಕೊಹ್ಲಿ, ತಮ್ಮ ಮೊದಲ ಲಿಂಕ್ಡ್‌ಇನ್ ಪೋಸ್ಟ್ ಮೂಲಕ ದೇಶದ ಕ್ರೀಡಾ ಮತ್ತು ಉದ್ಯಮ ರಂಗದ ಬಗ್ಗೆ ತಮ್ಮ ದೂರದೃಷ್ಟಿಯನ್ನು ಹಂಚಿಕೊಂಡಿದ್ದಾರೆ.

ನವದೆಹಲಿ: ಕ್ರಿಕೆಟ್ ಲೋಕದ ರನ್ ಮಷಿನ್ ವಿರಾಟ್, ದಾಖಲೆಗಳ ಸರದಾರ, ಚೇಸ್​ ಮಾಸ್ಟರ್​ ಹಾಗೂ ಅಭಿಮಾನಿಗಳ ಕಿಂಗ್​ ಎಂದೇ ಖ್ಯಾತಿಯಾಗಿರುವ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ( Virat Kohli ) ಇದೀಗ ವೃತ್ತಿಪರ ಜಾಲತಾಣವಾದ 'ಲಿಂಕ್ಡ್‌ಇನ್' (LinkedIn)ಗೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ.

ಕೇವಲ ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ಉದ್ಯಮ ರಂಗದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿರುವ 37 ವರ್ಷ ವಯಸ್ಸಿನ ಕೊಹ್ಲಿ, ತಮ್ಮ ಮೊದಲ ಲಿಂಕ್ಡ್‌ಇನ್ ಪೋಸ್ಟ್ ಮೂಲಕ ದೇಶದ ಕ್ರೀಡಾ ಮತ್ತು ಉದ್ಯಮ ರಂಗದ ಬಗ್ಗೆ ತಮ್ಮ ದೂರದೃಷ್ಟಿಯನ್ನು ಹಂಚಿಕೊಂಡಿದ್ದಾರೆ. ಕ್ರೀಡೆಯೊಂದಿಗೆ ಉದ್ಯಮಶೀಲತೆಯನ್ನು ಬೆಸೆಯುವ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ತರುವ ಸಾಹಸಕ್ಕೆ ಕೈಹಾಕಿರುವ ಕೊಹ್ಲಿಯ ಈ ಹೊಸ ಹೆಜ್ಜೆ ಬಿಸಿನೆಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ವಿಶ್ವವಿಖ್ಯಾತ ಕ್ರಿಕೆಟಿಗನಾಗಿರುವುದರ ಜತೆಗೆ ಬ್ರ್ಯಾಂಡ್‌ಗಳನ್ನು ನಿರ್ಮಿಸುವಲ್ಲಿ ವಿಶೇಷ ಒಲವು ಹೊಂದಿರುವ ವಿರಾಟ್ ಕೊಹ್ಲಿ, ಈ ಹಿಂದೆ ಅನೇಕ ಬ್ರ್ಯಾಂಡ್‌ಗಳೊಂದಿಗೆ ಗುರುತಿಸಿಕೊಂಡಿದ್ದರು. ಆದರೆ ಇದೀಗ ಕೊಹ್ಲಿ ಅವರು ಸ್ಪೋರ್ಟ್ಸ್​ವೇರ್​ ಬ್ರ್ಯಾಂಡ್‌ ಆದ 'ಅಗಿಲಿಟಾಸ್' (Agilitas) ಕಂಪನಿಯಲ್ಲಿ ಪ್ರಮುಖ ಹೂಡಿಕೆದಾರರಾಗಿರುವುದಲ್ಲದೆ, 'ಒನ್ ಏಟ್ ವರ್ಲ್ಡ್' (one8world)ನ ಸಹ-ಸಂಸ್ಥಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಹ್ಲಿ ಅವರು ಅಗಿಲಿಟಾಸ್ ಬ್ರ್ಯಾಂಡ್‌ಗೆ ಚಾಲನೆ ನೀಡಿದ್ದು, ವಿಶ್ವ ಮಟ್ಟದ ಕ್ರೀಡಾಪಟುವೊಬ್ಬ ಉದ್ಯಮಿಯ ಗಟ್ಸ್ ಹೊಂದಿರುವುದು ಅತ್ಯಂತ ಅಪರೂಪದ ಸಂಗತಿಯಾಗಿದೆ.

ಲಿಂಕ್ಡ್‌ಇನ್‌ನಲ್ಲಿ ತಮ್ಮ ಮೊದಲ ಪೋಸ್ಟ್ ಹಂಚಿಕೊಂಡಿರುವ ಕೊಹ್ಲಿ, ಭಾರತದಲ್ಲಿ ಪ್ರತಿಯೊಂದು ಕ್ರೀಡೆಯನ್ನೂ ಕಣ್ತುಂಬಿಕೊಳ್ಳುವ, ಆಚರಿಸುವ ಮತ್ತು ಆಡುವಂತಹ ವ್ಯವಸ್ಥೆ ರೂಪುಗೊಳ್ಳಬೇಕೆಂಬ ತಮ್ಮ ಬಹುದಿನದ ಕನಸು ಎಂದಿದ್ದಾರೆ. ಭಾರತದಲ್ಲಿ ಕೇವಲ ಕ್ರೀಡಾಪಟುಗಳನ್ನು ಸೃಷ್ಟಿಸುವುದಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಸ ಪೀಳಿಗೆಯಲ್ಲಿದೆ ಎಂದು ಬಲವಾಗಿ ನಂಬಿರುವ ಕೊಹ್ಲಿ, ಉತ್ಪಾದನೆ, ಗ್ರಾಹಕ ಬ್ರ್ಯಾಂಡ್‌ಗಳು ಮತ್ತು ಕ್ರೀಡಾ ವಿತರಣೆಯನ್ನು ಒಳಗೊಂಡ ಸಮಗ್ರ ಕ್ರೀಡಾ ವೇದಿಕೆಯನ್ನು ಭಾರತದಿಂದ ನಿರ್ಮಿಸುವುದೇ ತಮ್ಮ ಅಂತಿಮ ಗುರಿ ಎಂದಿದ್ದಾರೆ.

ತಮ್ಮ ವೃತ್ತಿಜೀವನದಿಂದಲೂ ಪ್ರಗತಿಯು ಮಿತಿಗಳನ್ನು ಮೀರಿ ನಿಲ್ಲುವುದರಿಂದ ಮತ್ತು ವಿಭಿನ್ನವಾಗಿ ಯೋಚಿಸುವುದರಿಂದ ಸಿಗುತ್ತದೆ ಎಂಬ ದೃಢ ನಂಬಿಕೆಯನ್ನು ಹೊಂದಿರುವ ಕೊಹ್ಲಿ, 'ಒನ್ ಏಟ್' ಬ್ರ್ಯಾಂಡ್‌ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಸ್ವಂತ ಊರು ದೆಹಲಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ 'one8world' ಜೀವಂತ ರೂಪ ತಾಳುವುದನ್ನು ನೋಡುವುದು ತಮ್ಮ ಜೀವನದ ಅತ್ಯಂತ ಸಾರ್ಥಕ ಕ್ಷಣಗಳಲ್ಲಿ ಒಂದಾಗಿದೆ ಎಂದು ಕೊಹ್ಲಿ ಅವರು ಭಾವುಕರಾಗಿ ಸ್ಮರಿಸಿಕೊಂಡಿದ್ದಾರೆ. ತನ್ನ ದೃಷ್ಟಿಕೋನ ಸ್ಪಷ್ಟವಾಗಿದ್ದು, ನಮ್ಮೆಲ್ಲರಿಗಿಂತಲೂ ಹೆಚ್ಚು ಕಾಲ ಶಾಶ್ವತವಾಗಿ ನಿಲ್ಲುವಂತಹ ಬೃಹತ್ ವ್ಯವಸ್ಥೆಯನ್ನು ನಿರ್ಮಿಸುವ ಹಾದಿಯಲ್ಲಿ ತಾವಿರುವುದಾಗಿ ಕೊಹ್ಲಿ ಅವರು ತಿಳಿಸಿದ್ದಾರೆ.

ಪ್ರಸಿದ್ಧ ಸ್ಪೋರ್ಟ್ಸ್ ಬ್ರ್ಯಾಂಡ್ ಪೂಮಾ (Puma) ನೀಡಿದ್ದ ಸುಮಾರು 300 ಕೋಟಿ ರೂ. ಮೌಲ್ಯದ ಎಂಟು ವರ್ಷಗಳ ಒಪ್ಪಂದದ ವಿಸ್ತರಣೆಯನ್ನು ನಯವಾಗಿ ತಿರಸ್ಕರಿಸಿರುವ ಅವರು, ಹೆಚ್ಚು ರಿಸ್ಕ್ ಇರುವ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬದಲಾಗಿ ಅಗಿಲಿಟಾಸ್ ಸ್ಪೋರ್ಟ್ಸ್‌ನಲ್ಲಿ ತಮ್ಮ ಸ್ವಂತ ಬಂಡವಾಳದಿಂದ 40 ಕೋಟಿ ರೂ. ಹೂಡಿಕೆ ಮಾಡುವುದರ ಮೂಲಕ ಒನ್ ಏಟ್ ಬ್ರ್ಯಾಂಡ್ ಅನ್ನು ಇಕ್ವಿಟಿ ಹೊಂದಿರುವ ಸ್ವಂತ ಬಿಸಿನೆಸ್ ಆಗಿ ಪರಿವರ್ತಿಸುವ ದಿಟ್ಟ ಹೆಜ್ಜೆ ಇಟ್ಟಿದ್ದಾರೆ, (ಏಜೆನ್ಸೀಸ್​).